ಬೆಂಗಳೂರು: ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳ ತಂತ್ರಜ್ಞಾನ ಆಲೋಚನೆಗೆ, ಕಲ್ಪನೆಗೆ ಹಾಗೂ ಕನಸುಗಳಿಗೆ ಜೀವ ತುಂಬುವ ಶ್ರೇಷ್ಠತಾ ಕೇಂದ್ರ ಇಂದು ಲಭ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಎಸ್ ಕೆ ಎಸ್ ಜೆ ಟಿ ಐ ಸರ್ಕಾರಿ ಕಾಲೇಜಿನಲ್ಲಿ ಗ್ರೀನ್ ಸ್ಕಿಲ್ ಮತ್ತು ಹವಾಮಾನ ಕ್ರಿಯೆಗೆ ಅನ್ವಯಿಸುವ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದ ಉನ್ನತ ಶಿಕ್ಷಣದಲ್ಲಿ ಹೊಸ ಪರ್ವ ಆರಂಭಗೊಂಡಿದೆ. ಉದ್ಯೋಗ ಆಧಾರಿತ ಶಿಕ್ಷಣ ವ್ಯವಸ್ಥೆ ತರುವ ಭಾಗವಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೌಶಲ್ಯಕ್ಕೆ ಆದ್ಯತೆ ನೀಡುವ ಅಧ್ಯಾಯ ಪ್ರಾರಂಭಗೊಂಡಿದೆ ಎಂದರು. ಈ ಶ್ರೇಷ್ಠತಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚು ತೆರೆದುಕೊಳ್ಳಲಿವೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ಮೂರು ವರ್ಷಗಳಲ್ಲಿ ರೂ.30000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಇದರಿಂದ ಉದ್ಯೋಗ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳ ಪಾಲಿಗೆ ದೊರೆಯಲಿದೆ.
1M1B ಫೌಂಡೇಶನ್ ಮೈಕ್ರೋಸಾಫ್ಟ್ ಮತ್ತು MeitY ( ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ) ಸ್ಟಾರ್ಟಪ್ ಸಹಯೋಗದಲ್ಲಿ ಅತ್ಯಂತ ಉತ್ಕೃಷ್ಟತೆಯ ಶ್ರೇಷ್ಠತಾ ಕೇಂದ್ರ ಇದಾಗಿದೆ ಎಂದರು.
ಭಾರತದಲ್ಲಿಯೇ ಪ್ರಥಮ ಉನ್ನತ ಗುಣಮಟ್ಟದ ಎಐ ಪ್ರತಿಭೆಯನ್ನು ನಿರ್ಮಿಸುವುದು ಹಾಗೂ ಗ್ರೀನ್ ಎನರ್ಜಿ ಮತ್ತು ಪರಿಸರ ಕ್ಷೇತ್ರಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳನ್ನು ಹಾಗೂ ಕಲಿಕೆಯನ್ನು ಈ ಕೇಂದ್ರಗಳಲ್ಲಿ ವೃದ್ಧಿಸಿಕೊಳ್ಳಬಹುದಾ ಗಿರುವ ಮೊದಲ ಶ್ರೇಷ್ಠತಾ ಕೇಂದ್ರ ಈಗ ಬೆಂಗಳೂರಿನಲ್ಲಿ ಆರಂಭಗೊಂಡಿದೆ ಮುಂದಿನ ದಿನಗಳಲ್ಲಿ ಐದು ರಾಜ್ಯಗಳಲ್ಲಿ ಮೈಕ್ರೋಸಾಫ್ಟ್ ಈ ಕೇಂದ್ರಗಳನ್ನು ಸ್ಥಾಪಿಸಲಿದ್ದು ಮೊದಲ ಆದ್ಯತೆ, ಬೆಂಗಳೂರು ವಿದ್ಯಾರ್ಥಿಗಳಿಗೆ ದೊರೆತಿದೆ ಎಂದರು.
ಕರ್ನಾಟಕ ಈಗಾಗಲೇ ತಂತ್ರಜ್ಞಾನ ಹೊಸ ಆವಿಷ್ಕಾರಗಳು ಮತ್ತು ಪ್ರತಿಭೆಗಳಲ್ಲಿ ರಾಷ್ಟ್ರೀಯ ನಾಯಕತ್ವ ಹೊಂದಿದೆ. ಈಗ ಈ ನೂತನ ಗ್ರೀನ್ ಸ್ಕಿಲ್ ಮತ್ತು ಹವಾಮಾನ ಕ್ರಿಯೆಗೆ ಅನ್ವಯಿಸುವ ಕೃತಕ ಬುದ್ಧಿಮತ್ತೆಯ ಶ್ರೇಷ್ಠತಾ ಕೇಂದ್ರ ಸೇರ್ಪಡೆಗೊಂಡಿದೆ ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಸರ ಕಾಳಜಿಯನ್ನು ಕೊಂಡೊಯ್ಯಬೇಕಿದೆ ಎಂದು ಡಾಕ್ಟರ್ ಎಂ ಸಿ ಸುಧಾಕರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ಗ್ಲೋಬಲ್ ಮುಖ್ಯಸ್ಥ ಸೋಮಣ್ಣ ಪಾಲಕಂಡ, ಮೈಕ್ರೋಸಾಫ್ಟ್ ಸಿಎಸ್ಆರ್ ಮುಖ್ಯಸ್ಥೆ ಮಂಜು ದಾಸ್ಮಾನ್, ಮೈಕ್ರೋಸಾಫ್ಟ್ ಹಿರಿಯ ನಿರ್ದೇಶಕಿ ಚಿಂತಾಮಣಿ ಪದ್ಮನಾಭನ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬು ಜಿ ಚೌದರಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತಾರಾದ ಮಂಜುಶ್ರೀ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
