ಬೆಂಗಳೂರು: ರಾಷ್ಟ್ರ ನಿರ್ಮಾಣದಲ್ಲಿ ಎಂಜಿನಿಯರುಗಳ ಪಾತ್ರ ಮಹತ್ವದ್ದಾಗಿದ್ದು, ಸದಾ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
53 ಎಂಜಿನಿಯರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ನೇಮಕಾತಿ ಪತ್ರ ವಿತರಿಸಿದ ಈಶ್ವರ ಖಂಡ್ರೆ
ವಿಧಾನಸೌಧದಲ್ಲಿಂದು ನೂತನವಾಗಿ ಆಯ್ಕೆಯಾಗಿರುವ 13 ಸಹಾಯಕ ಎಂಜಿನಿಯರುಗಳು ಮತ್ತು 40 ಕಿರಿಯ ಎಂಜಿನಿಯರುಗಳಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಎಂಜಿನಿಯರುಗಳು ರಾಷ್ಟ್ರ ನಿರ್ಮರ್ತೃಗಳಾಗಿದ್ದು, ಅವರು ವಿನ್ಯಾಸ ಮಾಡುವ ಅಣೆಕಟ್ಟೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ರಸ್ತೆ, ಸೇತುವೆ ಇತ್ಯಾದಿ ಗಟ್ಟಿಮುಟ್ಟಾಗಿ, ದೀರ್ಘಾವಧಿ ಬಾಳಿಕೆ ಬಂದರೆ, ಜನ ಅವರನ್ನು ಖಂಡಿತಾ ಸ್ಮರಿಸುತ್ತಾರೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಹೊಸದಾಗಿ ಎಂಜಿನಿಯರುಗಳಾಗಿ ನೇಮಕಗೊಂಡಿರುವ ನಿಮಗೆ ಮಹಾತ್ಮಾ ಗಾಂಧೀ ಅವರ ಕನಸಿನ ಗ್ರಾಮ ನೈರ್ಮಲ್ಯ ಮತ್ತು ಗ್ರಾಮೀಣಾಭಿವೃದ್ಧಿಯ ಅವಕಾಶ ಸಿಕ್ಕಿದೆ. ನೀವು ಪ್ರಾಮಾಣಿಕತೆಯಿಂದ ದಕ್ಷತೆಯಿಂದ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಪ್ರತಿಯೊಂದು ಹಳ್ಳಿಯೂ ಅಭಿವೃದ್ಧಿ ಆಗುತ್ತದೆ ಎಂದರು.
ಶ್ರೇಷ್ಠ ಎಂಜಿನಿಯರ್ ಯಾರು ಎಂದರೆ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಹೆಸರು ಹೇಳುತ್ತೇವೆ. ಸರ್.ಎಂ.ವಿ. ನಮ್ಮನ್ನಗಲಿ 65 ವರ್ಷವಾದರೂ ನಾವು ಅವರನ್ನು ಸ್ಮರಿಸುತ್ತೇವೆ. ಸಾಧಕರನ್ನು ಮತ್ತು ಪ್ರಾಮಾಣಿಕರನ್ನು ಸಮಾಜ ಸದಾ ಕೃತಜ್ಞತೆಯಿಂದ ನೆನೆಯುತ್ತದೆ. ನೀವೂ ದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಜಗತ್ತು ಸ್ಮರಿಸುವಂತೆ ಮಾಡಿ ಎಂದು ಈಶ್ವರ ಖಂಡ್ರೆ ಹೇಳಿದರು.
ನಾಗರಿಕತೆ ಬೆಳೆಯಲು ಎಂಜಿನಿಯರುಗಳು ಕಾರಣ. ಆಧುನಿಕ ಯುಗಮಾನದ ಅವಶ್ಯಕತೆಯನ್ನು ಅವರು ಪೂರೈಸುತ್ತಿದ್ದಾರೆ.
ಇಲಾಖೆಯ ಎಂಜಿನಿಯರುಗಳು ಕೆಲಸದಲ್ಲಿ ರಾಜೀ ಮಾಡಿಕೊಳ್ಳಬಾರದು. ನೂರಾರು ವರ್ಷ ಬಾಳಿಕೆ ಬರುವಂತಹ ಶಾಶ್ವತ ಆಸ್ತಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಬೇಕು. ಭವಿಷ್ಯದ ಚಿಂತನೆ ಇರಬೇಕು. ನೀವು ಇಂದು ಮಾಡುವ ವಿನ್ಯಾಸ, ಮುಂದಿನ 30 ವರ್ಷಗಳಲ್ಲಿ ಆಗಬಹುದಾದ ಜನಸಂಖ್ಯೆಯ ಹೆಚ್ಚಳ, ವಾಹನಗಳ ಒತ್ತಡ ಹೀಗೆ ಎಲ್ಲವನ್ನೂ ಒಳಗೊಂಡಿರಬೇಕು. ನೀವು ನಿರ್ಮಿಸುವ ಓವರ್ ಹೆಡ್ ಟ್ಯಾಂಕ್ ಗಳಿರಲಿ, ಕೊಳವೆ ಮಾರ್ಗವಿರಲಿ ಗಟ್ಟಿಯಾಗಿ ನಿಲ್ಲಬೇಕು. ಜನ ಮೆಚ್ಚುವಂತೆ ಇರಬೇಕು ಎಂದು ತಿಳಿಸಿದರು.
ಎಲ್ಲ ನಾಗರಿಕತೆಗಳೂ ಹುಟ್ಟಿದ್ದು ನದಿಗಳ ತಟದಲ್ಲಿ. ಮನುಷ್ಯ ನೀರಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ನೀರು ಅಮೃತ ಸಮಾನ. ಆದರೆ ಇಂದು ನದಿ, ಕೆರೆ, ಕುಂಟೆ ಎಲ್ಲವೂ ಕಲುಷಿತವಾಗುತ್ತಿದೆ. ಜಲ ಮೂಲಗಳು ಹಾಳಾಗದಂತೆ ಎಚ್ಚರ ವಹಿಸಬೇಕು. ಮುಂದಿನ 30 ವರ್ಷಗಳ ನೀರಿನ ಅಗತ್ಯವನ್ನು ಮನಗಂಡು ಯೋಜನೆ ರೂಪಿಸಬೇಕು ಎಂದರು.
ನೀರಿಗಾಗಿ ಯುದ್ಧ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಿದ್ದರು. ಅದನ್ನು ನಾವು ನೋಡುತ್ತಿದ್ದೇವೆ. ಕಾವೇರಿ, ಕೃಷ್ಣ ಮಹಾದಾಯಿಗಾಗಿ ನೆರೆ ರಾಜ್ಯಗಳೊಂದಿಗೆ ಸಂಘರ್ಷ ನಡೆಯುತ್ತಿದೆ. ಪಾಕಿಸ್ತಾನ- ಭಾರತ ನಡುವೆಯೂ ನದಿ ನೀರಿಗಾಗಿ ಹೋರಾಟ ಇದೆ. ಹೀಗಾಗಿ ಜೀವ ಜಲ ನೀರಿನ ಸಂರಕ್ಷಣೆ ಆಗಬೇಕು ಎಂದರು.
ರಾಜ್ಯದ ಅರ್ಧದಷ್ಟು ಜನ ಗ್ರಾಮೀಣ ಪ್ರದೇಶದಲ್ಲಿದ್ದು. ಪ್ರತಿಯೊಬ್ಬರಿಗೂ ಪ್ರತಿ ನಿತ್ಯ 100 ಲೀಟರ್ ನೀರು ಪೂರೈಸಬೇಕಾಗುತ್ತದೆ ಇಲ್ಲವೇ ಕನಿಷ್ಠ 55 ಲೀಟರ್ ಆದರೂ ಪೂರೈಕೆ ಮಾಡಬೇಕು. ಈ ನಿಟ್ಟಿನಲ್ಲಿ ಎಂಜಿನಿಯರುಗಳ ಯೋಜನೆ ಅತ್ಯಂತ ಮಹತ್ವದ್ದು ಎಂದರು.
ಪ್ರತಿಜ್ಞಾವಿಧಿ ಬೋಧನೆ:
ಇದೇ ಸಂದರ್ಭದಲ್ಲಿ ನೂತನ ಎಂಜಿನಿಯರುಗಳಿಗೆ ಗ್ರಾಮ ನೈರ್ಮಲ್ಯ ಮತ್ತು ಕುಡಿಯುವ ನೀರಿನ ಅಭಿವೃದ್ಧಿಗೆ ಮೀಸಲಾದ ನಿಧಿಯನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ, ಬೇರೆಯವರಿಗೂ ದುರುಪಯೋಗ ಪಡಿಸಿಕೊಳ್ಳಲು ಬಿಡುವುದಿಲ್ಲ. ಎಲ್ಲ ಗ್ರಾಮೀಣರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಧಿಕಾರದ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಫೌಜಿಯ ತರನ್ನುಂ ಮತ್ತಿತರರು ಪಾಲ್ಗೊಂಡಿದ್ದರು.
