ಬೆಂಗಳೂರು: ಅಂತರರಾಷ್ಟ್ರೀಯ ತಂತ್ರಜ್ಞಾನ ಪಾಲುದಾರಿಕೆ ಬಲಪಡಿಸುವ ರಾಜ್ಯ ಸರ್ಕಾರದ ಕಾರ್ಯತಂತ್ರದ ಭಾಗವಾಗಿ ಮಾಹಿತಿ ತಂತ್ರಜ್ಞಾನ ಸಚಿವ ಪಿಯಾಂಕ್ ಖರ್ಗೆ ಅವರು ಆಸ್ಟ್ರೀಯಾ ಹಾಗೂ ಕ್ಯೂಬಾದ ಉನ್ನತ ನಿಯೋಗಗಳ ಸದಸ್ಯರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ರಾಜ್ಯದ ಜಾಗತಿಕ ನಾವೀನ್ಯತಾ ಮೈತ್ರಿಕೂಟ (ಜಿಐಎ) ಕಾರ್ಯಕ್ರಮದ ಅಡಿಯಲ್ಲಿ ಕೃತಕ ಜಾಣ್ಮೆ ಆಧಾರಿಸಿದ ಆಡಳಿತ ವ್ಯವಸ್ಥೆ, ದೊಡ್ಡ ಪ್ರಮಾಣದ ಡಿಜಿಟಲ್ ವ್ಯವಸ್ಥೆಗಳ ಜವಾಬ್ದಾರಿಯುತ ನಿಯೋಜನೆ ಮತ್ತು ಆಳವಾದ ಸಂಶೋಧನೆ ಆಧಾರಿತ ನವೋದ್ಯಮಗಳಿಗೆ ಉತ್ತೇಜನ, ಸಂಶೋಧನೆ ಮತ್ತು ಕೈಗಾರಿಕಾ ಸಂಪರ್ಕ ಅವಕಾಶಗಳ ಕುರಿತು ಉಭಯ ಸಭೆಗಳಲ್ಲಿ ಚರ್ಚೆ ಕೇಂದ್ರೀಕೃತವಾಗಿದ್ದವು.
ಮಾಹಿತಿ ತಂತ್ರಜ್ಞಾನ ಸಚಿವ ಖರ್ಗೆ ಅವರು ಮಾತನಾಡಿ, ʼಬಹುತೇಕ ವಲಯಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆ ವೇಗ ಪಡೆಯುತ್ತಿದ್ದಂತೆ, ಡೇಟಾ ಸಾರ್ವಭೌಮತ್ವ, ಡೇಟಾ ಸುರಕ್ಷತೆ ಮತ್ತು ಹೊಣೆಗಾರಿಕೆಯಿಂದ ʼಎಐʼ ಅಳವಡಿಸುವ ಹಾಗೂ ಬಳಸುವ ಕಡೆಗೆ ಗಮನ ಹರಿಸುವುದು ನಮ್ಮ ಆದ್ಯತೆಗಳಾಗಿವೆʼ ಎಂದು ಪುನರುಚ್ಚರಿಸಿದರು.
ಕೌಶಲ ಹಾಗೂ ಸಾಮರ್ಥ್ಯ ವೃದ್ಧಿ ಮತ್ತು ದೀರ್ಘಾವಧಿಯ ಸಾಂಸ್ಥಿಕ ಪಾಲುದಾರಿಕೆ ಒಳಗೊಂಡಂತೆ ಕರ್ನಾಟಕದ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನದ (ಐಸಿಟಿ) ನೆರವು ಪಡೆದುಕೊಳ್ಳುವ ಬಗ್ಗೆ ಕ್ಯೂಬಾದ ನಿಯೋಗವು ತೀವ್ರ ಒಲವು ವ್ಯಕ್ತಪಡಿಸಿತು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಮತ್ತು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಅವರು ಮಾತುಕತೆಗಳಲ್ಲಿ ಭಾಗಿಯಾಗಿದ್ದರು
