ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸಂಶೋಧನಾ ಕೇಂದ್ರ ಪ್ರಾರಂಭಿಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಘೋಷಿಸಿದರು.
ಮೈಸೂರಿನಲ್ಲಿ ಕೇಂದ್ರದ 2026-2027ನೇ ಸಾಲಿನ ಆಯವ್ಯಯದ ಕುರಿತಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಈ ಯೋಜನೆ ಕಾರ್ಯಗತ ಮಾಡಲು 100 ಎಕರೆ ಭೂಮಿ ಅಗತ್ಯವಿದೆ. ಆದಷ್ಟು ಬೇಗ ಭೂಮಿಯನ್ನು ಹಂಚಿಕೆ ಮಾಡಬೇಕು ಎಂದು ಸ್ವತಃ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಅವರು ಆದಷ್ಟು ಬೇಗ ಭೂಮಿ ನೀಡುವ ವಿಶ್ವಾಸವಿದೆ ಎಂದರು.
ಇದು ಅತ್ಯಂತ ಮಹತ್ವದ ಯೋಜನೆ ಆಗಿದ್ದು, ಮಂಡ್ಯ, ಮೈಸೂರು ಭಾಗಕ್ಕೆ ಮಾತ್ರವಲ್ಲದೆ ಇಡೀ ರಾಜ್ಯ ಆಟೋಮೊಬೈಲ್ ಕೇತ್ರಕ್ಕೆ ಬೂಸ್ಟರ್ ನಂತೆ ಕೆಲಸ ಮಾಡುತ್ತದೆ. ಬಜೆಟ್ ನಲ್ಲಿಯೇ ಇದಕ್ಕೆ ಹಣ ಮಂಜೂರು ಆಗಿದೆ ಎಂದು ಅವರು ಹೇಳಿದರು.
ಏನಿದು ARAI?:
ಕೇಂದ್ರ ಸರಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸ್ವಾಯತ್ತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದಾಗಿದ್ದು, ಭಾರತೀಯ ಆಟೋಮೋಟಿವ್ ಉದ್ಯಮದಲ್ಲಿ ಪರೀಕ್ಷೆ, ಪ್ರಮಾಣೀಕರಣ ಮತ್ತು ಸಂಶೋಧನೆಗೆ ಪ್ರಮುಖ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಪುಣೆಯ ಇದರ ಕೇಂದ್ರ ಸ್ಥಾನವಿದ್ದು, ವಾಹನಗಳ ಸುರಕ್ಷಿತ, ಮಾಲಿನ್ಯ ನಿವಾರಣೆ ಮತ್ತು ತಾಂತ್ರಿಕ ಗುಣಮಟ್ಟ ಸೇರಿದಂತೆ ವಿವಿಧ ಮಾನದಂಡಗಳಿಗೆ ಅನುಗುಣವಾಗಿ ಸರಕಾರ ಮತ್ತು ಆಟೋಮೊಬೈಲ್ ಉದ್ಯಮದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ಜಾಗತಿಕ ಗುಣಮಟ್ಟ & ಶ್ರೇಷ್ಠತೆಯ ಈ ಸಂಶೋಧನಾ ಕೇಂದ್ರ ಮಂಡ್ಯದಲ್ಲಿ ಸ್ಥಾಪನೆ ಆಗಬೇಕು ಎಂಬುದು ನನ್ನ ಆಶಯ. ಸೂಕ್ತ ಜಮೀನು ಗುರುತಿಸುವಂತೆ ರಾಜ್ಯ ಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇದೇ ಜನವರಿ 21ರಂದು ಕಂದಾಯ ಇಲಾಖೆ ಅಧಿಕಾರಿಗಳು ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ಸರಕಾರ ಜಾಗ ನೀಡಲಿ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆದ್ದು ಏನು ತಂದರು ಎನ್ನುವ ಪ್ರಶ್ನೆ ಇತ್ತು. ದಿನವೂ ಮಂಡ್ಯದ ಕೆಲ ಶಾಸಕರು ಪ್ರಶ್ನೆ ಮಾಡುತ್ತಿದ್ದರು. ಅದಕ್ಕೆ ಉತ್ತರವಾಗಿ ಈ ARAI ಕೇಂದ್ರವನ್ನು ತರಲಾಗುತ್ತಿದೆ. ಮೊದಲ ಹಂತದಲ್ಲಿ ರೂ.500 ಕೋಟಿ ಹೂಡಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಆಗಲಿದೆ. ರಾಜ್ಯ ಸರಕಾರ ಭೂಮಿ ಹಂಚಿಕೆ ಮಾಡಿದ ಕೂಡಲೇ ಯೋಜನೆ ಅನುಷ್ಠಾನಕ್ಕೆ ಕಾರ್ಯೋನ್ಮುಖವಾಗುತ್ತೇವೆ. ಈ ಬಗ್ಗೆ ಇನ್ನೂ ಮುಖ್ಯಮಂತ್ರಿಗಳು ಸ್ಪಂದಿಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆಯ ಘಟಕ ತೆರೆಯಲು 100 ಎಕರೆ ಬೇಕೆಂದು ಸ್ವತಃ ನಾನೇ ಸಿಎಂ ಅವರಿಗೆ ಪತ್ರ ಬರೆದಿದ್ದೇನೆ. ಮಂಡ್ಯದಲ್ಲೇ ಜಾಗ ಕೊಡುವಂತೆ ಕೋರಿ ಪತ್ರ ಬರೆದಿದ್ದೇನೆ. ರಾಜ್ಯದಲ್ಲಿ ಆಟೋಮೊಬೈಲ್ ಕ್ಷೇತ್ರದ ಬಲವರ್ಧನೆಗೆ ಕೇಂದ್ರವು ಬದ್ಧವಾಗಿದೆ. ಇದಕ್ಕಾಗಿಯೇ ಭೂಮಿ ಕೊಡಲು ಸಿಎಂಗೆ ನಾನೇ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ. ನಾಟಕವಾಡಲಿಕ್ಕೆ ಪ್ರಧಾನಿಗಳು ನನಗೆ ಈ ಸ್ಥಾನ ಕೊಟ್ಟಿಲ್ಲ. ರಾಜ್ಯದ ಕೈಗಾರಿಕಾಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಕೇಂದ್ರ ಬಜೆಟ್ʼನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮಂತ್ರಿ ಸಾ.ರಾ. ಮಹೇಶ್, ಸಂಸದ ಯದುವೀರ್ ಒಡೆಯರ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಶ್ರೀವತ್ಸ, ಮಾಜಿ ಶಾಸಕ ಅಶ್ವಿನ್ ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
