ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲೋಕಭವನದಲ್ಲಿ ಆಯೋಜಿಸಿದ್ದ ವಿಶೇಷ ದೀಪಾಲಂಕಾರವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಕಲ್ಪಿಸಲಾಗಿದ್ದ ಭೇಟಿಯ ಕೊನೆಯ ದಿನವಾದ ಮಂಗಳವಾರ, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸಾರ್ವಜನಿಕರ ಭೇಟಿಯ ಕಾರ್ಯಕ್ರಮವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ರಾಜ್ಯಪಾಲರು ಲೋಕಭವನಕ್ಕೆ ಆಗಮಿಸಿದ್ದ ಸಾರ್ವಜನಿಕರೊಂದಿಗೆ ಕುಳಿತು ಮೈಸೂರು ಪೊಲೀಸ್ ಬ್ಯಾಂಡ್ ತಂಡದ ಮಧುರ ಸಂಗೀತವನ್ನು ಆಲಿಸಿ, ಸಂಗೀತಗಾರರನ್ನು ಪ್ರೋತ್ಸಾಹಿಸಿದರು.
ಮೈಸೂರು ಪೊಲೀಸ್ ಬ್ಯಾಂಡ್ ತಂಡವು ಸತತ ಮೂರು ದಿನಗಳ ಕಾಲ ಲೋಕಭವನದಲ್ಲಿ ತನ್ನ ಮಧುರ ಸಂಗೀತದ ಮೂಲಕ ಸಾರ್ವಜನಿಕರನ್ನು ರಂಜಿಸಿತು. ಈ ಸಂದರ್ಭದಲ್ಲಿ ಮೈಸೂರು ಪೊಲೀಸ್ ಬ್ಯಾಂಡ್ ಮಾಸ್ಟರ್ ಆರ್. ದಾಸಪ್ಪ ಅವರ ನೇತೃತ್ವದ ತಂಡಕ್ಕೆ ಗೌರವಾನ್ವಿತ ರಾಜ್ಯಪಾಲರು ಅಭಿನಂದನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಿದರು.
ಇದೇ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಪೊಲೀಸ್ ಬ್ಯಾಂಡ್ ಮಾಸ್ಟರ್ ಆರ್. ದಾಸಪ್ಪ ಅವರನ್ನು ರಾಜ್ಯಪಾಲರು ಸನ್ಮಾನಿಸಿ ಗೌರವಿಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಲೋಕಭವನದ ದೀಪಾಲಂಕಾರವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಕಲ್ಪಿಸಲಾದ ಈ ಅವಕಾಶಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾರ್ವಜನಿಕರು ಲೋಕಭವನಕ್ಕೆ ಭೇಟಿ ನೀಡಿ ದೀಪಾಲಂಕಾರವನ್ನು ವೀಕ್ಷಿಸುವುದರ ಜೊತೆಗೆ ಮೈಸೂರು ಪೊಲೀಸ್ ಬ್ಯಾಂಡ್‌ನ ಸಂಗೀತ ಕಾರ್ಯಕ್ರಮವನ್ನು ಆನಂದಿಸಿದರು.
