ಸಮಗ್ರ ಸುದ್ದಿ

ಮೇಲ್ಸೇತುವೆಗೆ 5 ಪೋರ್ಟಲ್ ಪಿಯರ್ ಗಳು ಅಳವಡಿಸಲು ಸೆಂಟ್ ಜಾನ್ಸ್ ಜಾಗ ಮಾರ್ಕ್ ಮಾಡಿ ಕೂಡಲೆ ಕೆಲಸ‌ ಪ್ರಾರಂಭಿಸಿ : ಮಹೇಶ್ವರ್ ರಾವ್

Share

ಬೆಂಗಳೂರು: ಈಜೀಪುರದ ಪ್ರಮುಖ ಮೇಲ್ಸೇತುವೆಗೆ 5 ಪೋರ್ಟಲ್ ಪಿಯರ್ ಗಳು ಅಳವಡಿಸುವ ಸಲುವಾಗಿ ಸೆಂಟ್. ಜಾನ್ಸ್ ಜಾಗ ಮಾರ್ಕ್ ಮಾಡಿ ಕೂಡಲೆ ಕೆಲಸ‌ ಪ್ರಾರಂಭಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಈಜೀಪುರ ಮೇಲ್ಸೇತುವೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ವಿಭಾಗ, ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ಜೊತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸೆಂಟ್ ಜಾನ್ ಜಾಗದ ಬಳಕೆ ಸಮಸ್ಯೆ ನಿವಾರಣೆ:

ಈಜೀಪುರ ಮೇಲ್ಸೇತುವೆ ಕಾಮಗಾರಿ ಸದ್ಯ ವೇಗವಾಗಿ ನಡೆಯುತ್ತಿದ್ದು, ಕೇಂದ್ರೀಯ ಸದನ್ ಕಡೆಯಿಂದ ಈಜೀಪುರ ಕಡೆಗೆ ಸಾಗುವ ಎಡ ಭಾಗದಲ್ಲಿ ಸೆಂ. ಜಾನ್ಸ್ ಬಳಿ 5 ಪೋರ್ಟಲ್ ಪಿಯರ್ ಅಳವಡಿಸಲು ಸೆಂ.ಜಾನ್ಸ್ ನ ಸ್ವಲ್ಪ ಜಾಗದ ಬಳಕೆ ಅವಶ್ಯಕತೆಯಿರುತ್ತದೆ.

ಪಾದಚಾರಿ ಮಾರ್ಗ ಹಾಗೂ ಸೆಂ.ಜಾನ್ಸ್ ಕಾಪೌಂಡ್ ಗೋಡೆಯ ಭಾಗದಲ್ಲಿ ಪೋರ್ಟಲ್ ಪಿಯರ್ ಹೊಂದಿಕೊಂಡಂತೆ ನಿರ್ಮಾಣ ಮಾಡಬೇಕಿದೆ. ಈ ಸಂಬಂಧ ಪೋರ್ಟಲ್ ಪಿಯರ್ ಕಾರ್ಯವನ್ನು ನಡೆಸಲು ಸೆಂ. ಜಾನ್ಸ್ ಸಂಸ್ಥೆರವರೊಂದಿಗೆ ಇಂದು ಮಾತುಕತೆ ನಡೆಸಿದ್ದು, ಜಾಗದ ಬಳಕೆಗೆ ಸಮ್ಮತಿಸಿ ಇಂದು ಒಪ್ಪಿಗೆ ನೀಡಿದ್ದು, ಅದರಂತೆ ಮಾರ್ಕ್ ಮಾಡಿ ಕೂಡಲೆ ಕಾಮಗಾರಿ ಪ್ರಾರಂಭಿಸಲು ಅಭಿಯಂತರರು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

5 ಪೋರ್ಟಲ್ ಪಿಯರ್ ಗಳ ಕಾರ್ಯ ನಡೆಯುವ ವೇಳೆ ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕು. ಅಲ್ಲದೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾಮಗ್ರಿಗಳಿಗಾಗಿ ಸ್ಥಳಾವಕಾಶ ನೀಡಲು ತಿಳಿಸಿ, ಕಾಮಗಾರಿ ಪೂರ್ಣಗೊಂಡ ಕೂಡಲೆ ಗೋಡೆ ನಿರ್ಮಿಸಿಕೊಡಲು ಸೂಚನೆ ನೀಡಿದರು.

ಇನ್ನು ಸೆಂ. ಜಾನ್ಸ್ ಭಾಗದಲ್ಲಿ ರ್ಯಾಂಪ್ ನಿರ್ಮಿಸಲು ಭೂಸ್ವಾಧೀನ ಪಡಿಸಿಕೊಳ್ಳುವ ಜಾಗಕ್ಕೆ ಟಿಡಿಆರ್ ನೀಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಆ ಜಾಗವನ್ನು ಸಾಧ್ಯವಾದಷ್ಟು ಬೇಗ ಹಸ್ತಾಂತರ ಮಾಡಿಕೊಂಡು ಕಾಮಗಾರಿಯನ್ನು ಶೀಘ್ರವಾಗಿ ನಡೆಸಲು ಸೂಚನೆ ನೀಡಲಾಯಿತು.

ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್ ರವರು ಮಾತನಾಡಿ, ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕಿದ್ದು, ಈಗಾಗಲೇ 645 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಲಾಗಿದೆ. ಇನ್ನು 117 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕಿದೆ. ಜೊತೆಗೆ 490 ಸೆಗ್ಮೆಂಟ್ ಗಳನ್ನು ಜೋಡಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಸಂಚಾರಿ ಪೊಲೀಸ್ ವಿಭಾಗದ ಜಂಟಿ ಆಯುಕ್ತರಾದ ಕಾರ್ತಿಕ್ ರೆಡ್ಡಿ, ದಕ್ಷಿಣ ವಿಭಾಗದ ಡಿಸಿಪಿ, ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ನಿರ್ದೇಶಕರಾದ ರೆವ್., ಫಾ. ಜೆಸುದಾಸ್ ಆರ್., ಹಣಕಾಸು ಸಹ ನಿರ್ದೇಶಕರಾದ ರೆವ್. ಫಾ. ಟೋನಿ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page