ಸಮಗ್ರ ಸುದ್ದಿ

ಕೃಷಿ ಗ್ರಾಮೀಣಾಭಿವೃದ್ಧಿ ಬೇರೆ ಮಾಡಲು ಸಾಧ್ಯವಿಲ್ಲ:ಬಸವರಾಜ ಬೊಮ್ಮಾಯಿ | ಸಹಕಾರಿ ಸಂಘ ಸಶಕ್ತಗೊಂಡಾಗ ಕೃಷಿ ಅಭಿವೃದ್ಧಿ ಆಗುತ್ತದೆ:ಬಸವರಾಜ ಬೊಮ್ಮಾಯಿ

Share

ಗದಗ: ಒಂದು ಕೃಷಿ ಪತ್ತಿನ ಸಹಕಾರಿ ಸಂಘ ಆ ಗ್ರಾಮದ ಆರ್ಥಿಕ ಚಟುವಟಿಕೆಗಳಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮ ಪಂಚಾಯತಿ ಹಾಗೂ ಸಹಕಾರ ಸಂಘ ಸಶಕ್ತಗೊಂಡಾಗ ಕೃಷಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತದೆ. ರೈತನ ಅಭಿವೃದ್ಧಿ ಗ್ರಾಮಾಭಿವೃದ್ಧಿ ಒಂದಕ್ಕೊಂದು ಬೇರೆ ಮಾಡಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡು ಯೋಜನೆ ರೂಪಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾರಾಟ ಮಳಿಗೆ ಹಾಗೂ ಸಭಾ ಭವನದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು. ಸಹಕಾರದಲ್ಲಿ ಬಹಳ ದೊಡ್ಡ ಶಕ್ತಿ ಇದೆ. ಮನುಷ್ಯ ಸಂಘ ಜೀವಿ ಪರಸ್ಪರ ಸಹಕಾರ ಬಹಳ ಅಗತ್ಯವಿದೆ. ಅದು ಒಂದು ಸಂಸ್ಥೆಯಾಗಿ ಬೆಳೆದಾಗ ಹೆಚ್ಚಿನ ಲಾಭ ಮತ್ತು ಹೆಚ್ಚಿನ ಬಡ್ಡಿ ಕೊಡಲು ಸಾಧ್ಯವಿದೆ. ಯಶಸ್ವಿ ಸಹಕಾರ ಸಂಘಗಳು ಕೂಡ ಇವೆ. ನಮ್ಮ ರಾಜ್ಯದಲ್ಲಿ ಹಾಲು ಉತ್ಪಾದಕರ ಸಂಘ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇನ್ನೊಂದು ಕ್ಯಾಮ್ಮೊ ಸಹಕಾರಿ ಸಂಘ ಉತ್ತಮ ಕೆಲಸ ಮಾಡುತ್ತಿದೆ.

ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಸಹಕಾರ ಬಹಳ ಪ್ರಬಲವಾಗಿ ಬೆಳೆದಿದೆ. ಅಲ್ಲಿ ಸಹಕಾರ ಸರ್ಕಾರವನ್ನು ಆಳುತ್ತದೆ. ಇಲ್ಲಿ ಸರ್ಕಾರ ಸಹಕಾರವನ್ನು ಆಳಲು ಬಿಡುತ್ತಿಲ್ಲ. ಸಣ್ಣ ವ್ಯಾಪಾರದಿಂದ ಹಿಡಿದು ರಫ್ತು ವ್ಯವಹಾರ ಮಾಡಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಗುಜರಾತ್‌ನ ಅಮೂಲ್ ಎನ್ನುವ ಸಂಘ ಕುರಿಯನ್ ಅವರ ದೂರದೃಷಿಯಿಂದ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ನಾವೆಲ್ಲರೂ ಅದರಿಂದ ಪಾಠ ಕಲಿತು ಒಳ್ಳೆಯ ನಾಯಕತ್ವ ಬೆಳೆಸಬೇಕು. ಆಗ ಸಹಕಾರಿ ಸಂಘ ಬೆಳೆಯುತ್ತದೆ. ಶಿವ ಪ್ರಕಾಶ ಮಹಾಜನಶೆಟ್ಟರು ಒಳ್ಳೆಯ ನಾಯಕರಾಗಿ ಎಲ್ಲರನ್ನು ಸೇರಿಸಿ ಕೆಲಸ ಮಾಡಿದ್ದರಿಂದ ಸ್ವಂಘಕ್ಕೆ ಸ್ವಂಥ ಆಸ್ತಿ ಮಾಡಿದ್ದಾರೆ ಎಂದು ಹೇಳಿದರು.

ಸಹಕಾರಿ ಕ್ಷೇತ್ರದ ಲಾಭ ಪಡೆಯಬೇಕು:

ಕೃಷಿ ಕ್ಷೇತದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗಬೇಕು. ಭಾರತ ಸರ್ಕಾರ ಸಹಕಾರ ಇಲಾಖೆಯನ್ನು ಆರಂಭಿಸಿದೆ. ಇದುವರೆಗೂ ಕೃಷಿ ಇಲಾಖೆಯಲ್ಲಿ ಇತ್ತು. ಅಮಿತ್ ಶಾ ಅವರೇ ಅದರ ಸಚಿವರಾಗಿದ್ದಾರೆ. ಸಹಕಾರಿ ರಂಗದಲ್ಲಿ ಅವರು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಸೇವೆ ಆರಂಭಿಸಿದ್ದಾರೆ. ಗದಗನಲ್ಲಿ ಸಹಕಾರಿ ಸಂಘ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ದಿವಂಗತ ಕೆ. ಎಚ್. ಪಾಟೀಲರು ಬಲಗೊಳಿಸಿದ್ದಾರೆ. ಅದನ್ನು ಎಚ್.ಕೆ. ಪಾಟೀಲರು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಎಸ್. ಎಸ್. ಪಾಟೀಲರು ಸಹಕಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಹಕಾರಿ ಬ್ಯಾಂಕ್‌ಗಳನ್ನು ಮಾಡಿದ್ದಾರೆ. ಅದರ ಲಾಭವನ್ನು ಎಲ್ಲರೂ ಪಡೆಯಬೇಕು ಸಹಕಾರಿ ರಂಗದ ಭೀಷ್ಮ ಎಸ್.ಎಸ್. ಪಾಟೀಲ್ ಅವರ ಫೋಟೊವನ್ನು ಎಲ್ಲ ಸಹಕಾರಿ ಸಂಘಗಳಲ್ಲಿ ಹಾಕಲು ತೀರ್ಮಾನಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಹಕಾರಿ ತತ್ವ ಸಹಕಾರಿಯ ನಾಯಕತ್ವ ಗದಗ ಜಿಲ್ಲೆಯಲ್ಲಿ ಫಲವತ್ತಾಗಿ ಬೆಳೆದಿದೆ. ಆದರೆ ಇವತ್ತಿನ ಸವಾಲು ಆರ್ಥಿಕ ಬೆಳವಣಿಗೆ ತಕ್ಕ ಹಾಗೆ ದೊಡ್ಡ ಪ್ರಮಾಣದಲ್ಲಿ ವಿಭಿನ್ನವಾಗಿ ಬೆಳೆಸುವಂತಹ ಕೆಲಸ ಆಗಬೇಕು. ಕೇಂದ್ರದಲ್ಲಿ ಅಮಿತ್ ಶಾ ಮಂತ್ರಿ ಆದ ಮೇಲೆ ಪೆಟ್ರೋಲ್ ಬಂಕ್ ಆರಂಭ, ಗೊಬ್ಬರ ಬೀಜ ವಿತರಣೆ ಎಲ್ಲದಕ್ಕೂ ಅವಕಾಶ ಕೊಟ್ಟಿದ್ದಾರೆ.

ನಬಾರ್ಡ್‌ನಲ್ಲಿರುವ ಹಣವನ್ನು ಸಹಕಾರಿ ಸಂಸ್ಥೆಗಳಿಗೆ ನೀಡುವ ಇಚ್ಛೆ ಅವರದ್ದಾಗಿದೆ. ನಮ್ಮ ಬೇಡಿಕೆಯೂ ಅದೆ ಆಗಿದೆ. ನಬಾರ್ಡ್‌ನಲ್ಲಿ ಬೇಡಿಕೆ ಇಟ್ಟಿದ್ದೇನೆ. ಬೆಳ್ಳಟ್ಟಿ ಸಂಘದ ಹಿಂದಿನ ಅಧ್ಯಕ್ಷರನ್ನು ನೋಡಿದಾಗ ಎಲ್ಲರೂ ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈಗ ಯುವಕ ಮಹಾಜನ ಶೆಟ್ಟರ ಕೈಯಲ್ಲಿ ಇದೆ. ಅವರು ಇನ್ನಷ್ಟು ಒಳ್ಳೆಯ ಕೆಲಸ ಮಾಡಬೇಕು. ಸೊಸೈಟಿ ದೊಡ್ಡ ಪ್ರಮಾಣದಲ್ಲಿ. ಬೆಳೆಯಬೇಕು ಎಂದು ಹೇಳಿದರು.

ವರದಾ ಬೆಡ್ತಿ ಯೋಜನೆ ಜಾರಿಯಾಗಬೇಕು:ಬಸವರಾಜ ಬೊಮ್ಮಾಯಿ:

ಇದೇ ಸಂದರ್ಭದಲ್ಲಿ ರೈತರ ಬೇಡಿಕೆಗೆ ಉತ್ತರಿಸುತ್ತ ವರದಾ ಬೆಡ್ತಿ ನದಿ ಜೋಡಣೆ ಬಗ್ಗೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ ಅವರು, ಈ ಭಾಗದಲ್ಲಿ ನೀರಾವರಿ ಅವಶ್ಯಕತೆ ಇದೆ. ಮಣ್ಣು ಫಲವತ್ತಾಗಿದೆ. ಸ್ವಲ್ಪ ನೀರು ಕೊಟ್ಟರೆ ಭೂತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ವರದಾ ನದಿಯಿಂದ ಸವಣೂರು, ಶಿಗ್ಗಾವಿ, ಶಿರಹಟ್ಟಿ, ಲಕ್ಷೇಶ್ವರ, ಗದಗ, ಮುಂಡರಗಿ ಕೊಪ್ಪಳವರೆಗೆ ಹೋಗುತ್ತದೆ. ತುಂಗಭದ್ರಾ ಒಡಲು ತುಂಬಿದರೆ ನಮ್ಮ ರೈತರಿಗೆ ಅನುಕೂಲ ಆಗುತ್ತದೆ.

ಬಹಳಷ್ಟು ನದಿಗಳು ಸಮುದ್ರ ಸೇರುವ ಮುನ್ನ ಬತ್ತಿ ಹೋಗುತ್ತವೆ. ನದಿಯಲ್ಲಿ ಬೇಸಿಗೆಯಲ್ಲಿ ನೀರಿರಬೇಕು. ಆಗ ನಿಸರ್ಗ ಸಮತೋಲನದಲ್ಲಿರುತ್ತದೆ. ನಿಸರ್ಗದಲ್ಲಿ ಕರಾವಳಿ, ಮಲೆನಾಡು, ಬಯಲು ಸೀಮೆಯಲ್ಲಿ ಎಲ್ಲ ಕಡೆಯೂ ಅಷ್ಟೇ ಮಹತ್ವ ಇದೆ. ಹೀಗಾಗಿ ಈ ಭಾಗದಲ್ಲಿ ನೀರಾವರಿ ಆಗಬೇಕೆಂದರೆ ಬೆಡ್ತಿ ವರದಾ ಯೋಜನೆ ಜಾರಿಯಾಗುವುದು ಬಹಳ ಅವಶ್ಯವಿದೆ. ಇದು ಮುಂದಿನ ಜನಾಂಗಕ್ಕೆ ಬಹಳ ಅಗತ್ಯ ಇದೆ ಎಂದು ಹೇಳಿದರು.

ಕಾನೂನು ಸಚಿವರಾದ ಎಚ್.ಕೆ. ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಅಪ‌ರ್ ತುಂಗಾ ಯೋಜನೆ ಜಾರಿ ಮಾಡಿದರು. ಸಿಂಗಟಾಲೂರು ಅವರ ಕಾಲದಲ್ಲಿ ಆರಂಭಿಸಿದರು. ನಮ್ಮ ಕಾಲದಲ್ಲಿ ನೀರು ಕೊಟ್ಟೆವು. ಇನ್ನಷ್ಟು ನೀರು ಬರಬೇಕೆಂದರೆ ಬೆಡ್ತಿ ವರದಾ ಯೋಜನೆ ಅಗತ್ಯವಿದೆ. ಅದು 1994 ರಿಂದಲೇ ಈ ಯೋಜನೆಯ ಬೇಡಿಕೆ ಇದೆ. ಅದರಲ್ಲಿ ಶೇ 10 ರಷ್ಟು ನೀರು ಬಳಕೆ ಮಾಡಲಾಗುತ್ತಿದೆ.

ಯಾವುದೇ ಪರಿಸರಕ್ಕೆ ಹಾನಿಯಾಗದಂತೆ ಸಣ್ಣ ಸಣ್ಣ ಬ್ಯಾರೇಜ್ ನಿರ್ಮಾಣ ಮಾಡಿ ಯೋಜನೆ ಜಾರಿ ಮಾಡಬಹದು. ಲಕ್ಷ್ಮೀಶ್ವರ, ಶಿರಹಟ್ಟಿ ಸೇರಿದಂತೆ ಪ್ರಮುಖ ನಗರಗಳಿಗೆ ಕುಡಿಯುವ ನೀರಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಬ್ಬರೂ ಸೇರಿ ಈ ಯೋಜನೆ ಜಾರಿ ಮಾಡುವ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಿದೆ. ರಾಜ್ಯ ಸರ್ಕಾರವೂ ಒಪ್ಪಿದೆ.

ತ್ವರಿತ ಗತಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿದಾಗ ರೈತರಿಗೆ ನೀರು ಕೊಡಲು ಸಾಧ್ಯವಿದೆ. ಅದಕ್ಕೆ ಜನರೂ ಅಷ್ಟೇ ಪ್ರಮಾಣದಲ್ಲಿ ಬೆಂಬಲ ಕೊಡಬೇಕು. ಮನಸಿದ್ದರೆ ಮಾರ್ಗ ಇದೆ. ಹುಲಿ ಗುಡ್ಡದ ಯೋಜನೆಯನ್ನು ಎಸ್ ಎಸ್ ಪಾಟೀಲರು ಮಾಡಿದ್ದರು. ಅದನ್ನು ಸಿಂಗಟಾಲೂರು ಯೋಜನೆ ಮಾಡಿದೆವು. ಎಲ್ಲರ ಹಿತ ದೃಷ್ಟಿಯಿಂದ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಬಸವರಾಜ ಮಹಾಸ್ವಾಮಿಗಳು ಶ್ರೀ ರಾಮಲಿಂಗೇಶ್ವರ ದಾಸೋಹಮಠ, ಬೆಳ್ಳಟ್ಟಿ, ಶ್ರೀ ಷ.ಬ್ರ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬ್ರಹನ್ಮಠ ಬನ್ನಿಕೊಪ್ಪ ಉಭಯ ಶ್ರೀಗಳು ಸಾನಿಧ್ಯ ವಹಿಸಿದ್ದರು. ಹಾಗೂ ಸಚಿವರಾದ ಎಚ್.ಕೆ.ಪಾಟೀಲ್, ಮಾಜಿ ಸಚಿವರಾದ ಎಸ್.ಎಸ್‌ ಪಾಟೀಲ್, ಶಾಸಕರಾದ ಡಾ.ಚಂದ್ರು ಲಮಾಣಿ ಉಪಸ್ಥಿತರಿದ್ದರು.


Share

You cannot copy content of this page