ಸಮಗ್ರ ಸುದ್ದಿ

ಮಹನೀಯರನ್ನು ಜಾತಿಗಳಿಗೆ ಹಂಚಿಕೆ ಮಾಡಿಕೊಂಡಿರುವುದು ಸರಿಯಲ್ಲ: ಸಚಿವ ಶಿವರಾಜ್ ಎಸ್.ತಂಗಡಗಿ

Share

ಬೆಂಗಳೂರು: ಮಹನೀಯರು ಹಾಗೂ ಶರಣರ ಜಯಂತಿಯನ್ನು ಇಂದು ಜಾತಿಗಳಿಗೆ ಹಂಚಿಕೊಂಡಿರುವುದು ವಿಪರ್ಯಾಸ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಬಸವಹರಳಯ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾಯಕ ಶರಣರ ಜಯಂತಿಯಲ್ಲಿ ಪ್ರೊ.ಎಚ್. ಲಿಂಗಪ್ಪ ಅವರಿಗೆ ಕಾಯಕ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಕನಕದಾಸರು, ಸಿದ್ದರಾಮೇಶ್ವರ, ವಾಲ್ಮೀಕಿ, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಇಡೀ ದೇಶವೇ ಅವರನ್ನು ನೆನೆಯುತ್ತದೆ. ಅಂತಹದ್ದರಲ್ಲಿ, ನಾವು ಮಹನೀಯರ ಜಯಂತಿಗಳನ್ನು ಒಂದು ಸಮುದಾಯಕ್ಕೆ ಸಿಮೀತಗೊಳಿಸಿರುವುದು ಸರಿಯಲ್ಲ ಎಂದು ಹೇಳಿದರು.

ಪ್ರೊ.ಲಿಂಗಪ್ಪ ಅವರನ್ನು ‘ಕಾಯಕ ಶರಣಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ, ಸಮುದಾಯದ ಮುಖಂಡರೊಬ್ಬರು ನಮ್ಮ ಸಮಾಜದವರಿಗೆ ಪ್ರಶಸ್ತಿ ನೀಡಬೇಕಿತ್ತು ಎಂದು ನನಗೆ ಕರೆ ಮಾಡಿದ್ದರು. ಅದು ನನಗೆ ನೋವು ತರಿಸಿತು. ಕಳೆದ ಬಾರಿ ನಾವು ಕನಕ ಶ್ರೀ ಪ್ರಶಸ್ತಿಯನ್ನು ಬ್ರಾಹ್ಮಣ ಸಮುದಾಯದ, ಸಮ- ಸಮಾಜದ ಬಗ್ಗೆ ಒಲವು ಹೊಂದಿದ್ದವರಿಗೆ ನೀಡಿದ್ದೆವು. ಇಲ್ಲಿ ಯಾವುದೇ ಜಾತಿ ಮುಖ್ಯವಲ್ಲ, ಅವರ ತತ್ವ ಸಿದ್ಧಾಂತಗಳು ಮುಖ್ಯ ಎಂದು ತಿಳಿಸಿದರು.‌

ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಮೇಲೆ ಬದುಕು ನಡೆಸುತ್ತಿರುವ ಪ್ರೊ.ಲಿಂಗಪ್ಪ‌ ಅವರನ್ನು ಕಾಯಕಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ‌ಸಂತಸ‌ ತರಿಸಿದೆ ಎಂದರು.‌

ಶರಣರಿಂದ ಜಾತ್ಯತೀತೆ ಪ್ರತಿಪಾದನೆ:

ಐವರು ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರು ಬಸವಣ್ಣ ಅವರ ಸಮ-ಸಮಾಜದ ಮೇಲೆ ನಂಬಿಕೆ ಇಟ್ಟವರು. ಜಾತ್ಯತೀತೆಯನ್ನು ಪ್ರತಿಪಾದಿಸುತ್ತಾ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನೆನೆದರು.

ಇನ್ನು ಸಮಾಜದ ವಿವಿಧ ಸ್ತರಗಳಿಂದ ಬಂದ ಪ್ರತಿಯೊಬ್ಬ ವಚನಕಾರರೂ ತಮ್ಮ ಕಾಯಕಗಳನ್ನು ಮಾಡುತ್ತಲೇ, ತಮ್ಮ ಜೀವನಾನುಭವಗಳನ್ನು ವಚನಗಳ ಮೂಲಕ ಹಾಡಿ ಈ ಲೋಕಕ್ಕೆ ಬಹುದೊಡ್ಡ ಉಪಕಾರ ಮಾಡಿದ್ದಾರೆ ಎಂದರು.

ಸಮಾಜದ ಎಲ್ಲಾ ಸೌಲಭ್ಯ ಮತ್ತು ಅವಕಾಶಗಳು ಸಮಾಜದ ಅತ್ಯಂತ ಕಟ್ಟಕಡೆಯ ಸ್ತರದ ವ್ಯಕ್ತಿಗೂ ಸಲ್ಲಬೇಕು ಎಂಬ ಉದ್ದೇಶದಿಂದಾಗಿ ಎಲ್ಲರಿಗೂ ವಿದ್ಯೆ, ದಾಸೋಹ, ಲಿಂಗಸಂಸ್ಕಾರ ನೀಡಿ ವಚನಕಾರರನ್ನಾಗಿಸುವ ಮೂಲಕ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯನ್ನು ತೋರಿದ ಈ ಯುಗದಲ್ಲಿ ಸಾವಿರಾರು ಶರಣರು, ನೂರಾರು ವಚನಕಾರರು ಆಗಿಹೋಗಿದ್ದಾರೆ ಎಂದು ಮೆಲುಕು ಹಾಕಿದರು.

ಆದರ್ಶಗಳನ್ನು ಪಾಲಿಸಿ:

ಶರಣರು ನಡೆದ ಬಂದ ಹಾದಿಯಲ್ಲೇ ನಾವು ಸಾಗಬೇಕು. ಶರಣರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಪ್ರತಿಯೊಂದು ಸಮಾಜದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಆದರೆ ಅದೆಲ್ಲವನ್ನು ಪಕ್ಕಕ್ಕಿಟ್ಟು ಮುನ್ನಡೆದಾಗ ಸಮಾಜಕ್ಕೆ ಒಳಿತಾಗುತ್ತದೆ. ಒಗ್ಗಟ್ಟಿನಿಂದ ಆಯಾ ಸಮುದಾಯಗಳು ಗಟ್ಟಿಯಾಗುತ್ತವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಅಬಕಾರಿ ಇಲಾಖೆ‌ ಸಚಿವ ಆರ್. ಬಿ.ತಿಮ್ಮಾಪುರ್, ರಾಜ್ಯಸಭಾ ಮಾಜಿ ಸಂಸದ ಡಾ.ಎಲ್.ಹನುಮಂತಯ್ಯ, ಅಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ್ ಸುರೇಂದ್ರ ಸವಣೂರು, ಮಾದಿಗ ಸಮುದಾಯದ ಎಂ.ಗುರುಮೂರ್ತಿ, ಆದಿಜಾಂಬವ ಸಮಾಜದ ಸಿದ್ದರಾಜು, ಇಲಾಖಾ‌‌ ಕಾರ್ಯದರ್ಶಿ ಜೆ.ಮಂಜುನಾಥ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Share

You cannot copy content of this page