ಸಮಗ್ರ ಸುದ್ದಿ

ಜಾತಿ-ಜಾತಿ, ಧರ್ಮ – ಧರ್ಮಗಳ ನಡುವೆ ಸಂಘರ್ಷ: ಸಚಿವ ಶಿವರಾಜ್ ತಂಗಡಗಿ ವಿಷಾದ

Share

ಬೆಂಗಳೂರು: ಇಂದು ಸಮಾಜದಲ್ಲಿ ಜಾತಿ- ಜಾತಿ ಹಾಗೂ ಧರ್ಮ-ಧರ್ಮಗಳ‌ ನಡುವೆ ನಡೆಯುತ್ತಿರುವ ಚರ್ಚೆ ಮತ್ತು ಸಂಘರ್ಷಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ‌ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್. ಎಸ್.ತಂಗಡಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿ ಮತ್ತು ಯುವ ಜನತೆಯ ಭವಿಷ್ಯದ ಬಗ್ಗೆ ಚಿಂತನೆ ನಡೆಯಬೇಕು. ಇಂತಹ ಜಯ‌ಂತಿಗಳ ಮೂಲಕ ಮಹಾನ್ ಪುರಷರ ಸಾಧನೆಗಳನ್ನು ಸಮಾಜಕ್ಕೆ ತಿಳಿಸಬೇಕು.‌ ಇದರಿಂದ ಸಮಾಜ ಸುಧಾರಣೆ ಆಗಲಿದೆ ಎಂದರು.

ಢೋಂಗಿತನ‌ಕ್ಕೆ ವಿರೋಧ:
ಮಡಿವಾಳ‌ ಮಾಚಿದೇವರು ಸಮಾಜದಲ್ಲಿನ ತಾರತಮ್ಯ ಮತ್ತು ಢೋಂಗಿತನವನ್ನು ವಿರೋಧಿಸುವ‌ ಮೂಲಕ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದ್ದರು. ಇಂತಹ ವೈಚಾರಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಮೂಡಬೇಕು ಎಂದು‌ ಕಿವಿಮಾತು‌ ಹೇಳಿದರು.‌

ಇನ್ನು ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ಮಾಚಿದೇವರು ಹನ್ನೆರಡನೆಯ ಶತಮಾನದ ಒಬ್ಬ ಶ್ರೇಷ್ಠ ಶರಣರು. ಮನುಷ್ಯನಿಗೆ ಅಚ್ಚುಕಟ್ಟುತನ, ಶುಚಿ ಅತ್ಯಂತ ಮುಖ್ಯವಾದದ್ದು. ಅದು ಮಾನಸಿಕ ಶುಚಿತ್ವವೂ ಹೌದು, ದೈಹಿಕ ಶುಚಿತ್ವವೂ ಹೌದು, ಪರಿಸರ ಶುಚಿತ್ವವೂ ಹೌದು ಹಾಗೂ ಸಾಮಾಜಿಕ ಬಾಂಧವ್ಯಗಳ ಶುಚಿತ್ವವೂ ಹೌದು ಎಂದು‌‌ ಹೇಳಿದ್ದರು ಎಂದು‌ ನೆನೆದರು.‌

ಮಾತ್ರವಲ್ಲದೆ, ಕಾಯಕ ಮಾಡುತ್ತಲೇ ವಚನಗಳನ್ನು ರಚಿಸಿ ಹಾಡುವುದು, ಶರಣ ಸಂಸ್ಕೃತಿಯನ್ನು ಪಾಲಿಸುವುದು ಶರಣರ ಧರ್ಮ. ವೀರವ್ಯಕ್ತಿಯಾಗಿ ತೋರಿಬರುವ ಮಡಿವಾಳ ಮಾಚಯ್ಯನವರು ಸದಾಕಾಲಕ್ಕೂ ಸರ್ವರಿಗೂ ಮಾರ್ಗದರ್ಶಕರಾಗಿದ್ದಾರೆ. ಬಸವಣ್ಣನವರ ಆಶಯದ ಸಮಸಮಾಜದ ಸಾಕಾರತೆಗಾಗಿ, ಅವರ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಕ್ರಾಂತಿಗಳಲ್ಲಿ ಇವರು ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ‌‌ ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್, ಮಡಿವಾಳ‌ ಅಭಿವೃದ್ಧಿ ನಿಗಮದ ಅಧ್ಯಕ್ಷ ನಂಜಪ್ಪ, ಸಮುದಾಯದ ಮುಖಂಡ ಗೋಪಾಲ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮಡಿವಾಳ ಸಮುದಾಯದ ಗುರು ಪೀಠಕ್ಕೆ ಒಂದು ಎಕರೆ ಜಾಗ:
ಹಿಂದುಳಿದ ವರ್ಗಗಳ ಸಮುದಾಯದ ಎಲ್ಲಾ ಮಠಗಳಿಗೆ ಬೆಂಗಳೂರಿನ ಸುತ್ತಮುತ್ತ ಒಂದೆರೆಡು ಎಕರೆ ಜಾಗ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮಡಿವಾಳ ಸಮುದಾಯದ ಗುರು ಪೀಠಕ್ಕೆ ಒಂದು ಎಕರೆ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇನ್ನು ಕಳೆದ ಸಾಲಿನ ಬಜೆಟ್ ನಲ್ಲಿ ಮಡಿವಾಳ ಅಭಿವೃದ್ಧಿ ನಿಗಮಕ್ಕೆ ರೂ. 34 ಕೋಟಿ ಅನುದಾನ ನೀಡಲಾಗಿದೆ.‌ ಅದಕ್ಕಿಂತ ಹಿಂದೆ ರೂ.15 ಕೋಟಿ ನೀಡಲಾಗಿತ್ತು. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದ್ದಲ್ಲಿದ್ದ ವೇಳೆ ನಿಗಮದಿಂದ ಒಂದೇ ಒಂದು ಯೋಜನೆಯನ್ನು ನೀಡಿಲ್ಲ ಎಂದು ತಿಳಿಸಿದರು.

ಕೆಂಗೇರಿಯಲ್ಲಿರುವ ಗುರುಪೀಠದ ಮೂರು ಎಕರೆಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮುಖಂಡರು ಕಾರ್ಯಕ್ರಮದಲ್ಲಿ ಸಚಿವರ ಗಮನಕ್ಕೆ ತಂದರು.‌‌ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು.‌ ಒತ್ತುವರಿಯಾಗಿರುವ ಜಾಗವನ್ನು ಗುರು ಪೀಠಕ್ಕೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.


Share

You cannot copy content of this page