ಸಮಗ್ರ ಸುದ್ದಿ

ಅವಘಡಗಳು ಸಂಭವಿಸದಂತೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಲು ಸಮಿತಿ ರಚನೆ : ಮಹೇಶ್ವರ್ ರಾವ್

Share

ಬೆಂಗಳೂರು: ಚಿಕ್ಕಪೇಟೆ ವ್ಯಾಪ್ತಿಯ ವಾಣಿಜ್ಯ ಪ್ರದೇಶಗಳಲ್ಲಿ ಅವಘಡಗಳು ಸಂಭವಿಸದಂತೆ ಹಾಗೂ ಅವುಗಳನ್ನು ನಿಯಂತ್ರಿಸುವ ಕುರಿತು ಸಮಗ್ರ ವರದಿ ಸಿದ್ಧಪಡಿಸಲು ಸಮಿತಿ ರಚಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಪೇಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚಿಕ್ಕಪೇಟೆ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಕಳೆದ ವರ್ಷವೂ ಅಗ್ನಿ ಅವಘಡ ಸಂಭವಿಸಿತ್ತು. ಇದೀಗ ಮತ್ತೆ ಕುಂಬಾರಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಹಿನ್ನೆಲೆ, ಅವಘಡಕ್ಕೆ ಕಾರಣಗಳೇನು ಹಾಗೂ ಇಂತಹ ಘಟನೆಗಳನ್ನು ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂಬುದರ ಕುರಿತು ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜಿಬಿಎ, ಕೇಂದ್ರ ನಗರ ಪಾಲಿಕೆ, ಅಗ್ನಿಶಾಮಕ ಹಾಗೂ ವಿದ್ಯುತ್ ಇಲಾಖೆಗಳನ್ನು ಒಳಗೊಂಡ ಸಮಿತಿ ರಚಿಸಲು ಸೂಚನೆ ನೀಡಿದರು.

ಹೈಡ್ರೆಂಟ್ ವ್ಯವಸ್ಥೆ ಕಲ್ಪಿಸಿ:

ಅಗ್ನಿ ಅವಘಡಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಉದ್ದೇಶದಿಂದ ಪ್ರಮುಖ ಸ್ಥಳಗಳಲ್ಲಿ ಹೈಡ್ರೆಂಟ್ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸಬೇಕು. ಜೊತೆಗೆ ಹೈಡ್ರೆಂಟ್ ವ್ಯವಸ್ಥೆಯ ಮೇಲ್ವಿಚಾರಣೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆ ನೀಡಿದರು.

ಕುಂಬಾರಪೇಟೆಯ 3 ಹಂತಸ್ತಿನ ‘ಲಕ್ಷ್ಮಿ ಕಮರ್ಶಿಯಲ್ ಕಾಂಪ್ಲೆಕ್ಸ್’ ನಲ್ಲಿ ನಿನ್ನೆ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಕಿರಿದಾದ ರಸ್ತೆ ಇರುವ ಕಾರಣ ಅಗ್ನಿಶಾಮಕ ವಾಹನಗಳಿಗೆ ನೇರವಾಗಿ ಪ್ರವೇಶ ಸಾಧ್ಯವಾಗಲಿಲ್ಲ. ಸುಮಾರು 300 ಮೀಟರ್ ದೂರದಿಂದ ಪೈಪ್ ವ್ಯವಸ್ಥೆ ಮಾಡಿಕೊಂಡು ಬೆಂಕಿ ನಂದಿಸಲಾಯಿತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದರು.

ಅಗ್ನಿ ಅವಘಡ ಸಂಭವಿಸಿದ ಕಟ್ಟಡದಲ್ಲಿ ಸಮಗ್ರ ಪರಿಶೀಲನೆ ನಡೆಸಬೇಕು. ಚಿಕ್ಕಪೇಟೆ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಕಟ್ಟಡಗಳಲ್ಲಿಯೂ ಫೈರ್ ಸೇಫ್ಟಿ ಹಾಗೂ ಫೈರ್ ಎಕ್ಸ್‌ಟಿಂಗ್ವಿಶರ್ ವ್ಯವಸ್ಥೆ ಕಡ್ಡಾಯವಾಗಿರಬೇಕು. ಫೈರ್ ಸೇಫ್ಟಿ ವ್ಯವಸ್ಥೆ ಅಳವಡಿಸದ ಕಟ್ಟಡಗಳನ್ನು ಮುಲಾಜಿಲ್ಲದೆ ಸೀಲ್ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವ್ಯಾಪಾರ ಸಂಘಟನೆಗಳ ಜೊತೆ ಸಭೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ, ಅವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಬೇಕು.

ಅನಧಿಕೃತ ಕಟ್ಟಡಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸಲು ನೋಟಿಸ್ ಜಾರಿ ಮಾಡಬೇಕು. ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ ಭಾಗಗಳನ್ನು ತೆರವುಗೊಳಿಸದಿದ್ದರೆ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚನೆ ನೀಡಿದರು.

ಅಸುರಕ್ಷಿತ ಕಟ್ಟಡಗಳನ್ನು ಪರಿಶೀಲಿಸಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ತಕ್ಷಣ ನೋಟಿಸ್ ಜಾರಿ ಮಾಡಬೇಕು. ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚನೆ ನೀಡಿದರು.

ಈ ವೇಳೆ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page