ಬೆಂಗಳೂರು : ಭದ್ರಾ ಅಣೆಕಟ್ಟು ಮತ್ತು ಅಚ್ಚುಕಟ್ಟು ಪ್ರದೇಶದ ಭದ್ರಾ ಯೋಜನಾ ವೃತ್ತ ಆಡಳಿತವನ್ನು ವಿಶ್ವೇಶ್ವರಯ್ಯ ಜಲನಿಗಮಕ್ಕೆ ಹಸ್ತಾಂತರಿಸಬಾರದು, ಈಗಿರುವ ಹಾಗೆ ಕರ್ನಾಟಕ ನೀರಾವರಿ ನಿಗಮದ ಪರಿವ್ಯಾಪ್ತಿಯಲ್ಲಿ ಮುಂದುವರಿಸಬೇಕು ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯ ರೈತ ಸಂಘ ಹಾಗೂ ದಾವಣಗೆರೆ, ವಿಜಯನಗರ ಜಿಲ್ಲೆಯ ಶಾಸಕರ ನಿಯೋಗವು ಶಿವಕುಮಾರ್ ಅವರ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಶಿವಕುಮಾರ್ ಅವರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದರು.
ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ, ಶಾಸಕರಾದ ಶಾಂತನಗೌಡ (ಹೊನ್ನಾಳಿ), ಬಸವರಾಜ್ ಶಿವಗಂಗಾ (ಚನ್ನಗಿರಿ), ಬಸವಂತಪ್ಪ (ಮಾಯಕೊಂಡ), ಲತಾ ಮಲ್ಲಿಕಾರ್ಜುನ (ಹರಪನಹಳ್ಳಿ) ಅವರು ಈ ನಿಯೋಗದಲ್ಲಿದ್ದರು.
ಈ ಬಗ್ಗೆ ಸಭೆ ನಡೆಸುವುದಾಗಿ ಹೇಳಿದ ಡಿಸಿಎಂ ಅವರಿಗೆ ನಿಯೋಗವು ಧನ್ಯವಾದ ತಿಳಿಸಿತು.
