ಸಮಗ್ರ ಸುದ್ದಿ

ಬಳ್ಳಾರಿ-ಹೊಸಪೇಟೆಯ 3-4ನೇ ರೈಲು ಮಾರ್ಗ, NH 167ರ ಗುಡೇಬೆಳ್ಳೂರು- ಮಹಬೂಬ್‌ನಗರ ಮಾರ್ಗವನ್ನು ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು| ಸಂಪುಟ ನಿರ್ಧಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ವಾಗತ

Share

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮಹಬೂಬ್‌ನಗರ ಮಾರ್ಗವನ್ನು ಮೇಲ್ದರ್ಜೆಗೇರಿಸಿ ಚತುಷ್ಪಥಗೊಳಿಸಲು ಅನುಮೋದನೆ ನೀಡಿರುವುದನ್ನು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಕೇಂದ್ರ ಸಚಿವರು, ಇವೆರೆಡೂ ಅನುಮೋದನೆಗಳಿಂದ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ತಿಳಿಸಿದ್ದಾರೆ.

ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯು ಕರ್ನಾಟಕದ ಸರಕು ಸಾಗಣೆ ಮತ್ತು ಜನ ಸಂಚಾರದ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ದೃಢ ನಿರ್ಧಾರವಾಗಿದೆ. ಇದರ ಭಾಗವಾಗಿ 65 ಕಿ.ಮೀ. ಉದ್ದದ ಈ ರೈಲು ಮಾರ್ಗದ ವಿಸ್ತರಣೆಯು ಗಣಿಗಾರಿಕೆ, ಉಕ್ಕು ಉತ್ಪಾದನೆ ಹಾಗೂ ಕೈಗಾರಿಕೆಗಳ ಪೂರಕ ವ್ಯವಸ್ಥೆ ವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಎಂದಿದ್ದಾರೆ.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಂಪರ್ಕ ಸೌಲಭ್ಯವನ್ನು ಹೆಚ್ಚಿಸುವ ಮೂಲಕ ಈ ಯೋಜನೆಯು ಪ್ರಯಾಣಿಕರ ಸೇವೆಗಳನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ. ಸರಕು ಸಾಗಾಣಿಕೆಯನ್ನು ಇನ್ನಷ್ಟು ಸುಗಮಗೊಳಿಸುತ್ತದೆ ಹಾಗೂ ಐತಿಹಾಸಿಕ, ವಿಶ್ವ ಪಾರಂಪರಿಕ ತಾಣವಾದ ಹಂಪಿ ಮತ್ತು ತುಂಗಭದ್ರಾ ಅಣೆಕಟ್ಟೆಯಂತಹ ಪ್ರಸಿದ್ಧ ತಾಣಗಳಿಗೆ ಪ್ರವಾಸಿಗರ ಭೇಟಿಗೆ ಉತ್ತೇಜನ ನೀಡುತ್ತದೆ. ಈ ಯೋಜನೆಯ ಅನುಷ್ಠಾನದಿಂದ ವಾರ್ಷಿಕ ₹323 ಕೋಟಿಯಷ್ಟು ಬೃಹತ್ ಮೊತ್ತದ ಸರಕು ಸಾಗಾಣಿಕೆ ವೆಚ್ಚ ಉಳಿತಾಯ ಆಗುತ್ತದೆ ಹಾಗೂ ಇಂಗಾಲದ ಹೊರಸೂಸುವಿಕೆಯಲ್ಲಿ ಗಣನೀಯವಾಗಿ ತಗ್ಗುತ್ತಿದೆ. ಈ ಉಪಕ್ರಮವು ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮಹಬೂಬ್‌ನಗರ ಮಾರ್ಗವನ್ನು ಮೇಲ್ದರ್ಜೆಗೇರಿಸಿ ಚತುಷ್ಪಥಗೊಳಿಸಲು ಸಂಪುಟದ ಅನುಮೋದನೆ ನೀಡಿದ್ದು, ಇದರಿಂದ ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ಗೆ ದೊಡ್ಡ ಪ್ರಮಾಣದ ಉತ್ತೇಜನ ದೊರೆಯುತ್ತದೆ. ಮುಖ್ಯವಾಗಿ, ಈ ಯೋಜನೆಯು ಕರ್ನಾಟಕದ ರಾಯಚೂರು ಮತ್ತು ಹೈದರಾಬಾದ್ ನಡುವಿನ ತಡೆರಹಿತ ಸಂಪರ್ಕವನ್ನು ಬಲಪಡಿಸುತ್ತದೆ, ತ್ವರಿತಗತಿಯ ಸಂಚಾರಕ್ಕೆ ಪೂರಕವಾಗಿದೆ, ಪ್ರಯಾಣದ ಸಮಯವನ್ನು ಸುಮಾರು 50%ರಷ್ಟು ಕಡಿಮೆ ಮಾಡುತ್ತದೆ ಮತ್ತು ಪ್ರಾದೇಶಿಕ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ (NICDC) ಗಳು, ಔಷಧ ಮತ್ತು ವೈದ್ಯಕೀಯ ಕ್ಲಸ್ಟರ್‌ಗಳು ಮತ್ತು ಹೈದರಾಬಾದ್‌ನಲ್ಲಿ SEZ ಗಳನ್ನು ಸಂಯೋಜಿಸುವಾಗ ಪ್ರಮುಖ ಕೃಷಿ, ಕೈಗಾರಿಕಾ ವಲಯಗಳು ಮತ್ತು ಅನೇಕ ವ್ಯಾಪಾರ ಮಾರ್ಗಗಳನ್ನು ಸಂಪರ್ಕಿಸುವ ಮೂಲಕ ಸರಕು ಸಾಗಾಣಿಕೆಯ ದಕ್ಷತೆ ಮತ್ತು ಆರ್ಥಿಕ ಚಟುವಟಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ ಯೋಜನೆಯು ಸುಮಾರು 14.4 ಲಕ್ಷ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಮಗ್ರ ಬೆಳವಣಿಗೆಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂಬ ಅಂಶವನ್ನು ಸಚಿವರು ಒತ್ತಿ ಹೇಳಿದ್ದಾರೆ.


Share

You cannot copy content of this page