ಬೆಂಗಳೂರು:ಬೆಂಗಳೂರಿನ ಲುಲು ಮಾಲ್‍ನಲ್ಲಿ ನಡೆಯುತ್ತಿರುವ 17 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜನರು ನೀಡುತ್ತಿರುವ ಪ್ರತಿಕ್ರಿಯೆ ಕಂಡು ಬಹಳ ಖುಷಿಯಾಗಿದೆ. ಈ ವರ್ಷ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ ಎಂದು ಮಾತನಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಹೇಳಿದರು.
ಕಳೆದ ವರ್ಷಕ್ಕಿಂತಲೂ ಅದ್ಭುತವಾಗಿ ಚಿತ್ರೋತ್ಸವ ನಡೆಯುತ್ತಿದೆ, ಈ ವರ್ಷ ಇಷ್ಟು ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದರೆ ಕಳೆದ ವರ್ಷದ ಕಾರ್ಯಕ್ರಮವನ್ನು ಜನರು ಮೆಚ್ಚಿದ್ದಾರೆ ಎಂದರ್ಥ. ಈ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ರೆಸ್ಟೋರ್ ಮಾಡಿರುವ ಸಿನಿಮಾಗಳನ್ನು ಕೂಡ ಪ್ರದರ್ಶನ ಮಾಡಲಾಗುತ್ತಿದೆ. ಕಳೆದ ವರ್ಷವೇ ಇದನ್ನು ಮಾಡುವ ಯೋಚನೆಯಿತ್ತು. ಆದರೆ, ಸರಿಯಾದ ಕ್ಯಾಮರಾ ಸಿಗದಿದ್ದ ಕಾರಣ ಈ ವರ್ಷಕ್ಕೆ ಮುಂದೂಡಲಾಗಿತ್ತು ಎಂದು ಹೇಳಿದ್ದಾರೆ. ಕಳೆದ ವರ್ಷದವರೆಗೂ ಒರಾಯನ್ ಮಾಲ್ ನಲ್ಲಿ ಆಗುತ್ತಿತ್ತು. ಅದು ಖುಷಿಯಿದೆ. ಆದರೆ, ಅಲ್ಲಿ ಹೊರಗಿನ ಜನರಿಗೆ, ಸಾರ್ವಜನಿಕರಿಗೆ ಇಂತಹದೊಂದು ದೊಡ್ಡ ಮಟ್ಟದ ಫೆಸ್ಟಿವಲ್ ನಡೆಯುವುದು ಸರಿಯಾಗಿ ಗೊತ್ತಾಗುತ್ತಿರಲಿಲ್ಲ. ಹಾಗೆಯೇ ವಿಶಾಲವಾದ ಜಾಗವೂ ನಮಗೆ ಸಿಗುತ್ತಿರಲಿಲ್ಲ. ಇಲ್ಲಿ ಸಿನಿಮಾ ಸ್ಕ್ರೀನಿಂಗ್ ಜೊತೆಗೆ ಆಕರ್ಷಣೀಯ ಪ್ರದರ್ಶನಗಳಿಗೂ ಅವಕಾಶವಿದೆ. ಇದನ್ನು ಜನರು ಬಹಳ ಸಂಭ್ರಮದಿಂದ ಸ್ವೀಕರಿಸಿದ್ದಾರೆ ಎಂದು ಹೇಳಿದರು.
ಚಿತ್ರೋತ್ಸವ ಹೈಲೈಟ್ಸ್:
ಲುಲು ಮಾಲ್‍ನ ಮೂರನೇ ಮಹಡಿಯಲ್ಲಿರುವ ಸುಮಾರು 11 ಸ್ಕ್ರೀನ್‍ಗಳಲ್ಲಿ ಸತತವಾಗಿ ಸಿನಿಮಾ ಪ್ರದರ್ಶನವಿರಲಿದೆ. ಕನ್ನಡ ಚಿತ್ರರಂಗಕ್ಕೆ 91 ವರ್ಷ ಆದ ಸಂಭ್ರಮದಲ್ಲಿ ಈವರೆಗಿನ ಪಯಣವನ್ನು ನೆನಪಿಸುವ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗಿದೆ. ಮೂರನೇ ಮಹಡಿಯ ಗೋಡೆ ಮೇಲೆ ಪ್ರಪಂಚದ ಶ್ರೇಷ್ಠ ಕಲಾವಿದರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ʼವಾಲ್ ಆಫ್ ಆನರ್ʼ ಮೂಲಕ ತಾರೆಯರ ಛಾಯಾಚಿತ್ರ ಹಾಕಲಾಗಿದೆ. ಕೆಳ ನೆಲಮಹಡಿಯಲ್ಲಿ ಗೋಷ್ಠಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ನಿತ್ಯವೂ ಈ ಸ್ಥಳದಲ್ಲಿ ವಿವಿಧ ವಿಷಯಗಳ ಕುರಿತು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಲುಲು ಮಾಲ್ ಹೊರಾಂಗಣ ಆವರಣದಲ್ಲಿ ವಿಶೇಷವಾಗಿ ಶೋಲೆ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಓಡಿಸಿದ್ದ ಬೈಕ್ ಪ್ರದರ್ಶನಕ್ಕೆ ಇಡಲಾಗಿದೆ. ಸಿನಿಮಾ ಪ್ರೇಮಿಗಳು, ಕಾಲೇಜು ವಿದ್ಯಾರ್ಥಿಗಳು, ಯವಕ-ಯುವತಿಯರು ಇದರ ಬಳಿ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಹಾಗೆಯೇ ಇದೇ ಹೊರಾಂಗಣ ಆವರಣದಲ್ಲಿ ಓಪನ್ ಸ್ಕ್ರೀನಿಂಗ್ ಏರ್ಪಡಿಸಲಾಗಿದೆ.
ಏನಿದು ಓಪನ್ ಸ್ಕ್ರೀನಿಂಗ್: ಹಳೇ ಕಾಲದಲ್ಲಿ 35 ಎಂ.ಎಂ ಲೆನ್ಸ್ ಅಲ್ಲಿ ಟೆಂಟ್ ಸಿನಿಮಾ ನೆನಪಿಸುವಂತಹ ಒಪನ್ ಸ್ಕ್ರೀನಿಂಗ್ ಕೂಡ ಮಾಡಲಾಗಿದೆ. ಡಾ.ರಾಜಕುಮಾರ್, ಶಂಕರ್ ನಾಗ್ ಸೇರಿದಂತೆ ಹಲವು ಸಿನಿಮಾಗಳನ್ನು ನಿತ್ಯವೂ ಸಂಜೆ 7 ಗಂಟೆಗೆ ಸರಿಯಾಗಿ ಲುಲು ಮಾಲ್ ಹೊರಾಂಗಣದ ಆವರಣದಲ್ಲಿ ಪ್ರದರ್ಶನ ಮಾಡಲಾಗುತ್ತದೆ.
35 ಎಂಎಂ ಕ್ಯಾಮರಾ ತಂದು ಅದರ ಮೂಲಕವೇ ಪ್ರದರ್ಶನ ಮಾಡಲಾಗುತ್ತದೆ ಎನ್ನುವುದು ಆಕರ್ಷಕ ವಿಷಯ. ಇದಕ್ಕೆ ಯಾವುದೇ ಟಿಕೆಟ್ ಹಾಗೂ ಪಾಸ್ ಇಲ್ಲದರಿವುದರಿಂದ ಸಾರ್ವಜನಿಕರು ಕೂಡ ಬಂದು ಯಾವುದೇ ರೀತಿಯ ತೊಂದರೆ ಮಾಡದೆ ವೀಕ್ಷಣೆ ಮಾಡುವ ಅವಕಾಶವಿದೆ.
ಓಪನ್ ಸ್ಕ್ರೀನಿಂಗ್ ಅಲ್ಲಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು:
ಜನವರಿ 31 ರಂದು – ಒಂದಾನೊಂದು ಕಾಲದಲ್ಲಿ, ಫೆಬ್ರವರಿ 1 ರಂದು – ಬಂಧನ, ಫೆಬ್ರವರಿ 2 ರಂದು – ಪ್ರೇಮದ ಕಾಣಿಕೆ, ಫೆಬ್ರವರಿ 3 ರಂದು – ಅಮೆರಿಕ ಅಮೆರಿಕ, ಫೆಬ್ರವರಿ 4 ರಂದು – ಮುಂಗಾರು ಮಳೆ, ಫೆಬ್ರವರಿ 5 ರಂದು – ಸತ್ಯ ಹರೀಶ್ಚಂದ್ರ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
