ನ್ಯೂ ಕ್ಯಾಸಲ್ (ಯುಕೆ): ಯುಕೆಯ ಪ್ರಖ್ಯಾತ ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವ ಕರ್ನಾಟಕದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ಕೃಷಿ ಮತ್ತು ಜಲ ಸಂರಕ್ಷಣೆ ಕುರಿತಾದ ಉನ್ನತ ಮಟ್ಟದ ಸಂವಾದದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ತಜ್ಞರು ನೀರು ಸಂರಕ್ಷಣೆ ಮತ್ತು ಕೃಷಿ ಕ್ಷೇತ್ರದಲ್ಲಿ ನೀರಿನ ಸಮರ್ಥ ಬಳಕೆಯ ಕುರಿತು ಸಚಿವರಿಗೆ ವಿವರಣೆ ನೀಡಿದರು.
ಜಾಗತಿಕ ಮಟ್ಟದಲ್ಲಿ ನೀರಿನ ಲಭ್ಯತೆ ಕುಗ್ಗುತ್ತಿರುವ ಈ ಸಂದರ್ಭದಲ್ಲಿ, ಲಭ್ಯವಿರುವ ನೀರನ್ನು ಆಧುನಿಕ ತಂತ್ರಜ್ಞಾನದ ಮೂಲಕ ಹೇಗೆ ಕೃಷಿಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಗಹನವಾದ ಚರ್ಚೆ ನಡೆಯಿತು.
ಭಾರತದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು (Top Talents) ಇಂತಹ ಪ್ರತಿಷ್ಠಿತ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ, ಅಲ್ಲಿಯೇ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎನ್ನುವ ಕಳಕಳಿಯನ್ನು ವ್ಯಕ್ತಪಡಿಸಿದ ಸಚಿವರು ಇದರಿಂದಾಗಿ ಭಾರತಕ್ಕೆ ಉತ್ತಮ ಪ್ರತಿಭೆಗಳ ಕೊರತೆ ಉಂಟಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ, ನ್ಯೂ ಕ್ಯಾಸಲ್ ವಿಶ್ವವಿದ್ಯಾಲಯದ ಬ್ರ್ಯಾಂಚ್ ಅನ್ನು ಭಾರತದಲ್ಲಿಯೇ ತೆರೆಯುವ ಪ್ರಸ್ತಾಪಕ್ಕೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಒಂದು ವೇಳೆ ಅಂತಹ ಅವಕಾಶವಿದ್ದಲ್ಲಿ, ಈ ಜಾಗತಿಕ ಮಟ್ಟದ ವಿಶ್ವವಿದ್ಯಾಲಯದ ಶಾಖೆಯನ್ನು ಕರ್ನಾಟಕದಲ್ಲಿಯೇ ಆರಂಭಿಸಬೇಕು ಎನ್ನುವ ಬಲವಾದ ಇಂಗಿತವನ್ನು ಸಚಿವರು ವ್ಯಕ್ತಪಡಿಸಿದರು.
ಇದು ರಾಜ್ಯದ ಕೃಷಿ ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ದೊಡ್ಡ ಬಲ ನೀಡಲಿದೆ ಎಂದು ಅವರು ಆಶಿಸಿದರು.
ಈ ಮಹತ್ವದ ಸಭೆಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ನಿರ್ದೇಶಕ ಮೊಹಮ್ಮದ್ ಪರವೇಜ್ ಬಂಥನಾಳ್, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
