ಬೆಂಗಳೂರು: ಇಂದು ಸಂಜೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಬಿ- ಗ್ರಾಮ್ ಜಿ ಕಾಯಿದೆ ಮೇಲೆ ಮಂಡಿಸಿದ್ದ ನಿರ್ಣಯವನ್ನು ಸದನವು ಅಂಗೀಕರಿಸಿತು.
ವಿರೋಧ ಪಕ್ಷದವರು ನಿರ್ಣಯವನ್ನು ವಿರೋಧಿಸಿ ಸದನದಿಂದ ಹೊರ ನಡೆದ ಸಂದರ್ಭದಲ್ಲಿ, ಮುಖ್ಯಮಂತ್ರಿ ಅವರು ನಿರ್ಣಯವನ್ನು ಅಂಗೀಕರಿಸುವಂತೆ ಸದನವನ್ನು ಕೋರಲಾಗಿ, ವಿಧಾನಸಭಾ ಸಭಾಧ್ಯಕ್ಷರು ನಿರ್ಣಯದ ಅನುಮೋದನೆಗಾಗಿ ಸದಸ್ಯರ ಮತಕ್ಕೆ ಹಾಕುವ ಮೂಲಕ ನಿರ್ಣಯವು ಬಹುಮತ ಪರವಾಗಿರುವುದರಿಂದ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
ಬಹುಮತದ ಮೂಲಕ ನಿರ್ಣಯವನ್ನು ಅಂಗೀಕರಿಸಿದ ನಂತರ ಸಭಾಧ್ಯಕ್ಷರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಇಂದು ಇಡೀ ದಿನ ವಿರೋಧ ಪಕ್ಷದವರು ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಚಿವರು ರಾಜೀನಾಮೆ ನೀಡಬೇಕೆಂದು ಬಾವಿಗಿಳಿದು ನಿರ್ಣಯದ ಮೇಲಿನ ಚರ್ಚೆಗೆ ಅಡಚಣೆ ಮಾಡುತ್ತಲೇ ಇದ್ದರು.
ನೆನ್ನೆಯಿಂದ ಈ ನಿರ್ಣಯದ ಮೇಲೆ ಸದನದಲ್ಲಿ 17 ಸದಸ್ಯರು 6 ಗಂಟೆ 51 ನಿಮಿಷ ಚರ್ಚೆ ಮಾಡಿರುವುದಾಗಿ ಸಭಾಧ್ಯಕ್ಷರು ತಿಳಿಸಿದರು.
ನಿರ್ಣಯ ಅಂಗೀಕರಿಸುವುದಕ್ಕೂ ಮುಂಚಿತವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮನ್ರೇಗಾ ಯೋಜನೆಯಡಿ ಪ್ರತಿಯೊಬ್ಬ ವ್ಯಕ್ತಿಯು ಸ್ವಾಭಿಮಾನದಿಂದ ಉದ್ಯೋಗ ಮಾಡಲು ಅವಕಾಶ ಇತ್ತು. ಇಂದಿರಾಗಾಂಧಿ ಅವರು ಗ್ರಾಮೀಣ ಜನರು ತಮ್ಮ ಸ್ವಂತ ಜಮೀನಿನಲ್ಲೇ ಕೆಲಸ ಮಾಡಿ ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಟ್ಟಿದ್ದರು. ಇನ್ನು ಮುಂದೆ ಪರಿಷ್ಕೃತವಾಗಲಿರುವ ವಿಬಿ-ಗ್ರಾಮ್ ಜಿ ಯೋಜನೆಯಲ್ಲಿ ಜನರು ಸ್ವಾಭಿಮಾನ ಬಿಟ್ಟು ಕೆಲಸಕ್ಕಾಗಿ ಗುತ್ತಿಗೆದಾರರ ಮುಂದೆ ಹೋಗಿ ನಿಲ್ಲುವಂತಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರವು ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದರು.
ಇಡೀ ಸದನವು ಮುಖ್ಯಮಂತ್ರಿ ಅವರು ಮಂಡಿಸಿರುವ ನಿರ್ಣಯವನ್ನು ಬೆಂಬಲಿಸುವುದಲ್ಲದೆ, ಸದನ ಹೊರಗೆ ಕೂಡ ನಮ್ಮ ಸರ್ಕಾರ ಹೋರಾಟ ಮಾಡಲಿದೆ ಎಂದರು.
ಮಧ್ಯಾಹ್ನ ಈ ನಿರ್ಣಯದ ಮೇಲೆ ಚರ್ಚೆ ಮಾಡಿದ ಶಾಸಕಿ ಎಂ ರೂಪಕಲಾ, ಮನ್ರೇಗಾ ರೈತ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತಿತ್ತು, ಬರಗಾಲದಿಂದ ತತ್ತರಿಸಿದ್ದ ಗ್ರಾಮಗಳಲ್ಲಿ ಕಲ್ಯಾಣಿ, ಕೆರೆ ಅಚ್ಚುಕಟ್ಟುಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ನಗರದ ಮಹಿಳೆಯರಿಗೆ ಕೆಲಸ ಸಿಗುತ್ತದೆ, ಆದರೆ ನಮ್ಮ ಗ್ರಾಮೀಣ ಭಾಗದ ಮಹಿಳೆಯರ ಉದ್ಯೋಗಕ್ಕೆ ಮನ್ರೇಗಾ ಒಂದೇ ಅವಕಾಶವಾಗಿತ್ತು. ಆದರೆ ವಿಬಿ-ಗ್ರಾಮ್ ಜಿ ಯಿಂದ ಮುಂದೆ ಅವರಿಗೆ ಕೆಲಸದ ಸಮಸ್ಯೆ ತಲೆದೋರಲಿದೆ ಎಂದರು.
ಬಿ.ಆರ್. ಪಾಟೀಲ್ ಅವರು ಈ ಕಾಯಿದೆಯು ಗಾಂಧೀಜಿ ಅವರು ಕಂಡ ಕನಸನ್ನು ನುಚ್ಚು ನೂರು ಮಾಡಿದೆ. ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಕಸಿದುಕೊಂಡಿದೆ. ಹೀಗೆ ಮುಂದೆ ರಾಜ್ಯ ಸರ್ಕಾರಗಳ ಅಧಿಕಾರಿಗಳನ್ನು ಮೊಟಕು ಮಾಡುವುದಿಲ್ಲ ಎಂದು ಹೇಗೆ ಹೇಳುವುದು ಎಂದರು.
ಎ.ಎಸ್. ಪೊನ್ನಣ್ಣ ಅವರು ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಸಂವಿಧಾನದಡಿ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆಯಾಗುವಂತಹ ಯಾವುದೇ ಯೋಜನೆ, ಕಾಯಿದೆಗಳನ್ನು ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ಮಾಡದೇ ಮಾಡುವಂತಿಲ್ಲ. ಹಾಗಾಗಿ ಇದು ಅಸಂವಿಧಾನಿಕ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿದೆ ಎಂದರು.
ಸಚಿವ ಪ್ರಿಯಾಂಕ ಖರ್ಗೆ ಅವರು ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಮನ್ರೇಗಾ ಯೋಜನೆಯು ಗ್ರಾಮಗಳ ಆಸ್ತಿಯನ್ನು ಸೃಜನೆ ಮಾಡುವ ಮೂಲಕ ಸಾಮಾಜದ ಕಟ್ಟಕಡೆಯ ವ್ಯಕ್ತಿಗೂ ಉದ್ಯೋಗ ಖಾತ್ರಿ ಹಕ್ಕನ್ನು ನೀಡಿ, ಅವರು ಸ್ವಾಭಿಮಾನದಿಂದ ಬದುಕಲು ಸಹಕಾರಿಯಾಗಿತ್ತು.
ಹಲವು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳು ಮನ್ರೇಗಾ ಯೋಜನೆ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವುದನ್ನು ಹಾಗೂ ಸ್ವತಃ ಮೋದಿ, ನಿರ್ಮಲಾ ಸೀತಾರಾಮನ್ ಅವರುಗಳು ವಿವಿಧ ದೇಶಗಳಲ್ಲಿ ಮಾಡಿರುವ ಭಾಷಣಗಳಲ್ಲಿ ಮನ್ರೇಗಾ ಯೋಜನೆಯಿಂದಾಗಿ ಗ್ರಾಮೀಣ ಭಾಗದ ಮಹಿಳೆಯರು, ದುರ್ಬಲರು, ಶೋಷಿತರು, ಉದ್ಯೋಗವನ್ನು ಹೊಂದಿರುವುದು, ಗ್ರಾಮೀಣ ಭಾಗದದಲ್ಲಿ ಆಸ್ತಿ ಸೃಜನೆಯಾಗಿರುವುದು, ಮಹಿಳೆಯರು ಆರ್ಥಿಕವಾಗಿ ಸಶಕ್ತರಾಗಿರುವುದನ್ನು ಹೆಮ್ಮೆಯಿಂದ ಹೇಳಿದ್ದಾರೆ.
ಅವರೇ ಹೇಳಿರುವಂತೆ ಇಷ್ಟೆಲ್ಲಾ ಪ್ರಯೋಜನವಾಗುತ್ತಿರುವ ಕಾಯಿದೆಯನ್ನು ಪರಿಷ್ಕರಣೆ ಮಾಡಲು ಹೋರಟಿರುವುದು ಏಕೆ ಎಂದು ಗೊತ್ತಿಲ್ಲ. ಕೇಂದ್ರ ಸರ್ಕಾರವು ಇದುವರೆಗೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 50 ಯೋಜನೆಗಳ ಹೆಸರನ್ನು ಬದಲಾಯಿಸಿದೆ. ಈಗ ಅದಕ್ಕೆ ಮನ್ರೇಗಾ ಯೋಜನೆಯು ಸೇರಿಕೊಳ್ಳಲಿದೆ. ಮನ್ರೇಗಾ ಕಾಯಿದೆ ಪರಿಷ್ಕರಣೆಯು ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವಂತಿದೆ ಹಾಗೂ ಸಂವಿಧಾನದ ವಿರುದ್ಧವಾಗಿದೆ ಎಂದರು.
