ಬೆಂಗಳೂರು: ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಘೋಷಣೆ ಮಾಡಿದ್ದು, ಡ್ರಗ್ಸ್ ಬಳಕೆಯಿಂದಾಗುವ ದುಷ್ಪರಿಣಾಮ, ಹಾನಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ರಾಜ್ಯದ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಕರೆ ನೀಡಿದರು.
ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ನಡೆದ ‘ಇ-ಡಿಎಆರ್ ಅನುಷ್ಠಾನ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ 2026 ಸಮಾರೋಪ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ 4.70 ಲಕ್ಷ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಕರ್ನಾಟಕದಲ್ಲಿ 43 ಸಾವಿರ ಅಪಘಾತ ಪ್ರಕರಣಗಳು ವರದಿಯಾಗಿವೆ. ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ ಎಂದರು.
ಮೈಸೂರು-ಬೆಂಗಳೂರು ಹೆದ್ದಾರಿ ಪ್ರಾರಂಭಿಸಿದ ಎರಡು ತಿಂಗಳಿಗೆ 120 ಜನ ಸಾವನ್ನಪ್ಪಿದರು. ಇದು ಆತಂಕ ಮೂಡಿಸಿತ್ತು. ರಸ್ತೆ ಸುರಕ್ಷತೆಯನ್ನು ಮರೆತುಬಿಟ್ಟಿದ್ದರು. ನಮ್ಮ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದಾಗ ಸುಮಾರು ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ತಿಳಿಸಿದಾಗ ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸಿದರು. ಇದಾದ ಬಳಿಕ ಅಪಘಾತಗಳು ಸಂಭವಿಸುತ್ತಿಲ್ಲ. ರಸ್ತೆಗಳನ್ನು ಮಾಡುವ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯನ್ನು ಗಮನಿಸಬೇಕು ಎಂದು ಹೇಳಿದರು.
ತಂತ್ರಜ್ಞಾನ ದೊಡ್ಡ ಪ್ರಮಾಣದಲ್ಲಿ ಮುಂದುವರಿದಿದೆ. ಎಲ್ಲ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಇ-ಡಿಎಆರ್ ತಂತ್ರಜ್ಞಾನ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರಿನಲ್ಲಿ ಲಕ್ಷಾಂತರ ಅಪಘಾತಗಳಾಗಿ, ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ದುಡಿಮೆಗೆ ಹೋಗುತ್ತಾನೆ. ಅಪಘಾತದಿಂದ ಸಾವನ್ನಪ್ಪುತ್ತಾನೆ. ಆ ಕುಟುಂಬ ಸಾಕುವ ವ್ಯಕ್ತಿ ಮೃತಪಟ್ಟರೆ ಕುಟುಂಬದ ಪರಿಸ್ಥಿತಿ ಏನಾಗಬೇಕು. ಇದೇ ಕಾರಣಕ್ಕೆ ಸುರಕ್ಷತೆ ಬಹಳ ಮುಖ್ಯ.
ನಗರದಲ್ಲಿ 500 ಜಂಕ್ಷನ್‌ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಟಿಫಿಯಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಡೀ ಬೆಂಗಳೂರು ನಗರವನ್ನು ಕಮಾಂಡ್ ಸೆಂಟರ್‌ನಿಂದ ಗಮನಿಸಬಹುದು. ಪ್ರತಿ ಜಂಕ್ಷನ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ಟ್ರಾಫಿಕ್ ಕಮಾಂಡ್ ಸೆಂಟರ್‌ನಿಂದ ನೋಡಬಹುದು. ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಇದರಿಂದ ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪಘಾತಗಳು ಕಡಿಮೆಯಾಗಿವೆ ಎಂದರು.
ಮುಖ್ಯವಾಗಿ ವಾಹನ ಸವಾರರ ಪ್ರಾಣ ರಕ್ಷಣೆ ಮತ್ತು ಕುಟುಂಬಗಳ ರಕ್ಷಣೆ ಮಾಡಬೇಕಾದ ಕೆಲಸ ಆಗಬೇಕಿದೆ. ರಸ್ತೆ ಸುರಕ್ಷತೆಯ ಕುರಿತ ವಸ್ತು ಪ್ರದರ್ಶನ ಮೂರು ದಿನ ನಡೆಸಬೇಕು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನೋಡಿ, ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಕುರಿತು ಅರ್ಥವಾಗುತ್ತದೆ ಎಂದು ಹೇಳಿದರು.
