ಸಮಗ್ರ ಸುದ್ದಿ

ನೀವು ಬೆಂಗಳೂರಿನ ಮಕ್ಕಳು, ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ | ತಾಲೂಕಿನಲ್ಲಿ 15 ಸಿಎಸ್ಆರ್ ಶಾಲೆಗಳ ನಿರ್ಮಾಣ

Share

ಕನಕಪುರ : ನೀವೆಲ್ಲರೂ ಬೆಂಗಳೂರು ಜಿಲ್ಲೆಯ ಮಕ್ಕಳು. ಕನಕಪುರ, ರಾಮನಗರದ ಮಟ್ಟದಲ್ಲಿ ಸ್ಪರ್ಧೆ ಮಾಡುವುದಲ್ಲ, ನಿಮ್ಮ ಸ್ಪರ್ಧೆ ಏನಿದ್ದರೂ ಜಾಗತಿಕ ಮಟ್ಟದಲ್ಲಿ. ಇದು ನಿಮ್ಮ ಗಮನದಲ್ಲಿರಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.

ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದಲ್ಲಿ ಶನಿವಾರ ನಡೆದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಇಲ್ಲಿರುವ ಮಕ್ಕಳು ಹಾಗೂ ಇವರನ್ನು ತಯಾರು ಮಾಡಿದ ತಂದೆ ತಾಯಿ, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ನಿಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ. ವಿದೇಶಿಗರು ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದ್ದಾರೆ. ನಾನು ಇತ್ತೀಚೆಗೆ ದಾವೋಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿ ಮಾತನಾಡಿದೆ. ನಮ್ಮ ಬೆಂಗಳೂರು ಹಾಗೂ ಇಲ್ಲಿನ ಯುವಕರ ಪ್ರತಿಭೆ ಬಗ್ಗೆ ನಾನು ಅಲ್ಲಿ ಮಾತನಾಡಿ ಬಂದಿದ್ದೇನೆ. ನಮ್ಮ ಯುವಕರು ಬಹಳ ಪ್ರತಿಭಾವಂತರು, ನೀವು ನಮ್ಮಲ್ಲಿ ಹೂಡಿಕೆ ಮಾಡಿ ಬನ್ನಿ ಎಂದು ಆಹ್ವಾನ ನೀಡಿದ್ದೇನೆ ಎಂದು ತಿಳಿಸಿದರು.

ನಾನು ಓದುವಾಗ ನಮ್ಮ ಗುರುಗಳು ಒಂದು ಮಾತು ಹೇಳುತ್ತಿದ್ದರು. ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ. ಅಂದರೆ ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ ಸಿಗುತ್ತದೆ ಎಂದರ್ಥ ಎಂದರು.

ನಾನು ಪದವಿ ಪಡೆದಿದ್ದು, ನನ್ನ 47ನೇ ವಯಸ್ಸಿನಲ್ಲಿ. ಅಂದರೆ 2008ರಲ್ಲಿ. ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವಾಗ ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಪಕ್ಷದಿಂದ ಚುನಾವಣೆಗೆ ಟಿಕೆಟ್ ನೀಡಲಾಯಿತು. ನಾನು ಬಂಗಾರಪ್ಪ, ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ಸಚಿವನಾದಾಗಿಂತ ನನಗೆ ಪದವಿ ಪಡೆದಾಗ ಹೆಚ್ಚು ಖುಷಿಯಾಯಿತು. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಸಕ್ತಿಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ ಎಂದು ಹೇಳಿದರು.

ನಿಮ್ಮಂತ ಯುವಕರಿಗೆ ಪ್ರೋತ್ಸಾಹ ನೀಡಿ, ನೀವು ಭವಿಷ್ಯದಲ್ಲಿ ಡಿ.ಕೆ. ಶಿವಕುಮಾರ್, ಪ್ರದೀಪ್ ಈಶ್ವರ್, ಡಿ.ಕೆ. ಸುರೇಶ್, ರಮೇಶ್ ಅರವಿಂದ್ ಆಗಬೇಕು. ರುಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ವಿದ್ಯೆ. ಈ ವಿದ್ಯೆ ನಿಮಗೆ ಸಿಗಲಿ ಎಂದು ಪ್ರೋತ್ಸಾಹ ನೀಡಲು ನಾವು ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ನೀವು ನಿಮ್ಮ ಬದುಕಿನಲ್ಲಿ ಕನಸು ಕಾಣಬೇಕು, ಆ ಕನಸು ನನಸಾಗಿಸಲು ಇಚ್ಛೆ ಇರಬೇಕು, ಅದಕ್ಕೆ ಶಿಸ್ತುಬದ್ಧರಾಗಿರಬೇಕು, ಅದಕ್ಕಾಗಿ ನೀವು ನಿಮ್ಮನ್ನು ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೀವು ಪುಸ್ತಕವನ್ನು ಓದಿದರೆ ಸಾಲದು, ನಿಮ್ಮ ಊರು, ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶದ ಹೆಸರು ಉಳಿಸಿಕೊಂಡು ಹೋಗಬೇಕು. ನಿಮ್ಮ ಶಾಲೆ ಋಣ ತೀರಿಸಬೇಕು. ನಮ್ಮ ತಾಲ್ಲೂಕಿನಲ್ಲಿ ಸಿಎಸ್ಆರ್ ನಿಧಿಯಲ್ಲಿ 15 ಅತ್ಯಾಧುನಿಕ ಶಾಲೆಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಪ್ರತಿ ಶಾಲೆಗೆ 15 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಸಿಗುವ ಶಿಕ್ಷಣ, ನಿಮಗೆ ಇಲ್ಲೇ ಸಿಗುವಂತೆ ಮಾಡಲಾಗುತ್ತಿದೆ. ನಾನು ರಾಜಕಾರಣಿ, ಉದ್ಯಮಿ ಇರಬಹುದು. ಕನಕಪುರದ ಮಕ್ಕಳ ವಿದ್ಯಾಭ್ಯಾಸ ಭವಿಷ್ಯದ ಬಗ್ಗೆ ಕಾಳಜಿ ಇದೆ. ನೀವು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರೆ, ನನ್ನ ಮಗಳು ಐಶ್ವರ್ಯ ಬೆಳೆದಷ್ಟೇ ಸಂತೋಷವಾಗುತ್ತದೆ ಎಂದು ತಿಳಿಸಿದರು.

ನೀವು ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯನ್ನು ಆಲೋಚಿಸಿ ಇಡಬೇಕು. ನೀವು ಕೇವಲ ಪದವಿ ಪಡೆದು ಉದ್ಯೋಗಿಗಳಾಗುವುದಲ್ಲ. ಹತ್ತಾರು, ನೂರಾರು ಜನರಿಗೆ ಉದ್ಯೋಗ ನೀಡುವಂತಹ ಉದ್ಯಮಿಗಳಾಗಿ ಬೆಳೆಯಬೇಕು. ನಿಮ್ಮ ಪೋಷಕರು ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಬೆಳೆಸಿದ್ದಾರೆ, ಹೀಗಾಗಿ ನಾನು ನಿಮ್ಮ ಋಣ ತೀರಿಸಲು, ಡಿಕೆಎಸ್ ಟ್ರಸ್ಟ್ ಮೂಲಕ ನಿಮ್ಮ ಸೇವೆ ಮಾಡಲಾಗುತ್ತಿದೆ. ಕನಕಪುರದ ಮಕ್ಕಳು ದೇಶದ ಆಸ್ತಿಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. ಈ ಪ್ರತಿಭಾ ಪುರಸ್ಕಾರ, ಮುಂದೆ ನೀವುಗಳು ಹತ್ತಾರು ಜನರನ್ನು ಗುರುತಿಸಿ ಪುರಸ್ಕಾರ ನೀಡವಂತೆ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.


Share

You cannot copy content of this page