ಬೆಂಗಳೂರು: ಕೇಂದ್ರ ಸರ್ಕಾರ ನಗರಾಭಿವೃದ್ಧಿ ಸಚಿವಾಲಯದಿಂದ 2025-26ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಉತ್ತರ ನಗರ ಪಾಲಿಕೆಯ ಅಧಿಕಾರಿಗಳು, ನೌಕರರು, ಮಾರ್ಷಲ್ ಗಳು, ಪೌರಕಾರ್ಮಿಕರು ಗಮನಹರಿಸಿ ಕೆಲಸ ನಿರ್ವಹಿಸಬೇಕಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಹೇಳಿದರು.
ಯಲಹಂಕದ ಮಿನಿ ವಿಧಸೌಧದಲ್ಲಿ ನಡೆದ ಸದರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳು 2025-26 ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದ್ದು, ಇದಕ್ಕೆ ಉತ್ತರ ನಗರ ಪಾಲಿಕೆ ಉತ್ತಮ ನಿರ್ವಹಣೆ ತೋರಬೇಕಿದೆ. ಇನ್ನೆರಡು ತಿಂಗಳುಗಳಲ್ಲಿ ಈ ಸಮೀಕ್ಷೆಯ ಪೂರ್ಣ ಅಂಕಗಳ ದಾಖಲೆ ಪ್ರಕ್ರಿಯೆ ನಡೆಯಲಿದ್ದು, ಇದಕ್ಕೆ ಪಾಲಿಕೆಯ ಎಲ್ಲಾ ಸಿಬ್ಬಂದಿಗಳು ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.
ಘನ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಮಳೆ ನೀರುಗಾಲುವೆಗಳ ನಿರ್ವಹಣೆ, ಕೆರೆಗಳ ನಿರ್ವಹಣೆ, ಉದ್ಯಾನವನಗಳ ನಿರ್ವಹಣೆ, ತ್ಯಾಜ್ಯ ನೀರು ಮರುಬಳಕೆ, ಸ್ವಚ್ಛತೆಯ ಕುರಿತು ಅಧಿಕಾರಿಗಳು ಜಾಗೃತಿ, ಪೌರಕಾರ್ಮಿಕರ ಕಲ್ಯಾಣ ಮತ್ತು ಆರೋಗ್ಯ, ಸಾರ್ವಜನಿಕರ ಅಭಿಪ್ರಾಯ ಇತ್ಯಾದಿ, ಇವೆಲ್ಲ ಈ ಸಮೀಕ್ಷೆಯ ಪ್ರಮುಖ ಅಂಶಗಳಾಗಿವೆ ಎಂದು ಮಾಹಿತಿ ನೀಡಿದರು.
ಯಾಂತ್ರೀಕೃತ ಶುಚಿಗೊಳಿಸುವ ಯಂತ್ರಗಳ ಬಳಕೆ:
ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಕ್ಕೆ ಅನುಕೂಲವಾಗುವಂತೆ ಹಾಗೂ ಸ್ವಚ್ಛತಾ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಯಾಂತ್ರೀಕೃತ ಯಂತ್ರಗಳನ್ನು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಳಕೆಗೆ ತರಲಾಗಿದೆ. ಇವುಗಳನ್ನು ಎಲ್ಲಾ ಪೌರಕಾರ್ಮಿಕರು ಬಳಸಲು ಮುಂದಾಗಬೇಕು. ತಮ್ಮಲಿಯೇ ಒಬ್ಬರು ಯಂತ್ರಗಳ ಬಳಕೆಯನ್ನು ಸಂಪೂರ್ಣವಾಗಿ ಮೊದಲು ಅರಿತು, ನೈಪುಣ್ಯತೆ ಪಡೆದು ಇತರ ಪೌರಕಾರ್ಮಿಕರಿಗೆ ಮಾಸ್ಟರ್ ಟ್ರೈನರ್ಸ್ ಆಗಿ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಇದರಿಂದ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯಕ್ಕೆ ನೆರವು ಸಿಗಲಿದೆ. ಮುಖ್ಯವಾಗಿ ಬ್ಲೋಯಿಂಗ್ ಮತ್ತು ಸಕ್ಕಿಂಗ್ ಯಂತ್ರಗಳು ಉತ್ತಮವಾಗಿದ್ದು, ಇವುಗಳ ಬಳಕೆ ಸಂಪೂರ್ಣವಾಗಿ ಆಗಬೇಕಿದೆ ಎಂದು ತಿಳಿಸಿದರು.
ಪೌರಕಾರ್ಮಿಕರ ಆರೋಗ್ಯಕ್ಕೆ ಒತ್ತು:
ಪೌರಕಾರ್ಮಿಕರ ಆರೋಗ್ಯ ಕಾಪಾಡಲು ಹಲವು ಕಾರ್ಯಕ್ರಮಗಳನ್ನು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಪೌರಕಾರ್ಮಿಕರ ಆರೋಗ್ಯಕ್ಕೆ ತೊಂದರೆ ಆಗದಂತೆ ಆರೋಗ್ಯ ಅಧಿಕಾರಿಗಳು ಸಹಕಾರ ನೀಡಲಿದ್ದಾರೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಮಕಾರಿಯಾಗಿ ಪೌರಕಾರ್ಮಿಕರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಆದ್ದರಿಂದ ಪೌರಕಾರ್ಮಿಕರು ಸ್ವಚ್ಛತೆಯ ಕಡೆಗೆ ಮಾತ್ರ ಗಮನಹರಿಸಬೇಕು.
ನಗರ ಪಾಲಿಕೆಯನ್ನು ಬ್ಲಾಕ್ ಸ್ಪಾಟ್ ಮುಕ್ತಗೊಳಿಸಿ:
ನಗರ ಪಾಲಿಕೆಯಲ್ಲಿ ಎಲ್ಲಿಯೂ ಬ್ಲ್ಯಾಕ್ ಸ್ಪಾಟ್ ಗಳು ಕಾಣದಂತೆ, ಸ್ವಚ್ಛವಾಗಿರಿಸಿ ನಾಗರೀಕರ ಪ್ರಶಂಸೆಗೆ ಪಾತ್ರವಾಗಬೇಕಿದೆ ಎಂದು ಸಲಹೆ ನೀಡಿದರು.
ನಾಗರೀಕರು ಫೋನ್- ಇನ್ ಕಾರ್ಯಕ್ರಮದಲ್ಲಿ ಘನತ್ಯಾಜ್ಯ ನಿರ್ವಹಣೆಯ ಕುರಿತು ಬಂದ ದೂರುಗಳನ್ನು ತ್ವರಿತವಾಗಿ ಸ್ಪಂದಿಸಿ, ಕ್ರಮ ವಹಿಸುವಂತೆ ಆರೋಗ್ಯ ಪರಿವೀಕ್ಷಕರು, ಮಾರ್ಷಲ್ ಗಳು ಮತ್ತು ಎ.ಜಿ.ಎಂ. ಗಳಿಗೆ ಸೂಚನೆ ನೀಡಿ, ಈ ಪ್ರಕರಣಗಳು ಮರುಕಳಿಸದಂತೆ ಕ್ರಮ ವಹಿಸಲು ತಿಳಿಸಿದರು.
ಎಲ್ಲೋ ಸ್ಪಾಟ್ (ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಯ ಸ್ಥಳಗಳು) ಮತ್ತು ರೆಡ್ ಸ್ಪಾಟ್ (ಉಗುಳುವ ಜಾಗಗಳು) ಗಳ ಪ್ರಕರಣಗಳು ಸ್ಕೈ ವಾಕ್ ಗಳ ಬಳಿ ಹೆಚ್ಚಾಗಿ ಕಂಡು ಬರುತ್ತಿದ್ದು, ಇದರಿಂದ ನಗರ ಪಾಲಿಕೆಯ ಸೌಂದರ್ಯಕ್ಕೆ ದಕ್ಕೆ ಉಂಟಾಗುತ್ತಿದ್ದು, ಈ ಬಗ್ಗೆ ಮಾರ್ಷಲ್ ಗಳು ಕಣ್ಗಾವಲಿನಲ್ಲಿರಿಸಿ, ತಪ್ಪಿತಸ್ಥರ ವಿರುದ್ಧ ನಿಯಮಾನಸಾರ ದಂಡ ವಿಧಿಸಿ, ಮತ್ತೆ ಈ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳತಕ್ಕದ್ದು.
ಯಂತ್ರಗಳು ಮತ್ತು ಸಿಬ್ಬಂದಿಗಳನ್ನು ಬಳಸಿಕೊಂಡು ಡಿ ಸಿಲ್ಟಿಂಗ್ ಪ್ರಕ್ರಿಯೆ ನಡೆಸಬೇಕು. ಕೆರೆಗಳನ್ನು, ಉದ್ಯಾನವನಗಳನ್ನು ಮತ್ತು ಸುತ್ತ ಮುತ್ತ ಇರುವ ವಾಕಿಂಗ್ ಪಾತ್ ಗಳನ್ನು ಸ್ವಚ್ಛವಾಗಿರಿಸಲು ಸೂಚಿಸಿದರು.
ಎಲ್ಲಾ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ನಿರ್ವಹಣಾ ಕಾರ್ಯಗಳು ಕೇವಲ ಸಮೀಕ್ಷೆಗಾಗಿಯೇ ನಡೆಸದೆ ನಿತ್ಯ ಕಾಯಕವಾಗಿ ಅಳವಡಿಸಿಕೊಂಡು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಆಯುಕ್ತರು ಕರೆ ನೀಡಿದರು.
ಸಭೆಯಲ್ಲಿ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ, ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ಶ್ರೀಮತಿ ರಮಾಮಣಿ ಸೇರಿದಂತೆ ನಗರ ಪಾಲಿಕೆ ಅಧಿಕಾರಿಗಳು, ನೌಕರರು, ಮಾರ್ಷಲ್ ಗಳು ಸೇರಿದಂತೆ ಬಿ.ಎಸ್. ಡಬ್ಲ್ಯೂ.ಎಂ.ಎಲ್, ಜಲಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.
