ಸಮಗ್ರ ಸುದ್ದಿ

ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಯೋಜನೆ ಶೀಘ್ರ ಪೂರ್ಣ- ಸಚಿವ ಬಿ.ಎಸ್. ಸುರೇಶ್

Share

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ರೇಣುಕಾಸಾಗರ ಜಲಾಶಯದಿಂದ 220 ಎಂಎಲ್ ಡಿ ಮತ್ತು ನೀರಸಾಗರ ಜಲಾಶಯದಿಂದ 25 ಎಂಎಲ್ ಡಿ ಒಟ್ಟು 245 ಎಂ.ಎಲ್.ಡಿ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ನೀರಿನ ಅಗತ್ಯತೆ ಪೂರೈಸಲು ಹೊಸದಾಗಿ ಕುಸ್ಸೆಂಪ್ ಯೋಜನೆಯಲ್ಲಿ ರೇಣುಕಾಸಾಗರ ಜಲಾಶಯದಿಂದ 43 ಎಂಎಲ್ ಡಿ ನೀರು ಸರಬರಾಜು ಮಾಡಲು ಯೋಜಿಸಲಾಗಿದ್ದು ಅಮ್ಮಿನಭಾವಿಯಲ್ಲಿ ಜಲಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಸದಸ್ಯ ಅರವಿಂದ್ ಬೆಲ್ಲದ್ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಳ ವಿಳಂಬಕ್ಕೆ ಕಾರಣ, ಗುತ್ತಿಗೆದಾರರ ವಿರುದ್ಧ ಕೈಗೊಳ್ಳಲಾದ ಕ್ರಮ ಹಾಗೂ ಕುಡಿಯುವ ನೀರು ಪೂರೈಕೆಗೆ ಸಮರ್ಪಕವಾದ ವ್ಯವಸ್ಥೆಯನ್ನು ಒದಗಿಸುವ ಕುರಿತು ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

14 ಮೇಲೆತ್ತರದ ಜಲಸಂಗ್ರಹಾರ ಮತ್ತು 9 ನೆಲಮಟ್ಟದ ಜಲಸಂಗ್ರಹಾರಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.75 ಸಗಟು ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿರುತ್ತದೆ. ಮಾರ್ಚ್ 2026ರೊಳಗೆ ಪೂರ್ಣಗೊಳಿಸಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಉದ್ದೇಶಿಸಿದೆ.

ಕಾಮಗಾರಿ ಪ್ರಾರಂಭದ ಅವಧಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗು, ಇತರೆ ಇಲಾಖೆಗಳಾದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬಿ.ಆರ್.ಟಿ.,ಎಸ್ ಇಲಾಖೆಯಿಂದ ಹಾಗೂ ರಕ್ಷಣಾ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ನೀಡುವಲ್ಲಿ ಉಂಟಾಗಿರುವ ವಿಳಂಬವಾಗಿರುತ್ತದೆ.

ಇದಲ್ಲದೇ ಇತರೆ ಇಲಾಖೆಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಸದರಿ ಯೋಜನೆಯನ್ನು ಗುತ್ತಿಗೆ ಅವಧಿಯಲ್ಲಿ ಅನುಷ್ಠಾನಗೊಳಿಸಲು ಕ್ಲಿಷ್ಟವಾಗಿರುವ ಕಾರಣ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬವಾಗಿತ್ತು,

ಗುತ್ತಿಗೆದಾರರು ಮಾನವ ಸಂಪನ್ಮೂಲ ಹಾಗೂ ಕಾಮಗಾರಿಗೆ ಬೇಕಾಗಿರುವ ಸಾಮಗ್ರಿಗಳನ್ನು ಪೂರೈಸುವಲ್ಲಿ ವಿಳಂಬ ಮಾಡಿರುವುದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ. ಗುತ್ತಿಗೆದಾರರ ವಿಳಂಬಕ್ಕೆ ಗುತ್ತಿಗೆ ಕರಾರಿನ ನಿಯಮಾನುಸಾರ ಹುಬ್ಬಳ್ಳಿ-ಧಾರವಾಡ ಕುಸ್ಸೆಂಪ್ ಯೋಜನೆಯಡಿ ರೂ.93.10 ಕೋಟಿಗಳ ದಂಡವನ್ನು ವಿಧಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಯೋಜನಾ ನಗರದಲ್ಲಿ ಒಟ್ಟು 1126 ಕಿಮೀ ಕುಡಿಯುವ ನೀರು ಸರಬರಾಜು ಕೊಳವೆ ಮಾರ್ಗ ಅಳವಡಿಸಿ, 22,566 ಗೃಹ ನಳ ಸಂಪರ್ಕಗಳನ್ನು ನೀಡಿ 6220 ಗೃಹ ಸಂಪರ್ಕಗಳನ್ನು ಮಧ್ಯಂತರ ನೀರು ಸರಬರಾಜುವಿನಿಂದ ನಿರಂತರ 24×7 ನೀರು ಸರಬರಾಜಿಗೆ ಪ್ರಾಯೋಗಿಕವಾಗಿ ಪರಿವರ್ತಿಸಲಾಗಿದೆ ಮತ್ತು 7545 ಮನೆಗಳಿಗೆ ಹೊಸದಾಗಿ ಕೊಳವೆ ಮಾರ್ಗ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ.

ವಿದ್ಯುತ್ ಸರಬರಾಜು ವ್ಯತ್ಯಯವಾಗಿ ನೀರು ಸರಬರಾಜು ವ್ಯವಸ್ಥೆಯಲ್ಲಿ ವಿಳಂಬವಾದಾಗ ಸದರಿ ಪ್ರದೇಶಗಳಿಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಸದರಿ ಯೋಜನೆಯನ್ನು ಜೂನ್ -2027ರೊಳಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿವೇಶನ ಮುಗಿದ ನಂತರ ಈ ಕುರಿತು ಸಭೆ ಕರೆದು ಇತ್ಯರ್ಥಪಡಿಸಲಾಗುವುದು ಎಂದು ಸಚಿವ ಬಿ.ಎಸ್.ಸುರೇಶ್ ಅವರು ತಿಳಿಸಿದರು.


Share

You cannot copy content of this page