ಬೆಂಗಳೂರು: ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಜಾತಿಧರ್ಮಗಳ ಬೇಧಗಳನ್ನು ಮೀರಿ, ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಭಯ ಹಸ್ತ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ವೃಂದಗಳ ನೇಮಕಾತಿ ಆದೇಶಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೀವ ಉಳಿಸುವ ಸಾರ್ಥಕ ವೃತ್ತಿ:
ಇಂದು 1000 ಜನರಿಗೆ ನೇಮಕಾತಿ ಆದೇಶಗಳನ್ನು ಪಡೆದು ಆರೋಗ್ಯ ಇಲಾಖೆಗೆ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಇದು ಕೇವಲ ವೃತ್ತಿಯಲ್ಲ, ಜೀವ ಉಳಿಸುವ ಹಾಗೂ ರೋಗ ತಡೆಯುವ ಸಾರ್ಥಕ ಕಾರ್ಯವನ್ನೊಳಗೊಂಡಿದೆ ಎಂದರು.
ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ:
ನಮ್ಮ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೇಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ. ನೇಮಕಾತಿಯಲ್ಲಿದ್ದ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯಕವಾಗಿದ್ದು, ಇಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡುತ್ತದೆ. 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದು, ಇವುಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದರು.
ಭ್ರಷ್ಠಾಚಾರ ತಡೆಯಲು ಕೌನ್ಸೆಲಿಂಗ್ ಪ್ರಕ್ರಿಯೆ:
ಈ ಎಲ್ಲ ನೇಮಕಾತಿಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುತ್ತಿದ್ದು, ಭ್ರಷ್ಠಚಾರ ತಡೆಯಲು ಸಾಧ್ಯವಾಗುತ್ತಿದೆ. 5700 ಹುದ್ದೆಗಳನ್ನು ವೈದ್ಯರನ್ನು ಸೇರಿದಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಠಾಚಾರವನ್ನು ತಡೆಯುವುದು ಸರ್ಕಾರದ ಆಶಯ. ವರ್ಗಾವಣೆ ಏಜೆಂಟ್ ಗಳ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ನೌಕರರು ಇದಕ್ಕೆ ಬಲಿಯಾಗಬಾರದು ಎಂದರು.
ರೋಗತಡೆಗಟ್ಟುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು:
ವೈದ್ಯಕೇತರ ಸಿಬ್ಬಂದಿಗಳೂ ವೈದ್ಯರಷ್ಟೇ ಪ್ರಮುಖರು. ಆರೋಗ್ಯ ಇಲಾಖೆಯ ಕೆಲಸ ಕಾರ್ಯಗಳಲ್ಲಿ ಜಾತಿಧರ್ಮಗಳ ಬೇಧಗಳನ್ನು ಮೀರಿ,ಮಾನವೀಯತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ರೋಗಿಗಳಿಗೆ ಚಿಕಿತ್ಸೆಯ ಸಂದರ್ಭದಲ್ಲಿ ಬೇಕಾಗುವ ರಕ್ತವನ್ನು ಪಡೆಯಲು ಯಾವುದೇ ಜಾತಿಧರ್ಮಗಳನ್ನು ಪರಿಗಣಿಸುವುದಿಲ್ಲ. ಆದರೆ ಜನರು ಗುಣಮುಖರಾದಂತಹ ತಕ್ಷಣ ಪುನ: ಜಾತಿಧರ್ಮಗಳ ಸುಳಿಯಲ್ಲಿ ಬೀಳುತ್ತಾರೆ. ರೋಗ ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಆರೋಗ್ಯ ಇಲಾಖೆ ಕಾರ್ಯತತ್ಪರರಾಗಬೇಕು. ರಾಜ್ಯದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
