ಸಮಗ್ರ ಸುದ್ದಿ

ರಾಜ್ಯ ಬಜೆಟ್‌ ಬಳಿಕ ಆಟೋಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

Share

ಬೆಂಗಳೂರು: ಮಹಿಳೆಯರು ಮತ್ತು ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಉಚಿತ ಆಟೋ ಚಾಲನಾ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಸರ್ಕಾರದಿಂದಲೂ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬಿ.ಪ್ಯಾಕ್‌ ಹಾಗೂ ಸಿಜಿಐ ಸಹಯೋಗದಲ್ಲಿ ಬಿಟಿಎಂ ಲೇಔಟ್‌ನಲ್ಲಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಉಚಿತ ಆಟೋ ಚಾಲನಾ ಹಾಗೂ ಕೌಶಲ್ಯ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಹಾಗೂ ಮಂಗಳಮುಖಿಯರನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ. ಇಂದು ಬೆಂಗಳೂರಿನ ಯಾವುದೇ ಜಾಗಕ್ಕೆ ತೆರಳಬೇಕಿದ್ದರೂ ಆಟೋ ಅನಿವಾರ್ಯವಾಗಿದ್ದು, ಬೆಂಗಳೂರಿಗರ ಬೆನ್ನೆಲುಬಾಗಿ ನಿಂತಿದೆ. ಹೀಗಾಗಿ ಆಟೋ ಚಾಲಕರ ಸಮುದಾಯಕ್ಕೆ ಇನ್ನಷ್ಟು ಯೋಜನೆ ಹಾಗೂ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ರಾಜ್ಯ ಬಜೆಟ್‌ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಉಚಿತ ಚಾಲನಾ ತರಬೇತಿ:
ಬಿಪ್ಯಾಕ್‌ ಹಾಗೂ ಸಿಜಿಐ ಸಂಸ್ಥೆಯು ಸಿಎಸ್‌ಆರ್‌ ಅಡಿಯಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗಳು ವೃತ್ತಿಪರ ಆಟೋ ಚಾಲಕರಾಗಿ ರೂಪುಗೊಳ್ಳಲು ಉಚಿತ ತರಬೇತಿ ನೀಡುತ್ತಾ ಬಂದಿದ್ದು, ಇದುವರೆಗೂ 9 ವಿಧಾನಸಭಾ ಕ್ಷೇತ್ರದಾದ್ಯಂತ 500ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಈ ಕಾರ್ಯಕ್ರಮವನ್ನು ಮುಂದುವರೆಸುವ ಉದ್ದೇಶವನ್ನು ಹೊಂದಲಾಗಿದೆ.

ಕಾರ್ಯಕ್ರಮದಲ್ಲಿ ಸಿಜಿಐ ಪ್ರತಿನಿಧಿ ಸುಧಾಕರ್ ಪೈ, ಶ್ರೀನಿವಾಸ ರಾಘವನ್ (ಡೈರೆಕ್ಟರ್ EAS), ಬಿ.ಪ್ಯಾಕ್ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಎಚ್.ಎಸ್., ನಮ್ಮ ಸಾರಥಿ ಅಧ್ಯಕ್ಷ ಸಂಪತ್ ಮತ್ತು ದೇವಿಕಾ, ಪೀಸ್ ಆಟೋ ಅಧ್ಯಕ್ಷ ರಘು ನಾರಾಯಣ ಗೌಡ ಉಪಸ್ಥಿತರಿದ್ದರು.


Share

You cannot copy content of this page