ಸಮಗ್ರ ಸುದ್ದಿ

ಜಿಬಿಎ ನಗರ ಪಾಲಿಕೆಗಳ ಚುನಾವಣೆಗೆ ಅಧಿಸೂಚಿತ ವಾರ್ಡ್ ಗಡಿಗಳ ಪಾಲನೆ ಕಡ್ಡಾಯ: ಮಹೇಶ್ವರ್ ರಾವ್

Share

ಬೆಂಗಳೂರು: ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳ ಪಾಲನೆ ಕಡ್ಡಾಯ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಬಿಎ ಮುಖ್ಯ ಕಚೇರಿಯ ಸಭಾಂಗಣದಲ್ಲಿ ಇಂದು 5 ನಗರ ಪಾಲಿಕೆಗಳ ಕರಡು ನಗರ ಪಾಲಿಕೆ ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ಕುರಿತು ಆಯೋಜಿಸಲಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮ್ಯಾಪ್ ಗಡಿಗಳ ನವೀಕರಣಕ್ಕೆ ಸೂಚನೆ:

ಅಧಿಸೂಚನಾ ವಾರ್ಡ್ ವಿವರಣೆಗಳಿಗೆ ಅನುಗುಣವಾಗಿ ಮ್ಯಾಪ್ ಗಡಿಗಳನ್ನು ಸರಿಪಡಿಸಿ ನವೀಕರಿಸುವ ಸಲುವಾಗಿ, ದೀರ್ಘಾವಧಿಯಲ್ಲಿ ವ್ಯವಸ್ಥಿತ ಸರ್ವೇ ಮೂಲಕ ಪರಿಶೀಲನೆ ಕೈಗೊಳ್ಳುವಂತೆ ಐಟಿ ವಿಭಾಗದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಚುನಾವಣಾ ವಿಭಾಗ ರಚನೆ:

ಪ್ರತಿ ನಗರ ಪಾಲಿಕೆಯಲ್ಲಿ ಒಬ್ಬ ತಹಶೀಲ್ದಾರ್, ಒಬ್ಬ ಮ್ಯಾನೇಜರ್, ಒಬ್ಬ ಎಫ್ ಡಿಎ, ಒಬ್ಬ ಎಸ್ ಡಿಎ ಹಾಗೂ ಒಬ್ಬ ಡೇಟಾ ಎಂಟ್ರಿ ಆಪರೇಟರ್ ಹೊಂದಿರುವ ಚುನಾವಣಾ ವಿಭಾಗವನ್ನು ರಚಿಸುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದರು.

ನೋಡಲ್ ಅಧಿಕಾರಿ ನಿಯೋಜನೆ:

ಮತಗಟ್ಟೆಗಳ ಒಟ್ಟು ಸಂಖ್ಯೆ, ನಗರ ಪಾಲಿಕೆಗಳ ಒಳಗೆ ವಿಭಜಿತವಾದ ವಾರ್ಡ್‌ಗಳು ಹಾಗೂ ನಗರ ಪಾಲಿಕೆಗಳ ನಡುವೆ ವಿಭಜಿತವಾದ ವಾರ್ಡ್‌ಗಳಿಗೆ ಸಂಬಂಧಿಸಿದ ಡೇಟಾ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಹಾಗೂ ಜಿಬಿಎ ಚುನಾವಣಾ ವಿಭಾಗದೊಂದಿಗೆ ಸಮನ್ವಯ ಸಾಧಿಸುವ ಉದ್ದೇಶದಿಂದ ಐದು ನಗರ ಪಾಲಿಕೆಗಳಲ್ಲಿಯೂ ಅಪರ ಆಯುಕ್ತರು ಕಂದಾಯ ರವರನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲು ನಿರ್ದೇಶಿಸಿದರು.

ವಿಭಜಿತ ವಾರ್ಡ್‌ಗಳ ಪರಿಶೀಲನೆ ಮತ್ತು ದೃಢೀಕರಣ:

ಕರಡು ನಗರ ಪಾಲಿಕೆ ಮತದಾರರ ಪಟ್ಟಿ ಮಾಹಿತಿಯ ಆಧಾರದ ಮೇಲೆ ಎಲ್ಲಾ ವಾರ್ಡ್‌ಗಳನ್ನು, ವಿಶೇಷವಾಗಿ ವಿಭಜಿತ ವಾರ್ಡ್‌ಗಳನ್ನು, ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಅವರು ಸೂಚಿಸಿದರು. ಜೊತೆಗೆ, ವಿಭಜಿತ ವಾರ್ಡ್‌ಗಳಿಗೆ ಸಂಬಂಧಿಸಿದ ಮಾಹಿತಿಯ ನಿಖರತೆಯನ್ನು ನಗರ ಪಾಲಿಕೆ ಆಯುಕ್ತರು ಸ್ವತಂತ್ರವಾಗಿ ಪರಿಶೀಲಿಸಿ ದೃಢೀಕರಿಸುವಂತೆ ನಿರ್ದೇಶಿಸಿದರು.

ಚುನಾವಣೆ ವಿಭಾಗದ ವಿಶೇಷ ಆಯುಕ್ತರಾದ ರಾಮಚಂದ್ರನ್ ಆರ್ ರವರು ಮಾತನಾಡಿ, ಕರಡು ನಗರ ಪಾಲಿಕೆ ಮತದಾರರ ಪಟ್ಟಿಯ ಪರಿಶೀಲನೆಯ ವೇಳೆ ನಿಖರತೆ, ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಏಕರೂಪವಾದ ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ)ವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅತ್ಯಂತ ಅಗತ್ಯವೆಂದು ತಿಳಿಸಿದರು.

ಅಲ್ಲದೆ, ಎಲ್ಲಾ ವಾರ್ಡ್‌ಗಳಲ್ಲಿ ಕಡ್ಡಾಯವಾಗಿ ಸಂಪೂರ್ಣ ಪರಿಶೀಲನೆ ನಡೆಸಬೇಕು ಹಾಗೂ ‘ಫ್ರಂ–ಟು ಮ್ಯಾಟ್ರಿಕ್ಸ್’ ಅನ್ನು ಟು ದೃಷ್ಟಿಯಿಂದ ಪರಿಶೀಲಿಸಿ ಪೂರ್ಣ ಹೊಂದಾಣಿಕೆ, ಸಮ್ಮತತೆ ಮತ್ತು ಡೇಟಾ ಸಮಗ್ರತೆಯನ್ನು ಖಚಿತಪಡಿಸಬೇಕು ಎಂದು ಅವರು ಒತ್ತಿ ಹೇಳಿದರು.

ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರುಗಳಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ರಮೇಶ್ ಕೆ.ಎನ್, ಕಂದಾಯ ವಿಭಾಗದ ಅಪರ ಆಯುಕ್ತರಾದ ಮಂಜುನಾಥ ಸ್ವಾಮಿ, ರಂಗನಾಥ್, ಪ್ರಜ್ಞಾ ಅಮ್ಮೆಂಬಳ, ರಾಚಪ್ಪ, ಅಮರೇಶ್, ಸಹಾಯಕ ಆಯುಕ್ತರಾದ ಎಂ.ಶ್ರೀನಿವಾಸ್, ಕಂದಾಯ, ಐ.ಟಿ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.


Share

You cannot copy content of this page