ಸಮಗ್ರ ಸುದ್ದಿ

ವಾಹನಗಳ ರಫ್ತಿನಲ್ಲಿ ಭಾರತ ದಾಪುಗಾಲು; ಉತ್ಪಾದನೆಯಲ್ಲಿಯೂ ಗಣನೀಯ ವೃದ್ಧಿ | ನವದೆಹಲಿಯಲ್ಲಿ 60ನೇ ಎಸಿಎಂಎ ಶ್ರೇಷ್ಠತಾ ಪ್ರಶಸ್ತಿ ಪ್ರದಾನ

Share

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿಯಲ್ಲಿ ಭಾರತದ ಆಟೋಮೊಬೈಲ್ ವಲಯದ ಪರಿವರ್ತನಾತ್ಮಕ ಬೆಳವಣಿಗೆ ಕಾಣುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ನವದೆಹಲಿಯಲ್ಲಿ ನಡೆದ ಭಾರತೀಯ ಆಟೋಮೋಟಿವ್ ಬಿಡಿಭಾಗ ತಯಾರಕರ ಸಂಘದ (ಎಸಿಎಂಎ) 60ನೇ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಹಾಗೂ 11ನೇ ತಂತ್ರಜ್ಞಾನ ಶೃಂಗಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶೀಯ ಆಟೋಮೊಬೈಲ್ ಉದ್ಯಮದ ಬೆಳವಣಿಗೆಯಲ್ಲಿ ಬಿಡಿಭಾಗಗಳ ತಯಾರಿಕಾ ಉದ್ಯಮವೂ ಅಗಾಧವಾಗಿ ಬೆಳೆದಿದೆ. ನಾವೀನ್ಯತೆ, ಚಲನಶೀಲತೆ ಹಾಗೂ ಕ್ಷಮತೆಯಿಂದ ಮುನ್ನಡೆಯುತ್ತಿದೆ. ಅದಕ್ಕೆ ಅಗತ್ಯವಾದ ಎಲ್ಲಾ ಮೂಲಸೌಕರ್ಯಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಮುಂದಿನ ದಿನಗಳಲ್ಲಿಯೂ ಉತ್ತೇಜನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಮೋದಿ ಅವರ ದೂರದೃಷ್ಟಿ ಹಾಗೂ ಸ್ವಾವಲಂಬನೆಯ ತತ್ವದ ಅಡಿಯಲ್ಲಿ ಆಟೋಮೊಬೈಲ್ ಬಿಡಿಭಾಗಗಳ ಉದ್ಯಮಕ್ಕೆ ಅಗತ್ಯವಾದ ಪೂರಕ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸಲಾಗಿದೆ. ಹಿಂದೆಂದೂ ಇಲ್ಲದಷ್ಟು ಉತ್ತೇಜನ ನೀಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಪುನರುಚ್ಚರಿಸಿದರು.

ನರೇಂದ್ರ ಮೋದಿ ಅವರ ಆಡಳಿತ ಕಾಲದಲ್ಲಿ ಭಾರತದ ಆಟೋಮೊಬೈಲ್ ಉದ್ಯಮವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ. 2023–24ನೇ ಹಣಕಾಸು ವರ್ಷದಲ್ಲಿ 28.4 ದಶಲಕ್ಷ ವಾಹನಗಳನ್ನು ಉತ್ಪಾದನೆ ಮಾಡಲಾಗಿದ್ದರೆ, 2024–25ನೇ ಹಣಕಾಸು ವರ್ಷದಲ್ಲಿ ಸುಮಾರು 31 ದಶಲಕ್ಷ ವಾಹನ ಉತ್ಪಾದನೆ ಆಗಿದೆ. ಅದೇ ಅವಧಿಯಲ್ಲಿ ರಫ್ತು 4.5 ದಶಲಕ್ಷ ವಾಹನಗಳಿಂದ 5.3 ದಶಲಕ್ಷ ವಾಹನಗಳಿಗೆ ಹೆಚ್ಚಾಗಿದೆ. ಇದು ದೇಶೀಯ ಆಟೋಮೊಬೈಲ್ ಕ್ಷೇತ್ರದ ಸ್ಥಿರತೆ, ಜಾಗತಿಕ ಸ್ಪರ್ಧಾತ್ಮಕ ಗುಣವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಬೃಹತ್ ಕೈಗಾರಿಕಾ ಸಚಿವಾಲಯವು ಸುಮಾರು ರೂ.26,000 ಕೋಟಿ ವೆಚ್ಚದಲ್ಲಿ ಆಟೋ ಘಟಕಗಳಿಗಾಗಿ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಇದಕ್ಕೆ ಪೂರಕವಾಗಿ ರೂ.18,100 ಕೋಟಿ ವೆಚ್ಚದಲ್ಲಿ ಸುಧಾರಿತ ಬ್ಯಾಟರಿಗಳ ತಯಾರಿಕೆಗಾಗಿ PLI ಯೋಜನೆಯು 50 GWh ರಷ್ಟು ದೇಶೀಯ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.


Share

You cannot copy content of this page