ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ಯುಕೆ ಗೌರವಾನ್ವಿತ ಉಪ ಪ್ರಧಾನಿ ಡೇವಿಡ್ ಲ್ಯಾಮಿ ಮತ್ತು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಲಿಂಡಿ ಕ್ಯಾಮರೂನ್ ಅವರ ಸಮಕ್ಷಮದಲ್ಲಿ ಭಾರತ-ಯುಕೆ ಕಡಲತಡಿಯ “ಗಾಳಿ ಕಾರ್ಯಪಡೆ”ಗೆ ಚಾಲನೆ ನೀಡಿ ಮಾತನಾಡಿದರು.
ಭಾರತ-ಯುಕೆ ಕಡಲತಡಿಯ “ಗಾಳಿ ಕಾರ್ಯಪಡೆ” ಒಂದು ವಿಶ್ವಾಸಾರ್ಹ ಪಡೆ ಎಂದು ಬಣ್ಣಿಸಿದ ಜೋಶಿ, ಇದು ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ಒಟ್ಟಾಗಿ ನಿಜವಾದ ಸವಾಲೆದುರಿಸುವ ಕಾರ್ಯ ಸಾಧ್ಯತೆಯಿದೆ ಎಂದರು.
ಭಾರತ-ಯುಕೆ ಕಡಲತಡೆ ಗಾಳಿ ಕಾರ್ಯಪಡೆ (ಆಫ್‌ಶೋರ್ ವಿಂಡ್ ಟಾಸ್ಕ್‌ಫೋರ್ಸ್) ಕಾರ್ಯನಿರತ ಕಾರ್ಯ ವಿಧಾನವಾಗಿದೆ. ಭಾರತದ ಕಡಲತಡೆ ಗಾಳಿ ಪಡೆ ಶುದ್ಧ ಪರಿಸರ ವ್ಯವಸ್ಥೆ ಕಾರ್ಯತಂತ್ರಕ್ಕೆ ನಾಯಕತ್ವ ಮತ್ತು ಸಮನ್ವಯ ಸಾಧಿಸಲು ಹಾಗೂ “ವಿಷನ್ 2035″ಅಡಿ ಇದನ್ನು ರಚಿಸಲಾಗಿದೆ ಎಂದು ಹೇಳಿದರು.
ಭಾರತದ ಪರಿವರ್ತನೆಯ ಮುಂದಿನ ಹಂತವು ವಿಶ್ವಾಸಾರ್ಹತೆಯಾಗಿದೆ. ಈ ನಿಟ್ಟಿನಲ್ಲಿ ನಾವು ಗ್ರಿಡ್ ಸ್ಥಿರತೆ, ಕೈಗಾರಿಕೆ ಮತ್ತು ಇಂಧನ ಸುರಕ್ಷತೆಯನ್ನು ಬಲಪಡಿಸಬೇಕಿದ್ದು, ಈ ಪಯಣದಲ್ಲಿ ಕಡಲತಡಿ ಗಾಳಿ ಕಾರ್ಯಪಡೆ ಪಾತ್ರ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಗುಜರಾತ್, ತಮಿಳುನಾಡು ಕರಾವಳಿ ಸಮೀಕ್ಷೆ: ಗುಜರಾತ್ ಮತ್ತು ತಮಿಳುನಾಡಿನ ಕರಾವಳಿಯಲ್ಲಿ ಭರವಸೆಯ ಕಡಲತಡಿ ಪವನ ವಲಯಗಳನ್ನು ಗುರುತಿಸಿದ್ದು, ರಾಷ್ಟ್ರೀಯ ಪವನ ಇಂಧನ ಸಂಸ್ಥೆ ಮೂಲಕ ಅಗತ್ಯ ಅಧ್ಯಯನ ಹಾಗು ಸಮೀಕ್ಷೆ ನಡೆಸಲಾಗಿದೆ ಎಂದರು.
₹7,453 ಕೋಟಿ ಅಂತರನಿಧಿ ಯೋಜನೆ: ಕಡಲತಡಿಯ ಪವನ ಯೋಜನೆಗಳನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಆರಂಭದಲ್ಲಿ ₹7,453 ಕೋಟಿ ಒಟ್ಟು ವೆಚ್ಚದೊಂದಿಗೆ (ಸುಮಾರು £710 ಮಿಲಿಯನ್) ಕಾರ್ಯಸಾಧ್ಯತಾ ಅಂತರ ನಿಧಿ ಯೋಜನೆ ಪರಿಚಯಿಸಿದೆ ಎಂದರು.
ಕಡಲತಡಿ ಗಾಳಿ (ಆಫ್ ಶೋರ್) ಮತ್ತು ಭಾರತದ ಹಸಿರು ಹೈಡ್ರೋಜನ್ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿನ ಸಮನ್ವಯತೆ ಬಗ್ಗೆ ವಿವರಿಸಿದ ಜೋಶಿ, ಭಾರತ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಮಾನದಂಡಗಳನ್ನು ಸಾಧಿಸಿದೆ ಎಂದು ಹೇಳಿದರು.
ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ ₹279 ಸರಿಸುಮಾರು (£2.65) ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಹಸಿರು ಅಮೋನಿಯಾ ಬೆಲೆ ಸಹ ಪ್ರತಿ ಕೆಜಿಗೆ ₹49.75 (£0.47) ತಲುಪಿದೆ ಎಂದು ಗಮನ ಸೆಳೆದರು.
ಕಡಲತಡಿಯ ಗಾಳಿಯು ಉದಯೋನ್ಮುಖ ಕರಾವಳಿ ಕೈಗಾರಿಕಾ ಮತ್ತು ಹಸಿರು ಹೈಡ್ರೋಜನ್ ಕ್ಲಸ್ಟರ್‌ಗಳಿಗೆ ಉತ್ತಮ ಗುಣಮಟ್ಟದ ನವೀಕರಿಸಬಹುದಾದ ಇಂಧನವನ್ನು ಒದಗಿಸಬಹುದು, ಇಂಧನ ಭದ್ರತೆ ಮತ್ತು ಕೈಗಾರಿಕಾ ಸ್ಪರ್ಧೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.
272 GW ದಾಟಿದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ: ಭಾರತದ ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 272 ಗಿಗಾವ್ಯಾಟ್ ದಾಟಿದೆ. ಅದರಲ್ಲಿ 141 GWಗಿಂತ ಹೆಚ್ಚು ಸೌರ ಮತ್ತು 55 GWಗಿಂತ ಹೆಚ್ಚು ಪವನ ಸಾಮರ್ಥ್ಯ ಸೇರಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಭಾರತ 35 gwಗಿಂತ ಹೆಚ್ಚು ಸೌರ ಮತ್ತು 4.61 gwಗಿಂತ ಹೆಚ್ಚು ಪವನ ಸಾಮರ್ಥ್ಯ ಸೇರ್ಪಡೆ ಮಾಡಿದೆ ಎಂದು ಪ್ರಲ್ಹಾದ ಜೋಶಿ ವಿವರಿಸಿದರು.
ಕಡಲತಡಿಯ ಪವನ ಶಕ್ತಿ ಭಾರತದ ಶುದ್ಧ, ವಿಶ್ವಾಸಾರ್ಹ ಮತ್ತು ಸ್ವಾವಲಂಬಿ ಇಂಧನಕ್ಕೆ ಭವಿಷ್ಯದಲ್ಲಿ ಬಲವಾದ ಆಧಾರಸ್ತಂಭವಾಗಿ ಹೊರಹೊಮ್ಮಬಹುದು ಮತ್ತು ವಿಷನ್ 2035ರಡಿಯಲ್ಲಿ ಭಾರತ-ಯುಕೆ ಸಹಕಾರದ ಪ್ರಮುಖ ಅಂಶವಾಗಿ ಹೊರಹೊಮ್ಮಬಹುದು ಎಂದು ಪ್ರಲ್ಹಾದ್ ಜೋಶಿ ಆಶಿಸಿದರು.
