ಸಮಗ್ರ ಸುದ್ದಿ

ನಗರದ ಸ್ವಚ್ಛತೆಗೆ ಶಾಶ್ವತ ಪರಿಹಾರ: ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆಗೆ ಕಟ್ಟುನಿಟ್ಟಿನ ಸೂಚನೆ: ಪೊಮ್ಮಲ ಸುನೀಲ್ ಕುಮಾರ್ | ಬ್ಲಾಕ್ ಸ್ಪಾಟ್ ಮುಕ್ತ ನಗರಕ್ಕಾಗಿ ಹೊಸ ಗುರಿ

Share

ಬೆಂಗಳೂರು: ಬೆಂಗಳೂರು ನಗರವನ್ನು ಸ್ವಚ್ಛವಾಗಿರಿಸಲು ಮತ್ತು ಭೂಭರ್ತಿ ಜಾಗಗಳ (Landfill sites) ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು, ಮನೆಗಳಲ್ಲೇ ಕಸ ವಿಂಗಡಣೆ ಮಾಡುವುದನ್ನು ಕಡ್ಡಾಯಗೊಳಿಸಿ ಘನತ್ಯಾಜ್ಯ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ.

ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಮತ್ತು ಸಂಸ್ಕರಣೆ:
ಇತ್ತೀಚಿನ ದಿನಗಳಲ್ಲಿ ಭೂಭರ್ತಿ ಜಾಗಗಳಲ್ಲಿ ಸ್ಥಳೀಯ ನಿವಾಸಿಗಳ ಹೋರಾಟದಿಂದಾಗಿ ತ್ಯಾಜ್ಯ ವಿಲೇವಾರಿಯಲ್ಲಿ ಉಂಟಾಗುತ್ತಿರುವ ಅಡೆತಡೆಗಳನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಹಸಿ ತ್ಯಾಜ್ಯ: ಮನೆ-ಮನೆಗಳಿಂದ ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ಗೊಬ್ಬರ ತಯಾರಿಸಲು ಸಂಸ್ಕರಣಾ ಘಟಕಗಳಿಗೆ ಕಳುಹಿಸುವುದು.

ಒಣ ತ್ಯಾಜ್ಯ: ಒಣ ತ್ಯಾಜ್ಯವನ್ನು ಪುನರ್ಬಳಕೆ ಹಾಗೂ ವಿದ್ಯುತ್ ತಯಾರಿಕಾ ಘಟಕಗಳಿಗೆ ರವಾನಿಸಲು ಆಯುಕ್ತರು ಸೂಚಿಸಿದ್ದಾರೆ.

ಮಾರ್ಚ್-2026 ಕ್ಕೆ ಮಹತ್ವದ ಗುರಿ:
ನಗರ ಪಾಲಿಕೆಯ ಎಲ್ಲಾ ಸಹಾಯಕ ಪ್ರಧಾನ ವ್ಯವಸ್ಥಾಪಕರು ಮತ್ತು ಉಪಪ್ರಧಾನ ವ್ಯವಸ್ಥಾಪಕರು ಕ್ರಮವಹಿಸಿ, ಮಾರ್ಚ್-2026ರ ಅಂತ್ಯಕ್ಕೆ ಶೇ. 65-70 ರಷ್ಟು ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸುವ ಗುರಿಯನ್ನು ತಲುಪಲು ಸೂಚಿಸಲಾಗಿದೆ. ಈ ಕಾರ್ಯದಲ್ಲಿ ಆರೋಗ್ಯ ಪರಿವೀಕ್ಷಕರು, ಲಿಂಕ್ ವರ್ಕರ್ಸ್, ಮಾರ್ಷಲ್ಸ್ ಮತ್ತು ಪೌರಕಾರ್ಮಿಕರು ಶ್ರಮವಹಿಸಬೇಕೆಂದು ತಿಳಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ 2025-26: ಅಧಿಕಾರಿಗಳಿಗೆ ಎಚ್ಚರಿಕೆ

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ಸಹಕರಿಸಬೇಕು:

ಪ್ರಥಮ ಹಂತದ ಸ್ವಚ್ಛತಾ ಕಾರ್ಯಕ್ರಮ: 2025-26ರ ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿದಂತೆ ಮಾರ್ಚ್ 1 ರಿಂದ 8 ರವರೆಗೆ ಮೊದಲ ಹಂತದ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆದೇಶಿಸಲಾಗಿದೆ.

ಸಾರ್ವಜನಿಕರ ಸಹಭಾಗಿತ್ವ: ಈ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಜಾಗೃತಿ ಕಾರ್ಯಕ್ರಮ:ಸಾರ್ವಜನಿಕರಲ್ಲಿ ಪರಿಸರ ಸ್ವಚ್ಛತೆ, ತ್ಯಾಜ್ಯ ವಿಂಗಡನೆಯ ಮಹತ್ವ ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಅರಿವು ಮೂಡಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನಗರ ಪಾಲಿಕೆಯನ್ನು “ಬ್ಲಾಕ್ ಸ್ಪಾಟ್” ಮುಕ್ತಗೊಳಿಸಿ

ನಗರದ ಸೌಂದರ್ಯವನ್ನು ಕಾಪಾಡಲು ಮತ್ತು ನಾಗರಿಕರ ಪ್ರಶಂಸೆಗೆ ಪಾತ್ರವಾಗಲು ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಿಯೂ *ಬ್ಲ್ಯಾಕ್ ಸ್ಪಾಟ್ *ಗಳು ಕಾಣದಂತೆ ಸ್ವಚ್ಛಗೊಳಿಸಲು ಸಲಹೆ ನೀಡಲಾಗಿದೆ.

ತ್ವರಿತ ಸ್ಪಂದನೆ: ನಾಗರಿಕರು ‘ಫೋನ್-ಇನ್’ ಕಾರ್ಯಕ್ರಮದಲ್ಲಿ ನೀಡಿದ ಘನತ್ಯಾಜ್ಯ ನಿರ್ವಹಣೆ ದೂರುಗಳಿಗೆ ಆರೋಗ್ಯ ಪರಿವೀಕ್ಷಕರು ಮತ್ತು ಮಾರ್ಷಲ್‌ಗಳು ತಕ್ಷಣವೇ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು. ಇಂತಹ ದೂರುಗಳು ಮರುಕಳಿಸದಂತೆ ನೋಡಿಕೊಳ್ಳಲು AGM ಗಳಿಗೆ ಸೂಚಿಸಲಾಗಿದೆ.

ಎಲ್ಲೋ ಮತ್ತು ರೆಡ್ ಸ್ಪಾಟ್‌ಗಳ ನಿಯಂತ್ರಣ: ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ (ಎಲ್ಲೋ ಸ್ಪಾಟ್) ಮತ್ತು ಉಗುಳುವಿಕೆ (ರೆಡ್ ಸ್ಪಾಟ್*) ಪ್ರಕರಣಗಳು ಸ್ಕೈ-ವಾಕ್‌ಗಳ ಬಳಿ ಹೆಚ್ಚಾಗಿ ಕಂಡುಬರುತ್ತಿದ್ದು, ಇದು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.

ದಂಡ ವಿಧಿಸಲು ಸೂಚನೆ: ಇಂತಹ ಜಾಗಗಳ ಮೇಲೆ ಮಾರ್ಷಲ್‌ಗಳು ಕಣ್ಗಾವಲು ಇಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ದಂಡ ವಿಧಿಸಬೇಕು ಎಂದು ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


Share

You cannot copy content of this page