ಪರಿಸರ

ಸಫಾರಿ ಷರತ್ತುಗಳ ಕಟ್ಟುನಿಟ್ಟಿನ ಜಾರಿಗೆ ಈಶ್ವರ ಖಂಡ್ರೆ ಸೂಚನೆ |ನಾಳೆಯಿಂದ ಸಫಾರಿ ಪುನಾರಂಭ: ಈಶ್ವರ ಖಂಡ್ರೆ

Share

ಮೈಸೂರು: ಮಾನವ-ಹುಲಿ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 7ರಂದು ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಫೆ.21ರಿಂದ ಷರತ್ತುಬದ್ಧವಾಗಿ ಪುನಾರಂಭಿಸಲು ನಿರ್ಧರಿಸಿದ್ದು, ಈ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮೈಸೂರಿನಲ್ಲಿಂದು ಮೈಸೂರು, ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಹುತೇಕ ನಾಳೆಯಿಂದ ಸಫಾರಿ ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು. ಈ ಆದೇಶದಲ್ಲಿರುವ ಷರತ್ತುಗಳ ಉಲ್ಲಂಘನೆ ಆದರೆ, ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು.

ನ.7ಕ್ಕೆ ಮೊದಲು ಬಳಕೆಯಾಗುತ್ತಿದ್ದ ಸಫಾರಿ ವಾಹನಗಳ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಮಾತ್ರವೇ ಬಳಕೆ ಮಾಡಬೇಕು. ಹೆಚ್ಚಾಗಿ ಬಸ್ ಗಳ ಮೂಲಕ ಸಫಾರಿ ನಡೆಸಬೇಕು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕ್ಯಾಂಪರ್ ಮತ್ತು ಜೀಪ್ ಬಳಕೆ ಮಾಡಬೇಕು ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಲಾಗುವುದು ಎಂದರು.

ವನ್ಯಜೀವಿಗಳು ಕಾಡಿನಿಂದ ಹೊರಬರದಂತೆ ಕ್ರಮಕ್ಕೆ ಸೂಚನೆ:

ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶವನ್ನು ಗುರುತಿಸಬೇಕು. ಆ ಪ್ರದೇಶದಲ್ಲಿ ಗಸ್ತು ಹೆಚ್ಚಸಬೇಕು. ವನ್ಯಜೀವಿಗಳು ವಸತಿ ಪ್ರದೇಶಕ್ಕೆ ಬಾರದಂತೆ, ಜೀವಹಾನಿ, ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಬಂಡೀಪುರ ಅರಣ್ಯದ ಗಡಿಯಲ್ಲಿ 100 ಕಿ.ಲೋ. ಮೀಟರ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ 5 ಕಿ.ಮೀ.ಗೆ ಒಂದರಂತೆ 25 ಶಿಬಿರ ನಿರ್ಮಿಸಿ ಪ್ರತಿ ಶಿಬಿರದಲ್ಲಿ ಸ್ಥಳೀಯರನ್ನು ಕಾಡಿನ ಮಿತ್ರ ಎಂದು ನೇಮಕ ಮಾಡಿಕೊಂಡು ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು. ಥರ್ಮಲ್ ಡ್ರೋನ್, ವಾಹನ ಇತ್ಯಾದಿ ಯಾವುದೇ ಸೌಲಭ್ಯ ಬೇಕಿದ್ದರೂ ಲಿಖಿತ ಮೂಲಕ ಪ್ರಸ್ತಾವನೆ ಸಲ್ಲಿಸಿ ಎಂದರು.

ಮಾನವ ಜೀವ ರಕ್ಷಣೆ ಆದ್ಯತೆ:

ವನ್ಯಜೀವಿಗಳ ರಕ್ಷಣೆಯ ಜೊತೆಗೆ ಕಾಡಿನಂಚಿನಲ್ಲಿ ವಾಸಿಸುತ್ತಿರುವ ನಿವಾಸಿಗಳ ಜೀವ ರಕ್ಷಣೆಯೂ ಅರಣ್ಯ ಇಲಾಖೆಯ ಪ್ರಥಮ ಆದ್ಯತೆ ಆಗಿದೆ. ಇದರ ಜೊತೆಗೆ ಬೆಳೆ ರಕ್ಷಣೆಗೂ ಒತ್ತು ನೀಡಬೇಕು ಎಂದರು.

ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟು ಹಣವನ್ನು ಅರಣ್ಯದಂಚಿನ ವಸತಿ ಪ್ರದೇಶಗಳಲ್ಲಿನ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು, ಜಾನುವಾರುಗಳಿಗೆ ಮೇವು ಒದಗಿಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ವಿನಿಯೋಗಿಸಬೇಕು ಎಂದು ತಿಳಿಸಿದರು.

ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚನೆ:

ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಆಗಬೇಕಾದರೆ ಸ್ಥಳೀಯರ ನೆರವು, ಸಹಕಾರ, ಸಹಯೋಗ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಅರಣ್ಯ ಸಿಬ್ಬಂದಿ ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂರಕ್ಷಣೆ ಮಾಡಬೇಕು ಎಂದರು.

ಇ-ಗಸ್ತು ಅಳವಡಿಕೆಗೆ ಸೂಚನೆ:

ಇಲಾಖೆಯ ಕಾಯಂ ಸಿಬ್ಬಂದಿ ಕಡ್ಡಾಯವಾಗಿ ಅರಣ್ಯ ಇಲಾಖೆ ಆಂತರಿಕವಾಗಿ ಅಭಿವೃದ್ಧಿಪಡಿಸಿರುವ ಇ-ಗಸ್ತು ತಂತ್ರಾಂಶವನ್ನು ಬಳಕೆ ಮಾಡಬೇಕು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊರಗುತ್ತಿಗೆಯ ಸಿಬ್ಬಂದಿ ಇ-ಸ್ಟ್ರೈಪ್ ಬಳಕೆ ಮಾಡಲಿ ಎಂದು ತಿಳಿಸಿದರು.

ಸಮಗ್ರ ಕಮಾಂಡ್ ಕೇಂದ್ರದಲ್ಲಿ ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಡಬೇಕು. ಕೂಡಲೇ ಸಂಬಂಧಿತ ವಲಯದ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಬೇಕು. 1926 ದೂರವಾಣಿ ಸಂಖ್ಯೆಗೆ ಬರುವ ದೂರು ಮತ್ತು ಮಾಹಿತಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚಿಸಿದರು.

ಕಾಡ್ಗಿಚ್ಚು ನಿಯಂತ್ರಿಸಲು ಸೂಚನೆ:

ನಾಗರಹೊಳೆ, ಬಂಡೀಪುರ, ಬಿ.ಆರ್.ಟಿಯಲ್ಲಿ ಈ ಬೇಸಿಗೆಯಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಕ್ರಮ ವಹಿಸುವಂತೆ ಸೂಚಿಸಿದ ಸಚಿವರು, ಬೇಸಿಗೆಯಲ್ಲಿ ಹುಲಿ, ಚಿರತೆ, ಆನೆ ಸೇರಿದಂತೆ ಯಾವುದೇ ವನ್ಯಜೀವಿ ಆಹಾರ ಮತ್ತು ನೀರಿನ ಕೊರತೆಯಿಂದ ಕಾಡಿನಿಂದ ಹೊರಬಾರದಂತೆ ಕ್ರಮ ಕೈಗೊಳ್ಳಲು ತಿಳಿಸಿದರು.


Share

You cannot copy content of this page