ಸಮಗ್ರ ಸುದ್ದಿ

ಬೇಸಿಗೆ ಮುನ್ನೆಚ್ಚರಿಕೆಯಾಗಿ ಕುಡಿಯುವ ನೀರು ಹಾಗೂ ಜಾನುವಾರು ಮೇವು ಕೊರತೆಯಾಗದಂತೆ ಎಚ್ಚರಿಕೆ ವಹಿಸಿ- ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ

Share

ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಮುಂಬರುವ ಬೇಸಿಗೆಯ ಶಾಖ ತರಂಗ (Heat Wave) ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಜಿಲ್ಲಾಧಿಕಾರಿಗಳ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2025ರ ಜನವರಿಯಿಂದ ನವೆಂಬರ್ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 735.1 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 927.0 ಮಿ.ಮೀ ಮಳೆಯಾಗಿದೆ. ಇದು ಶೇ. 26 ರಷ್ಟು ಹೆಚ್ಚುವರಿಯಾಗಿದೆ. ಜಿಲ್ಲೆಯಲ್ಲಿ ಕೊಳವೆಬಾವಿಗಳ ಸರಾಸರಿ ಅಂತರ್ಜಲ ಮಟ್ಟವು ಗಮನಾರ್ಹವಾಗಿ ಸುಧಾರಿಸಿದೆ. 2019ರಲ್ಲಿ 77.06 ಮೀಟರ್‌ಗಳಷ್ಟಿದ್ದ ಸರಾಸರಿ ಸ್ಥಿರ ಅಂತರ್ಜಲ ಮಟ್ಟವು 2025ರ ವೇಳೆಗೆ 37.52 ಮೀಟರ್‌ಗಳಿಗೆ ತಲುಪಿದೆ ಎಂದರು.

ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ 138 ಕೆರೆಗಳ ಪೈಕಿ 18 ಕೆರೆಗಳು ಪೂರ್ಣ ತುಂಬಿದ್ದು, 15 ಕೆರೆಗಳು ಶೇ. 51 ರಿಂದ 99 ರಷ್ಟು ತುಂಬಿವೆ. ಕೆ.ಸಿ ವ್ಯಾಲಿ ಯೋಜನೆಯಡಿ ಜಿಲ್ಲೆಯ 132 ಕೆರೆಗಳ ಪೈಕಿ 51 ಕೆರೆಗಳು ಶೇ. 100 ರಷ್ಟು ಭರ್ತಿಯಾಗಿವೆ ಎಂದು ತಿಳಿಸಿದರು.

ಯರಗೊಳ್ ಜಲಾಶಯದ ಕುಡಿಯುವ ನೀರಿನ ಸಮರ್ಥ ಪೂರೈಕೆ ಹೊರತಾಗಿಯೂ ಜಿಲ್ಲೆಯ ಗ್ರಾಮೀಣ ಭಾಗದ 186 ಗ್ರಾಮಗಳು ಹಾಗೂ ನಗರ ಪ್ರದೇಶದ 31 ವಾರ್ಡ್‌ಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ‌. ಈ ಟ್ಯಾಂಕರ್ ಗಳ ದುರುಪಯೋಗವಾಗದಂತೆ ಕ್ರಮ ವಹಿಸಬೇಕು ಎಂದರು.

ನಗರಸಭೆ ಮತ್ತು ಪುರಸಭೆ ಗಳಲ್ಲಿ ಇಲಾಖೆಯ ಟ್ಯಾಂಕರ್ ಗಳನ್ನು ಹೊಂದಿರಬೇಕು ಎಂದು ಅವರು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಪ್ರಸ್ತುತ 2,92,627 ಟನ್‌ಗಳಷ್ಟು ಮೇವು ಲಭ್ಯವಿದ್ದು, ಇದು ಮುಂದಿನ 25 ವಾರಗಳಿಗೆ ಸಾಕಾಗಲಿದೆ.
ಜಿಲ್ಲೆಯಲ್ಲಿ 13,841 ಟನ್‌ಗಳಷ್ಟು ವಿವಿಧ ರಸಗೊಬ್ಬರಗಳು ದಾಸ್ತಾನು ಇವೆ. ಆದಾಗಿಯೂ ರೈತರು ಜೈವಿಕ ಗೊಬ್ಬರ ಉಪಯೋಗಿಸಲು ತಕ್ಕ ಪ್ರಚಾರ ಮಾಡಲು ತಿಳಿಸಿದರು.

2026ರ ಬೇಸಿಗೆಗಾಗಿ ‘ಹೀಟ್ ವೇವ್ ಆಕ್ಷನ್ ಪ್ಲಾನ್’ ಸಿದ್ಧಪಡಿಸಲಾಗಿದ್ದು, ನರೇಗಾ ಕೆಲಸದ ಸಮಯ ಬದಲಾವಣೆ, ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಹಾಗೂ ಒಆರ್‌ಎಸ್ ದಾಸ್ತಾನು ಇರಿಸಿಕೊಳ್ಳಲು ಸೂಚಿಸಲಾಗಿದೆ. ತೆರೆದ ಗಾಡಿಗಳಲ್ಲಿ ಹೆಚ್ಚಿದ ಹಣ್ಣುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.

ಬೆಂಕಿ ಅವಗಡಗಳನ್ನು ತಡೆಗಟ್ಟಲು ಜಿಲ್ಲೆಯ ಎಲ್ಲಾ ಅಗ್ನಿಶಾಮಕ ಠಾಣೆಗಳಲ್ಲಿ ನೀರಿನ ಸಂಗ್ರಹಣೆ ಹಾಗೂ ಉಪಕರಣಗಳ ಸನ್ನದ್ಧತೆಯನ್ನು ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿನ ಕೆಟ್ಟಿ ಹೋ್ ಆರ್ ಒ ಪ್ಲಾಂಟ್ ಗಳನ್ನು ಈ ಕೂಡಲೆ ದುರಸ್ತಿ ಮಾಡಿ ಜನರಿಗೆ ಕುಡಿಯುವ ನೀರನ್ನು ಒದಗಿಸಬೇಕೆಂದರು. ಅಲ್ಲದೆ ನೀರನ್ನು ಜನರು ಮಿತವಾಗಿ ಬಳಸುವಂತೆ ತಿಳಿಹೇಳಲು ಸೂಚಿಸಿದರು

ಜಿಲ್ಲಾಧಿಕಾರಿಗಳ ಹಾಗೂ ತಹಸೀಲ್ದಾರ್‌ಗಳ ಪಿ.ಡಿ ಖಾತೆಯಲ್ಲಿ ಪ್ರಸ್ತುತ ಒಟ್ಟು 917.91 ಲಕ್ಷ ರೂ. ಎಸ್‌ಡಿಆರ್‌ಎಫ್ ಹಾಗೂ ಎಸ್‌ಡಿಎಂಎಫ್ ಅನುದಾನ ಲಭ್ಯವಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಬೇಸಿಗೆ ನಿರ್ವಹಣೆ ಕುರಿತ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಚುರ ಪಡಿಸಲು ಸಂಬಂಧಪಟ್ಟ ಇಲಾಖೆ ಮಾಹಿತಿ ಶಿಕ್ಷಣ ಸಂವಹನ (ಐಇಸಿ) ಚಟುವಟಿಕೆಗಳನ್ನು ಕೈಗೊಂಡು ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಮುಳಬಾಗಿಲು ತಹಸೀಲ್ದಾರ್ ಗೀತಾ, ಕೆ. ಜಿ. ಎಫ್ ತಹಸೀಲ್ದಾರ್ ಭರತ್, ಮಾಲೂರು ತಹಸೀಲ್ದಾರ್ ರೂಪಾ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page