ಕೋಲಾರ: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಏರ್‌ಬಸ್ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕದ ವೇಮಗಲ್‌ನಲ್ಲಿ ದೇಶದ ಮೊದಲ ಖಾಸಗಿ ವಲಯದ ‘ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ’ದ ಐತಿಹಾಸಿಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ವರ್ಚುವಲ್ ಮೂಲಕ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,
ಈ ಉತ್ಪಾದನಾ ಘಟಕವು ‘ಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ದೊಡ್ಡ ಬಲ ನೀಡಲಿದ್ದು, ಭಾರತದ ಖಾಸಗಿ ವಲಯವು ಮೊದಲ ಬಾರಿಗೆ ಅತ್ಯಾಧುನಿಕ ಹೆಲಿಕಾಪ್ಟರ್‌ಗಳ ತಯಾರಿಕೆ, ಪರೀಕ್ಷೆ ಮತ್ತು ನಿರ್ವಹಣೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿ ಉತ್ಪಾದನೆಯಾಗಲಿರುವ ‘ಏರ್‌ಬಸ್ H125’ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಹಾಗೂ ಸರ್ಕಾರದ ‘ಉಡಾನ್’ ಯೋಜನೆಯಡಿ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಸಾಧನವಾಗಲಿದೆ.
ಮೌಂಟ್ ಎವರೆಸ್ಟ್ ಶಿಖರದ ಮೇಲೆ ಇಳಿದ ಇತಿಹಾಸವಿರುವ H125 ಹೆಲಿಕಾಪ್ಟರ್, ಭಾರತದ ಸವಾಲಿನ ಹವಾಮಾನ ಮತ್ತು ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅತ್ಯಂತ ಸಮರ್ಥವಾಗಿದೆ. ಈ ಘಟಕದಲ್ಲಿ ನಾಗರಿಕ ಆವೃತ್ತಿಯ ಜೊತೆಗೆ ಅದರ ಮಿಲಿಟರಿ ಆವೃತ್ತಿಯಾದ H125M ಅನ್ನು ಸಹ ತಯಾರಿಸುವ ಸಾಧ್ಯತೆಯಿದೆ.
ಮೊದಲ ‘ಮೇಡ್ ಇನ್ ಇಂಡಿಯಾ’ ಹೆಲಿಕಾಪ್ಟರ್ 2027ರ ಆರಂಭದಲ್ಲಿ ಹೊರಬರುವ ನಿರೀಕ್ಷೆಯಿದ್ದು, ಇದನ್ನು ದಕ್ಷಿಣ ಏಷ್ಯಾದ ನೆರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗುವುದು.
ಇದು ಟಾಟಾ ಮತ್ತು ಏರ್‌ಬಸ್ ನಡುವಿನ ಎರಡನೇ ಅತಿದೊಡ್ಡ ಸಹಭಾಗಿತ್ವವಾಗಿದ್ದು, ಈ ಹಿಂದೆ ಸಿ295 ಮಿಲಿಟರಿ ವಿಮಾನ ಉತ್ಪಾದನಾ ಘಟಕಕ್ಕಾಗಿ ಇವು ಕೈಜೋಡಿಸಿದ್ದವು.
ಈ ಯೋಜನೆಯಿಂದ ಸ್ಟಾರ್ಟ್ ಅಪ್, ಎಂ.ಎಸ್.ಎಂ.ಇ, ಇನ್ನೋವೇಶನ್ ಗೆ ಅನುಕೂಲವಾಗಲಿದೆ. ಭಾರತ ಮತ್ತು ಪ್ರಾನ್ಸ್ ನ ದ್ವಿಪಕ್ಷಿಯ ಸಂಬಂಧ ವಿಶೇಷವಾಗಿದೆ. ಬಯೋಟೆಕ್ನಾಲಜಿ, ಡಿಜಿಟಲ್ ಟೆಕ್ನಾಲಜಿ, ಏರೋನಾಟಿಕ್ಸ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದೆ ಎಂದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸ್ಥಾಪಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷರು ಜಂಟಿಯಾಗಿ H125 ಹೆಲಿಕಾಪ್ಟರ್‌ಗಳ ಅಂತಿಮ ಅಸೆಂಬ್ಲಿ ಲೈನ್ ಅನ್ನು ವರ್ಚುವಲ್ ಮೂಲಕ ಅನಾವರಣಗೊಳಿಸಿದ್ದಾರೆ ಎಂದು ಹೇಳಿದರು.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಏರ್‌ಬಸ್ ಹೆಲಿಕಾಪ್ಟರ್ಸ್ ಸಂಸ್ಥೆಗಳ ಈ ಹೊಸ ಉಪಕ್ರಮವು ಉನ್ನತ ಮಟ್ಟದ ಉತ್ಪಾದನಾ ಕ್ಷೇತ್ರದಲ್ಲಿ ಮೈತ್ರಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.ಈ H125 ಕಾರ್ಯಕ್ರಮದ ಹೂಡಿಕೆಯು 1,000 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಇರಲಿದ್ದು, ದೇಶದ ಯುವ ಪೀಳಿಗೆಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದರು.
ವಿಶ್ವಾಸಾರ್ಹತೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರಾಗಿರುವ H125 ಹೆಲಿಕಾಪ್ಟರ್‌ಗಳು ವಿವಿಧ ಕಾರ್ಯಾಚರಣಾ ಪರಿಸ್ಥಿತಿಗಳಲ್ಲಿ ಸಹಕಾರಿಯಾಗಲಿವೆ.2014 ರಿಂದ ಭಾರತದ ಆರ್ಥಿಕ ನೀತಿಯ ಅಡಿಗಲ್ಲಾಗಿರುವ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಅಭಿಯಾನದ ಅಡಿಯಲ್ಲಿ ಭಾರತವು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಸಾಧಿಸಲು ಬದ್ಧವಾಗಿದೆ ಎಂದರು.
ರಕ್ಷಣಾ ವಲಯದಲ್ಲಿ ಖಾಸಗಿ ಪಾಲುದಾರಿಕೆಯನ್ನು ಹೆಚ್ಚಿಸಲು ಕೈಗೊಂಡ ಸುಧಾರಣೆಗಳ ಫಲವಾಗಿ, ಇಂದು ಒಟ್ಟು ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಪಾಲು ಸುಮಾರು ಶೇಕಡ 25 ರಷ್ಟು ಭಾಗದಷ್ಟು ತಲುಪಿದೆ.ಭಾರತದ ರಕ್ಷಣಾ ರಫ್ತು ಕೂಡ ಗಣನೀಯವಾಗಿ ಹೆಚ್ಚಾಗಿದ್ದು, ವಿಶ್ವದ ಪ್ರಮುಖ ರಕ್ಷಣಾ ರಫ್ತುದಾರ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ. ಕಳೆದ ಒಂದು ದಶಕದಿಂದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉತ್ಪಾದನಾ ಆಧಾರಿತ ಪ್ರೋತ್ಸಾಹಕಗಳ ಮೂಲಕ ಕೈಗಾರಿಕಾ ಪ್ರಗತಿಯನ್ನು ಸಾಧಿಸಲಾಗುತ್ತಿದೆ. ಈ ಬೆಳವಣಿಗೆಯಿಂದಾಗಿ MSME ಮತ್ತು ಪೂರಕ ವಲಯಗಳಿಗೆ ಹೆಚ್ಚಿನ ಉತ್ತೇಜನ ಸಿಕ್ಕಿದ್ದು, ಅವುಗಳ ಸಂಖ್ಯೆ 16,000 ಕ್ಕಿಂತಲೂ ಹೆಚ್ಚು ಹೆಚ್ಚಾಗಿದೆ ಎಂದರು.
ವಿದೇಶಿ ಕಂಪನಿಗಳು ತಂತ್ರಜ್ಞಾನ ವರ್ಗಾವಣೆಯ ಮೂಲಕ ಈ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಜಾಗತಿಕ ಭದ್ರತಾ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಿದೆ.ಈ ಯೋಜನೆಯು ಕೇವಲ ದೇಶೀಯ ಬೇಡಿಕೆಯನ್ನು ಪೂರೈಸುವುದಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಸಾಬೀತುಪಡಿಸಲಿದೆ ಎಂದು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ಈ ಘಟಕವು ರಾಜ್ಯದಲ್ಲಿ ಕಾರ್ಯಾರಂಭ ಮಾಡುತ್ತಿರುವುದು ಐತಿಹಾಸಿಕ ಸಾಧನೆಯಾಗಿ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.
ಈ ಘಟಕಕ್ಕೆ ನಾನು ಕೈಗಾರಿಕಾ ಸಚಿವನಾದ ಮೇಲೆ 17 ಎಕರೆ ಜಾಗ ಕೊಟ್ಟಿದ್ದು ದಾಖಲೆ ಅವಧಿಯ ಒಂದೂವರೆ ವರ್ಷದಲ್ಲಿ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯ ಎಂದರು.
ಫ್ರಾನ್ಸ್, ಅಮೆರಿಕ, ಬ್ರೆಜಿಲ್ ನಂತರ ನಮ್ಮಲ್ಲಿ ಜಗತ್ತಿನ ನಾಲ್ಕನೆಯ ಎಚ್125 ಹೆಲಿಕಾಪ್ಟರ್ ತಯಾರಿಕೆ ಮತ್ತು ಅಂತಿಮ ಜೋಡಣೆ ಘಟಕ ಬಂದಿರುವುದು ಈ ವಲಯಕ್ಕೆ ಮತ್ತಷ್ಟು ಬಲ ತರಲಿದೆ. ಜೊತೆಗೆ ನಿರ್ವಹಣೆ, ದುರಸ್ತಿ ಮತ್ತು ಸ್ಥಾವರವೂ ಆರಂಭಗೊಂಡಿರುವುದು ರಾಜ್ಯದ ಕೈಗಾರಿಕಾಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಇಲ್ಲಿ ಮೊದಲಿಗೆ ವರ್ಷಕ್ಕೆ 10 ಹೆಲಿಕಾಪ್ಟರುಗಳನ್ನು ತಯಾರಿಸಲಾಗುವುದು. ಮುಂದಿನ ಎರಡು ದಶಕಗಳಲ್ಲಿ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ಇಲ್ಲಿ ಏವಿಯಾನಿಕ್ಸ್, ಹೈಡ್ರಾಲಿಕ್ ಸರ್ಕ್ಯೂಟ್, ಬಿಡಿಭಾಗಗಳು, ಇಂಧನ ವ್ಯವಸ್ಥೆ ಮತ್ತು ಎಂಜಿನ್ನುಗಳ ತಯಾರಿಕೆ ಸೇರಿದಂತೆ ಹಲವು ಮಹತ್ವದ ಚಟುವಟಿಕೆಗಳು ನಡೆಯಲಿವೆ. ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ತೀವ್ರ ಸ್ಪರ್ಧೆಯನ್ನು ಎದುರಿಸಿ, ರಾಜ್ಯವು ಈ ಯೋಜನೆಯನ್ನು ಗೆದ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಏರ್ ಬಸ್ ಕಂಪನಿಯು ಜಾಗತಿಕ ಮಟ್ಟದಲ್ಲಿ ಏಕ ಎಂಜಿನ್ ಹೆಲಿಕಾಪ್ಟರುಗಳ ಕ್ಷೇತ್ರದಲ್ಲಿ 4,300 ಹೆಲಿಕಾಪ್ಟರುಗಳೊಂದಿಗೆ, ಮಾರುಕಟ್ಟೆಯಲ್ಲಿ ಶೇಕಡ 80ರಷ್ಟು ಪಾಲು ಹೊಂದಿದೆ. ಈ ಹೆಲಿಕಾಪ್ಟರುಗಳು ಇದುವರೆಗೂ 38 ಮಿಲಿಯನ್ ಗಂಟೆಗಳಷ್ಟು ಕಾಲ ಹಾರಾಟ ನಡೆಸಿ ದಾಖಲೆ ನಿರ್ಮಿಸಿವೆ. ರಾಜ್ಯದಲ್ಲಿ ಎಚ್125 ದರ್ಜೆಯ ಹೆಲಿಕಾಪ್ಟರ್ ತಯಾರಿಕೆಗೆ ಬೇಕಾದ ವಿಶ್ವಾಸಾರ್ಹತೆ ಮತ್ತು ಎಂಜಿನಿಯರಿಂಗ್ ಪರಿಣತಿ ಇದೆ. ಈ ವಲಯದಲ್ಲಿ ರಾಜ್ಯ ಸರಕಾರವು ಕೇಂದ್ರ ಸರಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಆಸಕ್ತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಕೋಲಾರದ ವೇಮಗಲ್‌ನ ಉತ್ಪಾದನಾ ಸಂಕೀರ್ಣದಲ್ಲಿ ನಡೆದ ಸಮಾರಂಭದಲ್ಲಿ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು, ಪ್ರಾನ್ಸ್ ನ ರಕ್ಷಣಾ ಸಚಿವ ಕ್ಯಾಥರೀನ್ ವಾಟ್ರಿನ್, ಟಾಟಾ ಸನ್ಸ್ ಅಧ್ಯಕ್ಷರಾದ
ಎನ್. ಚಂದ್ರಶೇಖರನ್ ಮತ್ತಿತರರು ಉಪಸ್ಥಿತರಿದ್ದರು.
