ಬೆಂಗಳೂರು: ಸಮಕಾಲೀನ ಜಾಗತಿಕ ಪರಿಸ್ಥಿತಿಯಲ್ಲಿ ಧರ್ಮಕಾರಣ ಹಾಗೂ ರಾಜಕಾರಣಗಳ ಒಳನೋಟವನ್ನು ಅತ್ಯಂತ ಸಮರ್ಥವಾಗಿ ಅಭಿವ್ಯಕ್ತಿಸಿದ ಶ್ರೇಷ್ಠ ನಾಟಕಗಳಲ್ಲಿ ತಲೆದಂಡ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಖ್ಯಾತ ರಂಗಕರ್ಮಿ ಸಿ ಬಸವಲಿಂಗಯ್ಯ ಹೇಳಿದರು.
ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜೈನ್ ಡಿಮ್ ಟು ಬಿ ಯೂನಿವರ್ಸಿಟಿ ಜಂಟಿ ಆಶ್ರಯದಲ್ಲಿ ಜಯನಗರದ ಜೈನ್ ಕಾಲೇಜಿನಲ್ಲಿ ಕನ್ನಡದ ಶ್ರೇಷ್ಠ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ 88ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ತಲೆದಂಡ ನಾಟಕವನ್ನು ಕುರಿತು ಮಾತನಾಡಿದರು.
ಗಿರೀಶ್ ಕಾರ್ನಾಡ್ ಅವರು ಈ ನಾಟಕವನ್ನು ಶ್ರೇಷ್ಠ ಚಿಂತಕ, ಮಾರ್ಕ್ಸ್ ವಾದಿ ಹಾಗೂ ಅಂಬೇಡ್ಕರ್ ಅನುಯಾಯಿ ಶರದ ಪಾಟೀಲ ಅವರಿಗೆ ಅರ್ಪಿಸಿದ್ದಾರೆ ಇದೇ ಈ ನಾಟಕದ ಆಶಯವನ್ನು ಪ್ರತಿಬಿಂಬಿಸುತ್ತದೆ. ಚಾರಿತ್ರಿಕ ಹಾಗೂ ಪೌರಾಣಿಕ ಪಾತ್ರಗಳ ಮೂಲಕ ಸಮಕಾಲೀನ ವಿದ್ಯಮಾನಗಳ ಮುಖಾಮುಖಿಯಾಗುವುದು ಗಿರೀಶ್ ಕಾರ್ನಾಡರ ನಾಟಕಗಳ ವೈಶಿಷ್ಟ್ಯವಾಗಿದೆ. ಅದರಲ್ಲಿಯೂ ತಲೆದಂಡ ಈ ದೃಷ್ಟಿಯಲ್ಲಿ ಕಾರ್ನಾಡ್ ಸೃಷ್ಟಿಸಿದ ಅದ್ಭುತ ನಾಟಕಗಳಲ್ಲಿ ಒಂದು. ಇಲ್ಲಿನ ಪ್ರತಿಯೊಂದು ಪಾತ್ರಗಳು ರಕ್ತ ಮಾಂಸ ತುಂಬಿ ಜೀವಿಸುತ್ತವೆ. ಜಾತಿ ನಿರ್ಮೂಲನೆಗೆ ಪ್ರಯತ್ನಿಸುವುದೇ ಅಪರಾಧ ಎಂದು ಪರಿಗಣಿಸಲ್ಪಟ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಉದ್ಯೋಗ ಮತ್ತು ಜಾತಿ ಸಮೀಕರಣವನ್ನು ತಮ್ಮದೇ ಆದ ದೃಷ್ಟಿಯಲ್ಲಿ ತಲೆದಂಡ ವಿಶ್ಲೇಷಿಸುತ್ತದೆ.
ಉತ್ತರ ಕರ್ನಾಟಕದ ಹಾಡು ಭಾಷೆಯಲ್ಲಿಯೇ ಗಟ್ಟಿ ಸಂಭಾಷಣೆಗಳ ಮೂಲಕ ಈ ನಾಟಕಗಳು ಕಟ್ಟಿಕೊಡುವ ಅನುಭೂತಿಯೇ ವಿಶಿಷ್ಟವಾದದ್ದು ಎಂದು ಬಸವಲಿಂಗಯ್ಯ ಹೇಳಿದರು. ಯಾವುದೇ ನಾಟಕ ಪ್ರದರ್ಶನವಾಗದೆ ಇದ್ದರೆ ರಂಗದ ಮೇಲೆ ಅಭಿವ್ಯಕ್ತಿ ಗೊಳ್ಳದೆ ಹೋದರೆ ಅದು ವ್ಯರ್ಥವಾಗುತ್ತದೆ, ಆದರೆ ಗಿರೀಶ್ ಕಾರ್ನಾಡರ ನಾಟಕಗಳು ಇಡೀ ದೇಶದ ಬೇರೆ ಬೇರೆ ಭಾಷೆಗಳ ರಂಗಭೂಮಿ ಗಳಲ್ಲಿ ಪ್ರದರ್ಶನಗೊಂಡು ಅದರ ಮಹತ್ವವನ್ನು ಸಾರಿ ಹೇಳುತ್ತವೆ ಎಂದರು.
ಯಾವುದೇ ಕಾಲಘಟ್ಟದಲ್ಲಿ ಆದರೂ ಆಗಿನ ಪ್ರಭುತ್ವಗಳು ತಮ್ಮ ಒಳ ಪಿತೂರಿಗಳಿಂದ ಅನುಭವಿಸುವ ಯಾತನೆಗಳು ಯಾವ ಬಗೆಯದ್ದಾಗಿರುತ್ತದೆ ಎಂಬುದನ್ನು ತಲೆದಂಡ ಶಕ್ತಿಯುತವಾಗಿ ಪ್ರತಿಪಾದಿಸುತ್ತದೆ ಎಂದ ಬಸಲಿಂಗಯ್ಯ ಅವರು, ಕರುನಾಡರ ಈ ನಾಟಕ ಎಲ್ಲ ಕಾಲಕ್ಕೂ ಎಲ್ಲ ಸಂದರ್ಭಕ್ಕೂ ಸೂಕ್ತವಾಗಿ ಹೊಂದಾಣಿಕೆಯಾಗುವಂತಹ ಅನನ್ಯವಾದ ಕೃತಿಯಾಗಿದೆ ಎಂದು ಬಣ್ಣಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು, ಸಾಹಿತ್ಯ ಮತ್ತು ಲಲಿತ ಕಲೆಗಳು ಇಂದಿನ ಯುವ ಪೀಳಿಗೆಗೆ ಅತ್ಯಂತ ಅಗತ್ಯ ಇಂದಿನ ಜನಾಂಗವನ್ನು ಜೀವಂತವಾಗಿಡಬೇಕಾದರೆ ಅವರು ಸಾಹಿತ್ಯದ ಬಳಿ ಬರದೆ ಹೋದರೆ, ನಾವೇ ಅವರಿರುವ ಜಾಗಕ್ಕೆ ಸಾಹಿತ್ಯವನ್ನು ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕಾರ್ಯಕ್ರಮಗಳನ್ನು ರೂಪಿಸಿ ಪುಸ್ತಕ ಪ್ರೀತಿ ಬಿತ್ತಲು ಪ್ರಯತ್ನಿಸುತ್ತಿದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜೈನ್ ಡಿಮ್ ಟು ಯೂನಿವರ್ಸಿಟಿ ಯ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ ಸಿನ್ಹಾ,
ಕಾಲೇಜಿನ ಭಾಷಾ ವಿಭಾಗದ ಸಂಯೋಜಕರಾದ ವೈ.ಯಂ. ರಾಜೇಶ್ವರಿ ಹಾಜರಿದ್ದರು.
