ಸಮಗ್ರ ಸುದ್ದಿ

ನವೋದ್ಯಮ ವ್ಯವಸ್ಥೆ ಬಲಪಡಿಸಲು ಸಂಸ್ಥಾಪಕರ ನೇತೃತ್ವದ ಸಂಶೋಧನೆ | ಬೂಸ್ಟರ್ ಕಿಟ್‌ನಂತಹ ಉಪಕ್ರಮಗಳನ್ನು ಉತ್ತಮಗೊಳಿಸಲು ಜ್ಯುಪಿಟರ್ ಮೆಟಾ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ

Share

ಬೆಂಗಳೂರು: ರಾಜ್ಯದ ಸ್ಟಾರ್ಟ್ ಅಪ್ (ನವೋದ್ಯಮ) ವ್ಯವಸ್ಥೆ ಬಲಪಡಿಸುವ ಮತ್ತು ಮುಂದಿನ ದಿನಗಳಲ್ಲಿ ಸ್ಟಾರ್ಟ್ ಅಪ್‌ಗಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಸಮಗ್ರ, ಗೋಪ್ಯತೆಗೆ ಆದ್ಯತೆ ನೀಡುವ ಪ್ರಾಥಮಿಕ ಸಂಶೋಧನಾ ಉಪಕ್ರಮವನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರವು ಇಂದು ದತ್ತಾಂಶ ಮತ್ತು ಒಳನೋಟಗಳ ನೇತೃತ್ವದ ಸಂಸ್ಥೆಯಾದ ಜ್ಯುಪಿಟರ್ ಮೆಟಾ ಸಂಸ್ಥೆ ಜೊತೆಗಗೆ ತಿಳಿವಳಿಕೆ ಒಪ್ಪಂದ (ಎಂಒಯು) ಒಂದಕ್ಕೆ ಸಹಿ ಹಾಕಿದೆ.

ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಯೋಟೆಕ್ನಾಲಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಬಯೊ ಟೆಕ್ನಾಲಜಿ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಲಾ ಎನ್. ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಅವರು ರಾಜ್ಯ ಸರ್ಕಾರದ ಪರವಾಗಿ ಮತ್ತು ಜ್ಯುಪಿಟರ್ ಮೆಟಾ ಕಂಪನಿಯ ಪ್ರತಿನಿಧಿ ಮತ್ತು ಸಂಸ್ಥೆಯ ಸಹ ಸಂಸ್ಥಾಪಕಿ ಮಾನಸಾ ರಂಜನ್ ಅವರು ಈ ಒಪ್ಪಂದಕ್ಕೆ ಸಹಿ ಮಾಡಿದರು.

ಈ ಪ್ರೊ ಬೋನೊ ಒಪ್ಪಂದದಡಿ, ಜ್ಯುಪಿಟರ್ ಮೆಟಾ ಸಂಸ್ಥೆಯು ಕರ್ನಾಟಕದಾದ್ಯಂತ ಅದರಲ್ಲೂ ವಿಶೇಷವಾಗಿ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ, ಸಂಸ್ಥಾಪಕರ ಅಗತ್ಯಗಳು, ವ್ಯವಸ್ಥೆಯಲ್ಲಿನ ಕುಂದು ಕೊರತೆಗಳು, ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಅವಕಾಶಗಳ ಕುರಿತು ಕಾರ್ಯಸಾಧ್ಯವಾದ ಒಳನೋಟಗಳನ್ನು ಸೃಷ್ಟಿಸಲು, ಸ್ಟಾರ್ಟ್ ಅಪ್‌ಗಳ ಸಂಸ್ಥಾಪಕರು, ಬಂಡವಾಳ ಹೂಡಿಕೆಯಲ್ಲಿ ಆಸಕ್ತಿಯುಳ್ಳ ಉತ್ಸಾಹಿಗಳು ಮತ್ತು ವಿದ್ಯಾರ್ಥಿಗಳನ್ನು ಸೇರಿದಂತೆ ಎರಡು ಸಾವಿರ ಭಾಗೀದಾರರನ್ನು ಒಳಗೊಂಡ, ಆಳವಾದ ದತ್ತಾಂಶ ಆಧಾರಿತ ಅಧ್ಯಯವನ್ನು ನಡೆಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಯೋಟೆಕ್ನಾಲಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಭಾರತದ ಸ್ಟಾರ್ಟ್ ಅಪ್ ಕಂಪನಿಗಳ ರಾಜಧಾನಿಯಾಗಿ ಕರ್ನಾಟಕದ ನಾಯಕತ್ವವನ್ನು ನಿರಂತರವಾಗಿ ಮತ್ತು ಅಂಕಿ ಅಂಶ ಆಧಾರಿಯ ನೀತಿ ನಿರೂಪಣೆಯ ಮೂಲಕ ಬಲಪಡಿಸಬೇಕು. ಜ್ಯುಪಿಟರ್ ಮೆಟಾ ಸಂಸ್ಥೆಯ ಜೊತೆಗಿನ ಈ ಸಹಯೋಗವು ಬೆಂಗಳೂರಿನಾಚೆಗಿನ ನಗರಗಳು ಮತ್ತು ಪ್ರದೇಶಗಳಲ್ಲಿ ಸ್ಥಾಪಕರ ಅಗತ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇತರ ಪ್ರಮುಖ ವ್ಯವಸ್ಥೆಗಳ ವಿರುದ್ಧ ನಮ್ಮನ್ನು ಮಾನದಂಡವಾಗಿಸಲು ಮತ್ತು ರಾಜ್ಯದಾದ್ಯಂತ ಸ್ಟಾರ್ಟ್ ಅಪ್ ಕ್ಲಸ್ಟರ್‌ಗಳ ಮುಂದಿನ ಅಲೆಯನ್ನು ಬೆಂಬಲಿಸಲು ಕರ್ನಾಟಕ ಬೂಸ್ಟರ್ ಕಿಟ್‌ನಂತಹ ಉಪಕ್ರಮಗಳನ್ನು ಬಲಪಡಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಈ ಅಧ್ಯಯನವು ರಾಜ್ಯದ ಸ್ಟಾರ್ಟ್ ಅಪ್ ವ್ಯವಸ್ಥೆಯನ್ನು ಇತರ ಪ್ರಮುಖ ನವೋದ್ಯಮ ಕೇಂದ್ರಗಳೊAದಿಗೆ ಹೋಲಿಸುತ್ತದೆ ಮತ್ತು ಖಾಸಗಿ ವೇಗವರ್ಧಕ ಉಪಕ್ರಮಗಳು ಮತ್ತು ರಾಜ್ಯದ ಪ್ರಯತ್ನಗಳಿಗೆ ಹೋಲಿಸಿದರೆ ಸರ್ಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಜ್ಯುಪಿಟರ್ ಮೆಟಾ ಅಧ್ಯಯನದ ಪ್ರಮುಖ ಆದ್ಯತಾ ವಲಯಗಳು:

ಕರ್ನಾಟಕದ ಬಹುತೇಕ ಉದ್ಯಮಗಳು ಸೇರಿದಂತೆ ದೇಶದಾದ್ಯಂತ ಎರಡು ಸಾವಿರ ಸ್ಟಾರ್ಟ್ ಅಪ್ ಸಂಸ್ಥಾಪಕರು, ನೂರು ಹೂಡಿಕೆದಾರರು ಮತ್ತು ಒಂದು ನೂರು ವಿದ್ಯಾರ್ಥಿಗಳ ಸಮೀಕ್ಷೆ.

ವಿವಿಧ ಹಂತಗಳಲ್ಲಿ ವಲಯಗಳಲ್ಲಿ, ಹಣಕಾಸು ಹೂಡಿಕೆ ಹಂತಗಳಲ್ಲಿ ಹಾಗೂ ಭೌಗೋಳಿಕ ವ್ಯಾಪ್ತಿಯಲ್ಲಿ ಸ್ಟಾರ್ಟ್ ಅಪ್ ಉದ್ಯಮಿಗಳ ಸ್ಥಾಪಕರ ಅವಶ್ಯಕತೆಗಳ ಬಗ್ಗೆ ಅಧ್ಯಯನ ಮಾಡುವುದು.

ಕರ್ನಾಟಕ ಬೂಸ್ಟರ್ ಕಿಟ್ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಪ್ರತಿಷ್ಠಿತ ಯೋಜನೆಗಳ ಪರಿಣಾಮಗಳ ಮೌಲ್ಯಮಾಪನ.

ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸುವುದಕ್ಕಾಗಿ ಬಂಡವಾಳ ಆಕರ್ಷಿಸಲು, ಬಂದ ಉದ್ಯಮಿಗಳನ್ನು ಹಿಡಿದಿಟ್ಟುಕೊಳ್ಳಲು ಮತ್ತು ಸ್ಟಾರ್ಟ್ ಅಪ್ ಉದ್ಯಮಗಳನ್ನು ಮೇಲ್ದರ್ಜೆಗೆ ಏರಿಸಲು ಇರುವ ಅವಕಾಶಗಳನ್ನು ಗುರುತಿಸುವುದು.

ಕರ್ನಾಟಕದ ಸ್ಟಾರ್ಟ್ ಅಪ್ ಪರಿಸರವನ್ನು ಇತರ ಪ್ರತಿಸ್ಪರ್ಧಿ ರಾಜ್ಯಗಳ ಸ್ಟಾರ್ಟ್ ಅಪ್ ಪರಿಸರದ ಜತೆಗೆ ಸಮನಾಗಿ ನಿಲ್ಲುವಂತೆ ಕಾರ್ಯಕ್ರಮಗಳನ್ನು ರೂಪಿಸುವುದು.
ಈ ಒಪ್ಪಂದದ ಭಾಗವಾಗಿ ಜ್ಯುಪಿಟರ್ ಮೆಟಾ, ಸಮಗ್ರ ಒಳನೋಟಗಳ ವರದಿ, ಕಾರ್ಯನಿರ್ವಾಹಕ ಪ್ರಸ್ತುತಿ, ಸಂವಾದಾತ್ಮಕ ಡ್ಯಾಷ್ ಬೋರ್ಡ್ ಮತ್ತು ಸರ್ಕಾರಕ್ಕೆ ದತ್ತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಕಾರ್ಯತಂತ್ರದ ಕಾರ್ಯಕ್ರಮ ವಿನ್ಯಾಸವನ್ನು ಸಕ್ರಿಯಗೊಳಿಸುವ ನೀತಿ ಸಂಕ್ಷಿಪ್ತ ರೂಪವನ್ನು ಒಳಗೊಂಡಂತೆ ಕಾರ್ಯಸಾಧ್ಯವಾದ ಫಲಿತಾಂಶ ಆಧಾರಿತ ವರದಿಯನ್ನು ನೀಡಲು ಜ್ಯುಪಿಟರ್ ಮೆಟಾ ಒದಗಿಸುತ್ತದೆ.

ಈ ಒಪ್ಪಂದವು ಭಾರತದ ಪ್ರಮುಖ ಸ್ಟಾರ್ಟ್ ಅಪ್ (ನವೋದ್ಯಮ) ಮತ್ತು ತಂತ್ರಜ್ಞಾನ ಕೇಂದ್ರವಾಗಿ ತನ್ನ ನಾಯಕತ್ವವನ್ನು ಉಳಿಸಿಕೊಳ್ಳಲು ಕರ್ನಾಟಕ ಸರ್ಕಾರದ ದತ್ತಾಂಶ, ಸಂಶೋಧನೆ ಮತ್ತು ನಾವೀನ್ಯತೆ- ನೇತೃತ್ವದ ಪಾಲುದಾರಿಕೆಗಳನ್ನು ಬಳಸಿಕೊಳ್ಳುವ ಬದ್ಧತೆಯನ್ನು ಒತ್ತಿ ಹೇಳುತ್ತದೆ.


Share

You cannot copy content of this page