ಬೆಂಗಳೂರು: ಕಾನೂನು ಇಲಾಖೆಯ ಅಭಿಪ್ರಾಯದಂತೆ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯೆಂದು ಘೋಷಣೆ ಮಾಡುವ ಕುರಿತು ವಿವಿಧ ರಾಜ್ಯಗಳಲ್ಲಿ ಎರಡನೇ ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಅಧ್ಯಯನ ತಂಡವನ್ನು ರಚಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಂದು ವಿಧಾನಸಭೆಯಲ್ಲಿ ಪುತ್ತೂರು ವಿಧಾನಸಭಾ ಸದಸ್ಯ ಅಶೋಕ್ ಕುಮಾರ್ ರೈ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು
ಈ ಅಧ್ಯಯನ ಸಮಿತಿ ತಂಡವು ಸಂಪೂರ್ಣವಾಗಿ ಅಧ್ಯಯನ ನಡೆಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ತಂಡವು ಆಂಧ್ರಪ್ರದೇಶ ರಾಜ್ಯಕ್ಕೆ ನಿಯೋಜಿಸಲು ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ.
ಅಧ್ಯಯನ ತಂಡವು ಆಂಧ್ರಪ್ರದೇಶ ರಾಜ್ಯದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಅನುಸರಿಸಿರುವ ಮಾನದಂಡಗಳ ಕುರಿತು ಪರಿಶೀಲಿಸಲು ಆಂಧ್ರಪ್ರದೇಶ ರಾಜ್ಯಕ್ಕೆ 2026 ನೇ ಜನವರಿ 19 ಮತ್ತು 20 ರಂದು ಭೇಟಿ ನೀಡಿದ್ದು ಅಧ್ಯಯನ ತಂಡವು ವರದಿ ಸಲ್ಲಿಸಬೇಕಾಗಿದೆ.
ಅಧ್ಯಯನ ತಂಡ ವರದಿ ನೀಡಿದ ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯೆಂದು ಘೋಷಣೆ ಮಾಡುವ ಕುರಿತು ಅಂತಿಮಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿ ತಿಳಿಸಿದರು.
