ಕಾರವಾರ: ಪಂಚ ಗ್ಯಾರಂಟಿ ಜೊತೆಗೆ ಭೂಮಿ ಆರನೇ ಗ್ಯಾರಂಟಿ, ನೀರು 7ನೇ ಗ್ಯಾರಂಟಿ, ಮನೆಗಳನ್ನು ನೀಡುವುದು 8ನೇ ಗ್ಯಾರಂಟಿ, ಇ ಖಾತಾ ನೀಡುವುದು 9ನೇ ಗ್ಯಾರಂಟಿ, 10ನೇ ಗ್ಯಾರಂಟಿಯಾಗಿ ಉಚಿತವಾಗಿ ಆರೋಗ್ಯ ನೀಡುವುದು ನಮ್ಮ ಸರ್ಕಾರದ ಸಂಕಲ್ಪ. ಇದನ್ನು ನಮ್ಮ ಸರ್ಕಾರ ಕಾರ್ಯರೂಪಕ್ಕೆ ತರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.
ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.
ನೀವೆಲ್ಲರೂ ಸೇರಿ ರಾಜ್ಯದಲ್ಲಿ ನಮಗೆ ಶಕ್ತಿ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ನಾವು ಬಂದಿದ್ದೇವೆ. ಇದು ಕಟ್ಟಡ ನಿರ್ಮಾಣ ವಿಚಾರ ಮಾತ್ರವಲ್ಲ, ಇಲ್ಲಿ ನಿಮಗೆ ನಮ್ಮ ಮೇಲಿರುವ ನಂಬಿಕೆ ಮತ್ತಷ್ಟು ಗಟ್ಟಿಯಾಗಬೇಕು. ನಾವು ಮಾಡುವ ಕೆಲಸ ನಮ್ಮ ಸಾಕ್ಷಿಗುಡ್ಡೆಗಳಾಗಿ ಉಳಿದುಕೊಳ್ಳುತ್ತದೆ. ಜನರ ಸಹಕಾರಕ್ಕೆ ಈ ಕೆಲಸ ಶಕ್ತಿಯಾಗಿ ಉಳಿದುಕೊಳ್ಳುತ್ತದೆ ಎಂದು ತಿಳಿಸಿದರು.
ಕರಾವಳಿಗೆ ವಿಶೇಷ ಪ್ರವಾಸೋದ್ಯಮ ನೀತಿ:
ನಾನು ಕೆಲವು ವರ್ಷಗಳ ಹಿಂದೆ ಮೀನುಗಾರರ ಜತೆ ಸಂವಾದ ಕಾರ್ಯಕ್ರಮಕ್ಕೆ ಕರಾವಳಿ ಪ್ರವಾಸ ಮಾಡಿದ್ದೆ. ಆಗ 300 ಕಿ.ಮೀ. ಹೆಚ್ಚು ಉದ್ದದ ಕರಾವಳಿ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರಲು ನಿರ್ಧರಿಸಿದ್ದೇವೆ. ಇಲ್ಲಿನ ಪ್ರಕೃತಿ, ಧಾರ್ಮಿಕ ಕ್ಷೇತ್ರಗಳನ್ನು ಇಟ್ಟುಕೊಂಡು ಈ ಭಾಗದ ಅಭಿವೃದ್ಧಿ ಮಾಡಬೇಕು. ಈ ಬಗ್ಗೆ ಬಂಡವಾಳ ಹೂಡಿಕೆದಾರರ ಜತೆ ಚರ್ಚೆ ಮಾಡುತ್ತಿದ್ದೇವೆ. ಆಮೂಲಕ ನಮ್ಮ ಈ ಭಾಗದ ಜನ ಉದ್ಯೋಗಕ್ಕಾಗಿ ಬೆಂಗಳೂರು, ಹೊರ ರಾಜ್ಯ, ದೇಶಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ ಎಂದು ಭರವಸೆ ನೀಡಿದರು.
ಒಂದು ಕೋಮು ಗಲಭೆಗೆ ಅವಕಾಶ ಕೊಟ್ಟಿಲ್ಲ:
ಈ ಸರ್ಕಾರ ಇರೋದು ನಿಮಗಾಗಿ. ನಾವು ಎಲ್ಲಾ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಜನರಿಗೆ ತಲುಪಿದೆ. ನೀವು ಉದ್ಯೋಗಸ್ಥರಾಗಿ ನೆಮ್ಮದಿ ಬದುಕು ಸಾಗಿಸಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಭಾಗದಲ್ಲಿ ಒಂದು ಕೋಮುಗಲಭೆ ನಡೆಯದಂತೆ ನೋಡಿಕೊಂಡಿದ್ದೇವೆ. ಇದೇ ಈ ಸರ್ಕಾರದ ಶಕ್ತಿ. ಈ ಹಿಂದೆ ಕೋಮು ಗಲಭೆ ಹೆಚ್ಚಾಗಿ ಇಲ್ಲಿ ಯಾರೂ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ ಎಂದು ವಿವರಿಸಿದರು.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮಗೆ ಸಿಕ್ಕ ಅವಕಾಶದಲ್ಲಿ ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದರು.
ರಾಜ್ಯವನ್ನು ಅಭಿವೃದ್ಧಿಶೀಲ ರಾಜ್ಯವನ್ನಾಗಿ ನಿರ್ಮಾಣ:
ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದಾರೆ. ಇದು ನಮ್ಮ ಜನರ ಪ್ರತಿಭೆಗೆ ಸಾಕ್ಷಿ. ನಮ್ಮ ರಾಜ್ಯದಲ್ಲಿ 250 ಇಂಜಿನಿಯರ್ ಕಾಲೇಜುಗಳಿವೆ. ಇದು ನಮ್ಮ ರಾಜ್ಯದ ಹೆಮ್ಮೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ಬಿಜೆಪಿ ಟೀಕೆ ಮಾಡಿ ಪ್ರಯೋಜನವಿಲ್ಲ. ಅವರಿಗೆ ಅವಕಾಶ ಸಿಕ್ಕಾಗ ಏನೂ ಮಾಡಲಿಲ್ಲ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನೇಕ ಅನ್ಯಾಯವಾಗುತ್ತಿದೆ. ಆದರೂ ನಮ್ಮ ಕಾಲ ಮೇಲೆ ನಾವು ನಿಂತು 43% ತೆರಿಗೆ ನೀಡುತ್ತಿದ್ದೇವೆ. ನಾವು ಕೊಡುವ 100 ರೂ. ತೆರಿಗೆಗೆ ನಮಗೆ ಪ್ರತಿಯಾಗಿ ಸಿಗುತ್ತಿರುವುದು ಕೇವಲ 13 ರೂ. ಮಾತ್ರ ಆದರೂ ನಾವು ರಾಜ್ಯವನ್ನು ಅಭಿವೃದ್ಧಿಶೀಲ ರಾಜ್ಯವನ್ನಾಗಿ ನಿರ್ಮಾಣ ಮಾಡುತ್ತಿದ್ದೇವೆ. ನಿಮ್ಮ ಸಹಕಾರ ನಮ್ಮ ಜೊತೆ ಇರಲಿ. ನಿಮ್ಮ ಆಶೀರ್ವಾದ ನಮ್ಮ ಶಾಸಕರ ಮೇಲೆ ಇರಲಿ ಎಂದು ಮನವಿ ಮಾಡಿದರು.
ನಾನು ಶಾಸಕನಾಗಿ 35 ವರ್ಷಗಳಾಗಿದ್ದು, ವೈದ್ಯಕೀಯ ಶಿಕ್ಷಣ ಸಚಿವರಾಗಿ ಶರಣಪ್ರಕಾಶ್ ಪಾಟೀಲ್ ಅವರು ಮಾಡುತ್ತಿರುವ ಕೆಲಸ. ಬೇರೆ ಯಾರೂ ಮಾಡಲು ಸಾಧ್ಯವಾಗಿಲ್ಲ. ಅವರ ತಮ್ಮ ಕೆಲಸದಿಂದ ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ. ಸಿದ್ದರಾಮಯ್ಯ ಅವರ ಮುಖಂಡತ್ವದಲ್ಲಿ ಎಲ್ಲಾ ಜಿಲ್ಲೆಯಲ್ಲಿ ಇಂತಹ ಮೆಡಿಕಲ್ ಕಾಲೇಜು ಮಾಡಲು ತೀರ್ಮಾನಿಸಿದ್ದೇವೆ. ನಮ್ಮನ್ನು ನೋಡಿ ಇಡೀ ರಾಷ್ಟ್ರವೇ ಯೋಜನೆ ರೂಪಿಸುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ 13,940 ಮೆಡಿಕಲ್ ಸೀಟುಗಳಿವೆ. 1.07 ಲಕ್ಷ ವಿದ್ಯಾರ್ಥಿಗಳು ಪ್ಯಾರಾ ಮೆಡಿಕಲ್ ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ಇಡೀ ದೇಶದಲ್ಲೇ ಅತಿ ಹೆಚ್ಚು ಮೆಡಿಕಲ್ ಕಾಲೇಜು ಇರುವುದು ಕರ್ನಾಟಕದಲ್ಲಿ 70. ಮಂಗಳೂರು ಹಾಗೂ ಉಡುಪಿಯಲ್ಲಿ 14-15 ಮೆಡಿಕಲ್ ಕಾಲೇಜುಗಳಿವೆ. ನಮ್ಮ ರಾಜ್ಯ ಇಷ್ಟು ದೊಡ್ಡ ಪ್ರಮಾಣದಲ್ಲಿ ವೈದ್ಯರನ್ನು ತಯಾರಿಸುತ್ತಿದೆ. ನಮ್ಮಲ್ಲಿ ಪ್ರತಿಭಾವಂತ ವೈದ್ಯರು ಹೊರ ದೇಶಗಳ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆಮೂಲಕ ದೇಶದ ರಾಯಭಾರಿಗಳಾಗಿದ್ದಾರೆ ಎಂದು ಹೇಳಿದರು.
ಬೆಂಗಳೂರು ನಗರ ಹಾಗೂ ಕರ್ನಾಟಕಕ್ಕೆ ಹೊರಗಡೆಯಿಂದ ಬಂದು ಆರೋಗ್ಯ ಸೇವೆ ಪಡೆಯಲಾಗುತ್ತಿದೆ. ಇದು ನಮ್ಮ ಸಾವಿರ ದಿನಗಳ ಸಾಧನೆ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಕಳೆದ ವಾರ ನಡೆದ ಕಾರ್ಯಕ್ರಮದಲ್ಲಿ 1 ಲಕ್ಷ ಜನರಿಗೆ ಆಸ್ತಿ ದಾಖಲೆ ನೀಡಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ 1 ಲಕ್ಷ ಕೋಟಿ ರೂ. ಹಣವನ್ನು ಜನರ ಜೇಬಿಗೆ ಹಾಕಿದ್ದೇವೆ ಎಂದು ಹೇಳಿದರು.
ಸಾಯಿಬಾಬಾ ಅವರು ಈ ಹಿಂದೆ ದುಡ್ಡು, ಬ್ಲಡ್ ನಿರಂತರವಾಗಿ ಸಂಚಾರ ಮಾಡಬೇಕು. ಒಂದೇ ಕಡೆ ನಿಂತರೆ ಸಮಸ್ಯೆಯಾಗುತ್ತದೆ. ಜನರ ಆರ್ಥಿಕ ಸಂಕಷ್ಟ ಬಗೆಹರಿಸಲು ಈ ಪಂಚ ಗ್ಯಾರಂಟಿ ನೀಡಿದ್ದೇವೆ. ಈ ಯೋಜನೆ ಟೀಕೆ ಮಾಡಿದವರೇ ಈಗ ನಮ್ಮ ಯೋಜನೆ ಅನುಸರಿಸುತ್ತಿದ್ದಾರೆ. ನಾವು ನುಡಿದಂತೆ ನಡೆಯುತ್ತಿದ್ದೇವೆ. ನಮಗೆ ನಾಲ್ವರು ಶಾಸಕರನ್ನು ಆಯ್ಕೆ ಮಾಡಿರುವ ಈ ಭಾಗದ ಅಭಿವೃದ್ಧಿಗೆ 2 ಸಾವಿರ ಕೋಟಿ ಹಣ ಅನುದಾನ ನೀಡಿದ್ದೇವೆ. ನಾವು ಆರಂಭಿಸಿದ ಕೆಲಸವನ್ನು ನಾವೇ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ಈ ನಾಯಕರು ಸೇರಿ ನಮಗೆ ಅನೇಕ ಯೋಜನೆಗಳ ಮನವಿ ನೀಡಿದ್ದಾರೆ ಎಂದರು.
ಜನರ ಸೇವೆ ನಮ್ಮ ಸರ್ಕಾರದ ಸಂಕಲ್ಪ. ಯೋಗಿ ಎಂದು ಕರೆಸಿಕೊಳ್ಳುವುದಕ್ಕಿಂತ ಉಪಯೋಗಿ ಎನಿಸಿಕೊಳ್ಳುವುದು ಉತ್ತಮ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ಸೈಲ್ ಅವರು ತಮ್ಮ 50 ಕೋಟಿ ಅನುದಾನದಲ್ಲಿ 25 ಕೋಟಿ ಹಣ ವಿವಿಧ ದೇವಾಲಯಗಳ ಅಭಿವೃದ್ಧಿಗೆ ನೀಡಿರುವುದಾಗಿ ಹೇಳಿದ್ದಾರೆ. ಬಹಳ ಸಂತೋಷ ಎಂದು ಹೇಳಿದರು.
ಅಂಕೋಲಾದಲ್ಲಿ ಮಾತನಾಡಿದ ಡಿಸಿಎಂ ಅವರು, ನಾವು ಇದುವರೆಗೂ ಜನರಿಗೆ ಏನು ಮಾಡಿದ್ದೇವೆ ಎಂಬುದನ್ನು ಮರೆತು, ಮುಂದೆ ಏನು ಮಾಡಬೇಕು ಎಂಬುದನ್ನು ಆಲೋಚಿಸಬೇಕು. ನಮಗೆ ಸಿಗುವ ಅವಕಾಶ ಬಳಸಿಕೊಂಡು ಜನರ ಬಳಿಗೆ ಹೋಗುವುದು ಮುಖ್ಯ. ಕರಾವಳಿ ಉತ್ಸವವನ್ನು ನಾನು ನೋಡಿದೆ. ಬಹಳ ಉತ್ತಮವಾಗಿ ಆಯೋಜಿಸಲಾಗಿತ್ತು. ಇವತ್ತು ಇಲ್ಲಿ ಸೇತುವೆ ನಿರ್ಮಿಸಿದ್ದೇವೆ. ನಾವು ನಿರ್ಮಿಸಿರುವ ಸೇತುವೆ ಸಂಪರ್ಕ ಸಾಧಿಸುತ್ತದೆ. ಆದರೆ ಬೇರೆಯವರು ಕಟ್ಟುವ ಗೋಡೆ ಜನರನ್ನು ಭಾಗ ಮಾಡುತ್ತದೆ. ಇದೇ ನಮಗೂ ಬೇರೆಯವರಿಗೂ ಇರುವ ವ್ಯತ್ಯಾಸ. ಈ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಅನೇಕ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
