ಸಮಗ್ರ ಸುದ್ದಿ

ಕೆಜಿಎಫ್‌ನಲ್ಲಿ ಎಪಿಎಂಸಿಗೆ 25 ಎಕರೆ ಮಂಜೂರು | ರೂ. 3.85 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ- ಸಚಿವ ಶಿವಾನಂದ ಪಾಟೀಲ

Share

ಬೆಂಗಳೂರು: ಕೆಜಿಎಫ್‌ನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 25 ಎಕರೆ ಹೊಸದಾಗಿ ಭೂಮಿ ಮಂಜೂರಾಗಿದ್ದು, ಒಟ್ಟು 3.85 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರ್‌ಐಡಿಎಫ್‌ -29ರ ಯೋಜನೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿಸಲಾಗುತ್ತಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಬಾಕಿ ಉಳಿದಿರುವ ಕಲ್ಲು, ಗುಡ್ಡವನ್ನು ರಸ್ತೆ ಮಟ್ಟಕ್ಕೆ ತೆಗೆದು ಸಮತಟ್ಟು ಮಾಡಲು ಎಪಿಎಂಸಿಯಿಂದ 1.35 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯ ಎಪಿಎಂಸಿಗಳ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ 9.54 ಕೋಟಿ ರೂ. ವಿನಿಯೋಗಿಸಲಾಗಿದೆ . 2022-23ನೇ ಸಾಲಿನಲ್ಲಿ 3.59 ಕೋಟಿ ರೂ., 2023-24ನೇ ಸಾಲಿನಲ್ಲಿ 3.71 ಕೋಟಿ ರೂ. ಹಾಗೂ 2024-25ನೇ ಸಾಲಿನಲ್ಲಿ 2.23 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಕೋಲಾರ ಎಪಿಎಂಸಿಯಲ್ಲಿ 3.97 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಹರಾಜು ಕಟ್ಟೆ ನಿರ್ಮಿಸಲಾಗಿದೆ. ವೇಮಗಲ್‌ ಉಪಮಾರುಕಟ್ಟೆ ಪ್ರಾಂಗಣದಲ್ಲಿ 1.18 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಆರ್‌ಸಿಸಿ ಚರಂಡಿ, ಮುಚ್ಚು ಹರಾಜು ಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

ಬಂಗಾರಪೇಟೆ ಎಪಿಎಂಸಿಯಲ್ಲಿ ಈಗಾಗಲೇ ಗೋದಾಮು, ಶ್ರಮಿಕ ಭವನ, ರೈತ ಭವನ, ಹರಾಜುಕಟ್ಟೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 16.14 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡಲಾಗುತ್ತಿದೆ.

ಮಾಲೂರು ಎಪಿಎಂಸಿಯಲ್ಲಿ ಕಾಂಕ್ರೀಟ್‌ ರಸ್ತೆ, ಮುಚ್ಚು ಹರಾಜುಕಟ್ಟೆ ನಿರ್ಮಿಸಿ, ಹೈಮಾಸ್ಟ್‌ ಲೈಟ್‌ ಮತ್ತು ಬೀದಿ ದೀಪಗಳನ್ನು ಅಳವಡಿಸಲಾಗಿದೆ.

2025-26ನೇ ಸಾಲಿನಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದ ಆಡಳಿತ ಕಚೇರಿ ಮುಂಭಾಗ ಕಾಂಪೌಂಡ್‌ ಗೋಡೆ ಒಡೆದು ಕಾಲುದಾರಿಯನ್ನು ಮುಚ್ಚುವ ಕಾಮಗಾರಿಯನ್ನು 10.84 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಎರಡನೇ ತನಿಖಾ ದ್ವಾರದ ಮುಂಭಾಗ ಜೋಡಿ ರಸ್ತೆಗೆ ಬಾಕಿ ಉಳಿದಿರುವ ಕಡೆ ಒಂದು ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ನಿಂದ ಪ್ರಾಂಗಣಕ್ಕೆ ನೀರು ಸರಬರಾಜು ಮಾಡಲು 23 ಲಕ್ಷ ರೂ. ವೆಚ್ಚದಲ್ಲಿ ಇನ್‌ ಲೆಟ್‌ ಮತ್ತು ಔಟ್ ಲೆಟ್ ಅಳವಡಿಸಿ ಪೈಪ್‌ ಲೈನ್‌ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಮುಳಬಾಗಿಲು ಎಪಿಎಂಸಿಯ ಎನ್‌ ವಡ್ಡಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 1.45 ಕೋಟಿ ರೂ. ವೆಚ್ಚದಲ್ಲಿ ಬಾಕಿ ಉಳಿದಿರುವ ರಸ್ತೆ, ಚರಂಡಿ ಮತ್ತು ಕಾಂಪೌಂಡ್‌ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಬಂಗಾರಪೇಟೆ ಎಪಿಎಂಸಿ ಅಭಿವೃದ್ಧಿಗೂ ಆದ್ಯತೆ ನೀಡಲಿದ್ದು, ನಿಮ್ಮ ಪ್ರಸ್ತಾವನೆಗಳನ್ನು ಕಳುಹಿಸಿಕೊಡಿ, ಆದ್ಯತೆ ಮೇಲೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಅವರು ನಾರಾಯಣಸ್ವಾಮಿ ಅವರಿಗೆ ಹೇಳಿದರು.

ಬಂಗಾರಪೇಟೆ ಮಾತ್ರ ಅಲ್ಲ, ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಬಹುತೇಕ ಎಪಿಎಂಸಿಗಳು ದುಸ್ಥಿತಿಗೆ ತಲುಪಿದ್ದವು. ನಮ್ಮ ಸರ್ಕಾರ ಕಾಯ್ದೆ ಮರುಸ್ಥಾಪನೆ ಮಾಡಿದ ನಂತರ ಮತ್ತೆ ಚೇತರಿಕೆ ಕಾಣುತ್ತಿವೆ. ಆದಾಯ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.

ಬಂಗಾರಪೇಟೆ ಎಪಿಎಂಸಿಯಲ್ಲಿ ಆಡಳಿತ ಮಂಡಳಿ ಇದೆ. ನೀವು ಪ್ರಸ್ತಾವನೆಗಳಿಗೆ ಅನುಮೋದನೆ ಪಡೆದು ಕಳುಹಿಸಿಕೊಡಿ. ನಿಮ್ಮ ಬೇಡಿಕೆಯ ಹತ್ತು ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುವುದು. ಗಮನಕ್ಕೆ ತಂದಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


Share

You cannot copy content of this page