ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ 3,802 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ಕೆ ಆಯುಕ್ತರಾದ ಕೆ.ಎನ್. ರಮೇಶ್ ರವರು ಸಾಂಕೇತಿಕವಾಗಿ 15 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಆಯುಕ್ತರು, ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ 2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಿಗೆ) ಯೋಜನೆ 2020 ರಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಗರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ದಿನಾಂಕ: 20.09.2024 ರಿಂದ 06.01.2025 ರ ವರೆಗೆ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಅಧಿನಿಯಮ 2019/20 ರ ಅಧ್ಯಾಯ-02 ರಂತೆ ಸಮೀಕ್ಷೆ ನಡೆಸಲಾಗಿರುತ್ತದೆ.
ಸರ್ಕಾರದ ಆಪ್ ಮೂಲಕ ಸಮೀಕ್ಷೆ ಕಾರ್ಯವನ್ನು ನಡೆಸಲಾಗಿದ್ದು, ಪಾಲಿಕೆಯ ಮಾರ್ಷಲ್‌ಗಳು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಕಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಹೊಲಿಗೆ ಶಿಕ್ಷಕರುಗಳಿಂದ ಸ್ಥಳ ಪರಿಶೀಲನೆ ಮುಖಾಂತರ ಸಮೀಕ್ಷೆಯನ್ನು ಕೈಗೊಳ್ಳಲಾಗಿರುತ್ತದೆ.
ದಕ್ಷಿಣ ನಗರ ಪಾಲಿಕೆ ಗುರುತಿಸಿರುವ ಇನ್ನುಳಿದ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಿಗಳಿಗೆ ಅವರು ವ್ಯಾಪಾರ ಮಾಡುವ ಸ್ಥಳದಲ್ಲೇ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಗುರುತಿನ ಚೀಟಿ ಪಡೆದಿರುವಂತ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಬೀದಿ ಬದಿ ವ್ಯಾಪಾರ ಅವಕಾಶ ನೀಡುತ್ತಿದ್ದು, ವ್ಯಾಪಾರದ ಸಂದರ್ಭದಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಗುರುತಿನ ಚೀಟಿ ಹೊಂದಿಲ್ಲದೇ ವ್ಯಾಪಾರ ಮಾಡುವುದು ಅಕ್ರಮವಾಗಿದ್ದು ಅಂತಹ ಬೀದಿ ಬದಿ ವ್ಯಾಪಾರಿಗಳ ಮಾಹಿತಿಯನ್ನು ಪಾಲಿಕೆಗೆ ನೀಡುವಂತೆ ಕೋರಿದರು.
ಈ ವೇಳೆ ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು, ಜಂಟಿ ಆಯುಕ್ತರಾದ ಶ್ರೀಮತಿ ಮಧು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
