ಬೆಂಗಳೂರು:ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯದ ಹಿಂದುಳಿದ ಸಮುದಾಯದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದರೆ ಭವಿಷ್ಯದಲ್ಲಿ 500ಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಇಲಾಖೆ ವತಿಯಿಂದ ಉಚಿತ ವಸತಿ ಸಹಿತ ತರಬೇತಿ ಕೊಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಭರವಸೆ ನೀಡಿದರು.
ಕೆಂಗೇರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ನೀಡಲಾಗುವ ಉಚಿತ ವಸತಿ ಸಹಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೆಹಲಿಯಲ್ಲಿ ತರಬೇತಿ ಕೇಂದ್ರ ತೆರೆಯಬೇಕೆಂದು ನಿರ್ಧಾರ ಮಾಡಲಾಗಿತ್ತು. ಆದರೆ ಸ್ಥಳ ಸಿಗದ ಕಾರಣ, ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ. ಪ್ರಸ್ತುತ 150 ಮಂದಿ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಸಹಿತ ಪರೀಕ್ಷೆಗೆ ಹತ್ತು ತಿಂಗಳು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರ ನಿಮ್ಮ ಜವಾಬ್ದಾರಿ ತೆಗೆದುಕೊಂಡಿದೆ. ಇಷ್ಟು ಮೊತ್ತದ ಹಣವನ್ನು ಈ ಕಾರ್ಯಕ್ರಮಕ್ಕೆ ವ್ಯಯಿಸಲು ಸರ್ಕಾರಕ್ಕೆ ಕಷ್ಟ ಆಗುವುದಿಲ್ಲ. ನೀವು ಉತ್ತಮ ಫಲಿತಾಂಶ ಪಡೆದು ಭಾರತೀಯ ಸೇವೆಗೆ ಸೇರಿದರೆ ಅದೇ ನಮಗೆ ತೃಪ್ತಿ ಎಂದರು.
ನಾನು ಒಮ್ಮೆ ಖುದ್ದು ದೆಹಲಿಯ ಯುಪಿಎಸ್ಸಿ ತರಬೇತಿ ಅಕಾಡೆಮಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಜಿಲ್ಲೆಯ ಮುದ್ದೇಬಿಹಾಳದ ಯುವಕನೊಬ್ಬ ಅಲ್ಲಿನ ತರಬೇತಿ ಕೇಂದ್ರದಲ್ಲಿಯೇ ಕೆಲಸ ಮಾಡುತ್ತಾ, ಪರೀಕ್ಷೆಗೆ ತಯಾರಿ ನಡೆಸಿದ್ದ. ದೆಹಲಿಯಲ್ಲಿ ವಸತಿ ಮತ್ತು ಊಟದ ವೆಚ್ಚವೆ ದುಬಾರಿ ಎಂದು ಅಳಲು ತೊಡಿಕೊಂಡಿದ್ದ. ಅಂದೇ ಪರೀಕ್ಷೆಗೆ ಸಿದ್ಧತೆ ನಡೆಸುವ ಹಿಂದುಳಿದ ಸಮುದಾಯದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ಧರಿಸಿದ್ದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಯೋಜನೆಯನ್ನು ಬಜೆಟ್ ನಲ್ಲೂ ಕೂಡ ಘೋಷಿಸಲಾಗಿತ್ತು ಎಂದು ತಿಳಿಸಿದರು.
ತಪ್ಪಸ್ಸಿನಿಂದ ಸಾಧನೆ ಸಾಧ್ಯ:
ದೇಶದಲ್ಲೇ ಉಚಿತವಾಗಿ ವಸತಿ ಸಹಿತ ಯುಪಿಎಸ್ಸಿ ಪರೀಕ್ಷೆಗೆ ಎರಡು ರಾಜ್ಯಗಳಲ್ಲಿ ಸರ್ಕಾರದಿಂದ ತರಬೇತಿ ನೀಡಲಾಗುತ್ತಿದೆ. ಆ ರಾಜ್ಯಗಳ ಪಟ್ಟಿಗೆ ಇದೀಗ ಕರ್ನಾಟಕ ಕೂಡ ಸೇರಿದೆ. ಶ್ರಮ ಹಾಗೂ ತಪ್ಪಸ್ಸಿನಿಂದ ಯಾವುದೇ ಸಾಧನೆ ಸಾಧ್ಯ. ಇಲ್ಲಿರುವ ಪ್ರತಿಯೊಬ್ಬ ತಪ್ಪಸ್ಸಿನಿಂದ ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಏಕಾಗ್ರತೆಯಿಂದ ಓದಿ ಯಶಸ್ಸು ಪಡೆಯಿರಿ ಎಂದು ಸಚಿವರು ಅಭ್ಯರ್ಥಿಗಳಿಗೆ ಸಚಿವರು ಕಿವಿಮಾತು ಹೇಳಿದರು.
ಒಕ್ಕಲಿಗ ಮಠದ ನಿಶ್ಚಲಾನಂದನಾಥ ಸ್ವಾಮೀಜಿಮಾತನಾಡಿ, ನಾವು ಓದುವ ಕಾಲದಲ್ಲಿ ಎರಡು ಹೊತ್ತಿನ ಊಟಕ್ಕೂ ಕಷ್ಟ ಇತ್ತು. ಸರ್ಕಾರದ ಈ ಉತ್ತಮವಾದ ಯೋಜನೆಯಿಂದ ನೂರಾರು ಮಂದಿಗೆ ಅನುಕೂಲವಾಗಲಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಆಯುಕ್ತರಾದ ಕೆ.ದಯಾನಂದ್, ಅಧಿಕಾರಿಗಳಾದ ಪ್ರದೀಪ್, ಜಗದೀಶ್, ಮಧುಸೂದನ್ ರೆಡ್ಡಿ, ಭವ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
