ಸಮಗ್ರ ಸುದ್ದಿ

ಚಿಂಚೋಳಿ, ಸೇಡಂ ತಾಲ್ಲೂಕಿಗೆ ಕಾಗಿಣಾ ಏತ ನೀರಾವರಿ ಯೋಜನೆ; 505 ಕೋಟಿ ರೂಪಾಯಿ ಮೊತ್ತದ ಡಿಪಿಆರ್: ಡಿಸಿಎಂ ಡಿ.ಕೆ. ಶಿವಕುಮಾರ್

Share

ಸೇಡಂ : ಚಿಂಚೋಳಿ, ಸೇಡಂ ತಾಲ್ಲೂಕಿನ ಗ್ರಾಮಗಳಿಗೆ ಅನುಕೂಲವಾಗುವ 505 ಕೋಟಿ ರೂಪಾಯಿ ಮೊತ್ತದ ಕಾಗಿಣಾ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಕರ್ನಾಟಕ‌ ನೀರಾವರಿ ನಿಗಮದ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಿ ಡಿಪಿಆರ್ ತಯಾರಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಸೇಡಂ ತಾಲ್ಲೂಕಿನ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಸರ್ಕಾರದ ಮುಂದೆ ಈ ಯೋಜನೆ ಬಗ್ಗೆ ಪ್ರಸ್ತಾವನೆ ಇಟ್ಟಿದ್ದು, ಈ ಯೋಜನೆ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ರೈತರ ಬದುಕಿಗೆ ಶಕ್ತಿ ನೀಡಬೇಕು ಎಂದು ಸಚಿವರು ಶ್ರಮಿಸುತ್ತಿದ್ದಾರೆ. ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಶರಣ ಪ್ರಕಾಶ್ ಪಾಟೀಲ್ ಅವರು ನನ್ನ ಮುಂದೆ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಏತ ನೀರಾವರಿ ಯೋಜನೆ ಸೇರಿದಂತೆ 300 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಈ ಕ್ಷೇತ್ರದಲ್ಲಿ ನಡೆಸುತ್ತಿದ್ದೇವೆ ಎಂದರು.

ಇಂದು ಈ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ್ದೇವೆ. ಶರಣಪ್ರಕಾಶ್ ಅವರಂತಹ ಸರಳ, ಸಜ್ಜನ ಶಾಸಕರನ್ನು ಪಡೆದಿರುವ ನೀವೇ ಭಾಗ್ಯವಂತರು. ಶರಣಪ್ರಕಾಶ್ ಪಾಟೀಲ್ ಅವರು ಕೇವಲ ನಿಮ್ಮ ಕ್ಷೇತ್ರದ ಆಸ್ತಿ ಮಾತ್ರವಲ್ಲ. ಕೇವಲ ನಿಮ್ಮ ಕ್ಷೇತ್ರದ ಶಾಸಕರಲ್ಲ, ಕೇವಲ ರಾಯಚೂರಿನ ಮಂತ್ರಿ ಮಾತ್ರವಲ್ಲ. ಇಡೀ ರಾಜ್ಯಕ್ಕೆ ಅವರು ಆಸ್ತಿ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ನಾನು ಅನೇಕ ಶಾಸಕರು ಹಾಗೂ ಮಂತ್ರಿಗಳನ್ನು ನೋಡಿದ್ದೇನೆ. ಪ್ರತಿಯೊಬ್ಬರ ಕಷ್ಟದ ವಿಚಾರಗಳನ್ನು ಸರಳವಾಗಿ ಬಿಡಿಸಿ, ಅಭಿವೃದ್ಧಿ ದೃಷ್ಟಿಯಿಂದ ತೀರ್ಮಾನ ಮಾಡುವ ನಾಯಕ ಶರಣಪ್ರಕಾಶ್ ಪಾಟೀಲ್ ಅವರು. ನೀವೆಲ್ಲರೂ ಅವರಿಗೆ ಮತ್ತಷ್ಟು ಶಕ್ತಿ ನೀಡಬೇಕು ಎಂದು ತಿಳಿಸಿದರು.

ಶರಣ ಪ್ರಕಾಶ್ ಪಾಟೀಲ್ ಅವರು ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದಾರೆ. ಇಂದು ಉದ್ಘಾಟನೆ ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೋಡಿದೆ. ನಿಮ್ಮ ಕ್ಷೇತ್ರದಲ್ಲಿ ಅವರು ತರಬೇತಿ ಸಂಸ್ಥೆಯನ್ನು ತಂದಿದ್ದಾರೆ. 70-80 ಕೋಟಿ ರೂ. ಮೊತ್ತದ ಈ ತರಬೇತಿ ಸಂಸ್ಥೆ ತಂದು ಜರ್ಮನ್ ಸಂಸ್ಥೆ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅಂದರೆ ಯಾರೆಲ್ಲಾ ಈ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಾರೆ ಅವರಿಗೆ 100% ಉದ್ಯೋಗ ಸಿಗುವ ಕೆಲಸವನ್ನು ಅವರು ಮಾಡಿದ್ದಾರೆ. ಇಡೀ ರಾಜ್ಯದ ಯುವಕರಿಗೆ ಹೊಸ ಮಾರ್ಗದರ್ಶನ ನೀಡುತ್ತಿದ್ದಾರೆ. ಯುವನಿಧಿ ಯೋಜನೆ ಜಾರಿ ಮಾಡಿ ಅವರ ಬದುಕಿನಲ್ಲಿ ಬದಲಾವಣೆ ತಂದಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಮುಂದಿನ ಪೀಳಿಗೆಗಳಿಗೂ ಪ್ರಯೋಜನ:

ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ದೇಶಕ್ಕೆ ದೊಡ್ಡ ಆಸ್ತಿ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಅದೇ ರೀತಿ ಖರ್ಗೆ ಅವರು ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿರುವ ಕೊಡುಗೆಯನ್ನು ಮುಂದಿನ ಪೀಳಿಗೆಗೆ ನೀಡಿದ್ದಾರೆ. ನಾವು ಇಲ್ಲದಿದ್ದರೂ ಅವರು ಹೋರಾಟ ಮಾಡಿ ಕೊಟ್ಟಿರುವ ಈ ಕೊಡುಗೆ, ಸಂವಿಧಾನದ ಹಕ್ಕು ಉಳಿಯುತ್ತದೆ” ಎಂದು ತಿಳಿಸಿದರು.

ನೀವೆಲ್ಲರೂ ಕಲಬುರ್ಗಿ ಆಸ್ಪತ್ರೆ, ವಿಮಾನ ನಿಲ್ದಾಣ ನೋಡಿದ್ದೀರಿ, ಕೇಂದ್ರ ಶಿಕ್ಷಣ ಸಂಸ್ಥೆ ನೋಡಿದ್ದೀರಿ. ಖರ್ಗೆ ಅವರು ತಮಗೆ ಸಿಕ್ಕ ಅಧಿಕಾರ ಅವಧಿಯಲ್ಲಿ ನಿಮ್ಮ ಋಣ ತೀರಿಸುವ ಕೆಲಸ ಮಾಡಿದ್ದಾರೆ. ಅವರು ಸುದೀರ್ಘ 50 ವರ್ಷಗಳ ಕಾಲ ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ, ಇಡೀ ರಾಜ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ 1.11 ಕೋಟಿ ಹಟ್ಟಿ ಹಾಗೂ ತಾಂಡಾ ಜನರಿಗೆ ತಮ್ಮ ಆಸ್ತಿ ದಾಖಲೆಗಳನ್ನು ಉಚಿತವಾಗಿ ನೀಡುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದು ತಿಳಿಸಿದರು.

ಶರಣ ಪ್ರಕಾಶ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ಕಚೇರಿಗೆ ಜಮೀನು ನೀಡಿದ್ದಾರೆ. ನಿಮ್ಮೆಲ್ಲರ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ. ನಮ್ಮ ಇಡೀ ಸರ್ಕಾರ ಅವರ ಜೊತೆಗಿದೆ ಎಂದರು.


Share

You cannot copy content of this page