ಸಮಗ್ರ ಸುದ್ದಿ

ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನೂತನ ಪೊಲೀಸ್ ವಸತಿ ಗೃಹ ಉದ್ಘಾಟಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್|ರಾಜ್ಯದಲ್ಲಿ ಸುಮಾರು 40 ಸಾವಿರ ವಸತಿ ಗೃಹ ನಿರ್ಮಾಣ

Share

ಕೊಡಗು: ರಾಜ್ಯದಲ್ಲಿ ಪೊಲೀಸರಿಗಾಗಿ ಸುಮಾರು 40 ಸಾವಿರ ವಸತಿ ಗೃಹ ನಿರ್ಮಿಸಲಾಗಿದ್ದು, ಇನ್ನೂ 60 ಸಾವಿರ ವಸತಿ ಗೃಹ ನಿರ್ಮಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ‌ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹವನ್ನು ಉದ್ಘಾಟಿಸಿ ಮಾತನಾಡಿದರು.

ಸಣ್ಣ ಸಣ್ಣ ಮನೆಯಲ್ಲಿ ವಾಸ ಮಾಡುವುದನ್ನು ಮನಗಂಡು ಪೊಲೀಸರಿಗೆ ವಸತಿ ಸೌಕರ್ಯ ‌ಒದಗಿಸಲಾಗುತ್ತಿದೆ. ಅದರಂತೆ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮದಿಂದ 2030 ರ ವರೆಗೂ ಹಂತ ಹಂತವಾಗಿ ವಸತಿ ಕಲ್ಪಿಸಲಾಗುತ್ತದೆ ಎಂದು‌ ಜಿ.ಪರಮೇಶ್ವರ ಅವರು ವಿವರಿಸಿದರು.

ಹಿಂದೆ 18 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿತ್ತು, ಈಗ 33 ಲಕ್ಷ ರೂ ವೆಚ್ಚ ಆಗಲಿದೆ. ಪೊಲೀಸರು ನೆಮ್ಮದಿಯ ಜೀವನ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ.
ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಕೆಳಸ್ತರದಲ್ಲಿ ಕೆಲಸ ನಿರ್ವಹಿಸುವ ಕಾನ್ಸ್ಟೇಬಲ್ ಗಳಿಗೆ ವೇತನ ಹೆಚ್ಚಿಸಲಾಗಿದೆ.
ಎಂದು‌ ತಿಳಿಸಿದರು.

ಇಡೀ ದೇಶದಲ್ಲಿಯೇ ರಕ್ಷಣೆ, ಸುರಕ್ಷತೆಯಲ್ಲಿ ಕನಾ೯ಟತ ರಾಜ್ಯ ಪೊಲೀಸ್ ಪ್ರಥಮ ಸ್ಥಾನದಲ್ಲಿದೆ. ಹಗಲು, ರಾತ್ರಿ, ಮಳೆ, ಬಿಸಿಲು, ನಿದ್ರೆ ಇಲ್ಲದೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಆ ನಿಟ್ಟಿನಲ್ಲಿ ಗೌರವಿಸಬೇಕು. ಅದನ್ನು ಬಿಟ್ಟು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಯಾರು ಮಾಡಬಾರದು ಎಂದರು.

ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2023 ರಲ್ಲಿ ನೀಡಿದ್ದ 593 ಭರವಸೆಗಳಲ್ಲಿ ಅರ್ಧಕ್ಕೂ ಹೆಚ್ಚು ಭರವಸೆ ಈಡೇರಿಸಿದೆ. ಇನ್ನೂ ಎರಡು ವರ್ಷದಲ್ಲಿ ಎಲ್ಲಾ ಭರವಸೆ ಈಡೇರಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.

ಸರ್ಕಾರ 1.36 ಸಾವಿರ ಕೋಟಿ ರೂ. ಪಂಚ ಗ್ಯಾರಂಟಿಗೆ ಖರ್ಚು ಮಾಡಿದೆ. ಬಡವರು ಇತರರಂತೆ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.

ಸರ್ಕಾರ ಜನಪರವಾಗಿದ್ದು, ನುಡಿದಂತೆ ನಡೆಯುತ್ತಿದೆ. ಸರ್ಕಾರ ಸುಭದ್ರವಾಗಿದ್ದು, ಮಾರ್ಚ್ 6 ರಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಬಜೆಟ್ ಮಂಡಿಸಲಿದ್ದಾರೆ ಎಂದು ಜಿ.ಪರಮೇಶ್ವರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ.ಮಂಥರ್ ಗೌಡ, ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ‌ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ‌ ಉತ್ತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಉಪಸ್ಥಿತರಿದ್ದರು.


Share

You cannot copy content of this page