ಸಮಗ್ರ ಸುದ್ದಿ

ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕಾಪ್ಟರ್ ಜೋಡಣೆ ಘಟಕಕ್ಕೆ ವರ್ಚುವಲ್ ಮೂಲಕ ಚಾಲನೆ

Share

ಕೋಲಾರ: ದೇಶದಲ್ಲಿಯೇ ಮೊಟ್ಟ ಮೊದಲ ಹೆಲಿಕಾಪ್ಟರ್
ಜೋಡಣೆ ಘಟಕ ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಸ್ಥಾಪನೆಯಾಗಿದ್ದು, ಇಂದು ಪ್ರಧಾನಿ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಈ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೇಮಗಲ್‌ನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಐಫೋನ್ ತಯಾರಿಕಾ ಘಟಕ ಹಾಗೂ ರಕ್ಷಣಾ ವ್ಯವಸ್ಥೆಯ ಉಪಕರಣಗಳ ಇನ್ನಿತರ ಘಟಕಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಟಾಟಾ ಆಡ್ವಾನ್ಸ್ ಸಿಸ್ಟಮ್ಸ್ ಕಂಪೆನಿ, ಇದೀಗ ವೇಮಗಲ್ ಕೈಗಾರಿಕಾ ಪ್ರದೇಶದ ವೇಮಗಲ್-ಕುರುಗಲ್ ಮಧ್ಯ ಭಾಗದಲ್ಲಿ ಹೆಲಿಕಾಪ್ಟರ್ ಜೋಡಣೆ ಕಾರ್ಖಾನೆಯನ್ನು ಸ್ಥಾಪಿಸುವ ಸಂಬಂಧ ಫ್ರಾನ್ಸ್‌ನ ಅತಿ ದೊಡ್ಡ ವೈಮಾನಿಕ ಸಂಸ್ಥೆ ಎರ್‌ಬಸ್ ನೊಂದಿಗೆ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿತ್ತು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಪೊಲೀಸ್ ವರಿಷ್ಠಾಧಿಕಾರಿ ಕನಿಕಾ ಸಿಕ್ರಿವಾಲ್ ಹಿರಿಯ ಅಧಿಕಾರಿಗಳ ತಂಡ ಖುದ್ದು ವೇಮಗಲ್‌ಗೆ ಭೇಟಿ ನೀಡಿ, ರಕ್ಷಣೆ, ಬಿಗಿ ಭದ್ರತೆ ಕುರಿತ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

ಕೋಲಾರ ತಾಲ್ಲೂಕಿನ ವೇಮಗಲ್ ಕುರಗಲ್ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಘಟಕ ದೇಶದಲ್ಲೇ ಮೊದಲ ಮಿನಿ ನಾಗರಿಕ ಹೆಲಿಕಾಪ್ಟರ್ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮೊದಲ ವರ್ಷದಲ್ಲಿ ವರ್ಷಕ್ಕೆ ಎಚ್125 ಮಾದರಿಯ 10 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಈ ಹೆಲಿಕಾಪ್ಟರ್ ಗಳು ತುರ್ತು ವೈದ್ಯಕೀಯ ಸೇವೆ, ಪ್ರವಾಸೋದ್ಯಮ, ರಕ್ಷಣಾ ಕಾರ್ಯಾಚರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಳಕೆಯಾಗಲಿದ್ದು, ಮುಂದಿನ ಹಂತಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಯೋಜನೆಯಾಗಿದೆ.

ವೇಮಗಲ್ ಕೈಗಾರಿಕಾ ಪ್ರದೇಶವು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಚೆನ್ನೈ ಬೆಂಗಳೂರು ಎಕ್ಸ್‌ ಪ್ರೆಸ್ ಹೆದ್ದಾರಿಗೆ ಸಮೀಪದಲ್ಲಿದ್ದು, ಸಾಗಾಣಿಕೆ ಮತ್ತಿತರ ದೃಷ್ಟಿಯಿಂದ ಅನುಕೂಲಕರವಾಗಿದೆ. ಈ ಘಟಕದ ಆರಂಭದಿಂದಾಗಿ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಾಗಲಿದ್ದು, ಕೋಲಾರ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಿದೆ.


Share

You cannot copy content of this page