ಬೆಂಗಳೂರು: ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಶಾಸಕಿ ರೂಪಕಲಾ ಅವರಿಗೆ ಇಂದು ವಿಧಾನಸಭಾ ಕಲಾಪದ ಮೊದಲು ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಅಭಿನಂದನೆ ಸಲ್ಲಿಸಿದರು.
ಕೋಲಾರದ ಶಾಸಕಿ ರೂಪಕಲಾ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಮಂಡಿಸಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವುದಕ್ಕೆ ಸದನವು ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಶಾಸಕಿಯಾಗಿ ಕ್ಷೇತ್ರದ ಕೆಲಸ ಕಾರ್ಯಗಳ ಜೊತೆಗೆ ಅಧ್ಯಯನಕ್ಕೂ ಸಮಯವನ್ನು ಮಾಡಿಕೊಂಡು ಡಾಕ್ಟರೇಟ್ ಪಡೆದಿರುವುದು ಗೌರವ ತರುವಂತಹ ಕೆಲಸ. ರಾಜಕೀಯ ಒತ್ತಡದ ನಡುವೆಯೂ ಇಂತಹ ಸಾಧನೆ ಮಾಡಿರುವ ಅವರಿಗೆ ಸರ್ಕಾರದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ರೂಪಕಲಾ ಅವರು ನಮಗೆಲ್ಲಾ ಸ್ಪೂರ್ತಿಯಾಗಿ ಒಂದು ಸಂದೇಶವನ್ನು ನೀಡಿದ್ದಾರೆ. ಅವರು ಅಧ್ಯಯನ ನಡೆಸಿರುವ ವಿಷಯ ತುಂಬಾ ಕುತೂಹಲಕರವಾಗಿದೆ. ಸದನದಲ್ಲಿ ಕೆಲವು ಸಚಿವರು ಬಹಳ ಆಸಕ್ತಿಯಿಂದ ವಿವಿಧ ವಿಷಯಗಳ ಮೇಲೆ ಗಂಟೆಗಟ್ಟಲೆ ಚರ್ಚೆ ಮಾಡಿದ್ದಾರೆ. ಕೃಷ್ಣ ಭೈರೇಗೌಡರು ಕೃಷಿ ಸಚಿವರಾಗಿದ್ದಾಗ 8 ಗಂಟೆಗಳ ಕಾಲ ಚರ್ಚೆ ಮೇಲೆ ಉತ್ತರ ನೀಡಿದ್ದರು. ಈಗ ಅಧ್ಯಯನ ಮಾಡಲು ಉತ್ತಮ ವಿಷಯಗಳಿವೆ. ಆದರೆ ಅಧ್ಯಯನ ಮಾಡಲು ಬಹಳಷ್ಟು ರಾಜಕಾರಣಿಗಳು ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ರಾಜಕೀಯ ನಡುವೆ ಈ ಸಾಧನೆ ಮಾಡಿರುವ ರೂಪಕಲಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಕೋಲಾರ ಶಾಸಕಿಯಾಗಿದ್ದ ಅವರು ನಾನು ಕಂದಾಯ ಸಚಿವರಾಗಿದ್ದಾಗ, ನನ್ನ ಪಾರ್ಟಿ ಅವರಿಗೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರೂ, ಪಟ್ಟು ಬಿಡದೆ ಮಿನಿ ವಿಧಾನಸೌಧವನ್ನು ಪಡೆದುಕೊಂಡರು. ಇದು ಅವರಿಗೆ ಇರುವ ಛಲಕ್ಕೆ ಒಂದು ಉದಾಹರಣೆ. ಅವರ ಸಾಧನೆಗೆ ಸದನದ ಎಲ್ಲಾ ಸದಸ್ಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಉಪನಾಯಕರಾದ ಅರಿವಿಂದ್ ಬೆಲ್ಲದ್ ಅವರು ಮಾತನಾಡಿ ರಾಜಕಾರಣದ ನಡುವೆ ನಮ್ಮ ಅಭಿರುಚಿಗಳು ಮರೆತು ಹೋಗುತ್ತೇವೆ. ನನಗೂ ಪಿ.ಎಚ್.ಡಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ನಮ್ಮ ತಂದೆ ಅವರು ವ್ಯಾಪಾರ ಯಾರು ನೋಡಿಕೊಳ್ಳುತ್ತಾರೆ, ಓದಿದ್ದು ಸಾಕು ಎಂದು ಬಿಟ್ಟರು. ರೂಪಕಲಾ ಅವರು ಸೂಕ್ತ ವಿಷಯದ ಮೇಲೆ ಅಧ್ಯಯನ ಮಾಡಿದ್ದಾರೆ. ಅವರ ಸಾಧನೆ ಉಳಿದವರಿಗೂ ಪ್ರೇರೇಪಣೆ ಆಗಲಿ ಎಂದರು.
