ಬೆಂಗಳೂರು: ಸತ್ಯ ಮತ್ತು ಶಾಂತಿಯ ತಳಹದಿಯ ಮೇಲೆ ಸುಸಂಸ್ಕೃತ ಸಮಾಜ ನಿರ್ಮಿಸಲು ಶ್ರಮಿಸಿದ ಜಗದ್ಗುರು ರೇಣುಕಾಚಾರ್ಯರು ದೀನ- ದಲಿತರು ಹಿಂದುಳಿದ ವರ್ಗಗಳ ಹಾಗೂ ಸಮಸ್ತ ಮಾನವ ಕುಲದ ಉದ್ಧಾರಕ್ಕಾಗಿ ಕಂಕಣ ಕಟ್ಟಿ ದುಡಿದವರಲ್ಲಿ ಪ್ರಮುಖರಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್. ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಸಮುದಾಯಕ್ಕೆ ಸೇರಿದ 18 ಮಠ ಸ್ಥಾಪನೆ:
ತೆಲಂಗಾಣಕ್ಕೆ ಸೇರಿದ ಕೊಲ್ಲಿಪಾಕಿ ಎಂಬ ಗ್ರಾಮದಲ್ಲಿ ವಿವಿಧ ಸಮುದಾಯಕ್ಕೆ ಸೇರಿದ 18 ಮಠಗಳನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಕ್ರಾಂತಿಯ ಮೊದಲ ಹೆಜ್ಜೆಯನ್ನಿಟ್ಟಿದ್ದರು. ಧಾರ್ಮಿಕ ಸಿದ್ಧಾಂತದ ಜೊತೆಗೆ ಸೈದ್ಧಾಂತಿಕ, ಸಾಮಾಜಿಕ ಮತ್ತು ಶೈಕ್ಷಣಿಕ, ಮಹಿಳಾ ಕಲ್ಯಾಣಕ್ಕೆ ಒತ್ತು ನೀಡಿದ್ದರು ಎಂದು ತಿಳಿಸಿದರು.
ಜಾತಿಬೇಧವನ್ನು ತೋರದೆ ಎಲ್ಲರಿಗೂ ಲಿಂಗ ದೀಕ್ಷೆಯನ್ನು ನೀಡುವ ಮೂಲಕ ವೀರಶೈವ ತತ್ವವನ್ನು ಬೋಧಿಸಿದರು. ಪ್ರಮುಖವಾಗಿ ಹೆಣ್ಣು ಮಕ್ಕಳಿಗೂ ಲಿಂಗದೀಕ್ಷೆ ನೀಡಿ, ಧರ್ಮಗುರುವಿನ ಬಹುದೊಡ್ಡ ನಿರ್ಧಾರವನ್ನು ಅವರು ಮಾಡಿದ್ದರು ಎಂದು ಹೇಳಿದರು.
ನಮ್ಮ ಭಾರತೀಯ ನೆಲದಲ್ಲಿ ಅಧ್ಯಾತ್ಮ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ದೈಹಿಕ ಶುಚಿತದಷ್ಟೇ ಮಾನಸಿಕ ಶುಚಿತ್ವಕ್ಕೆ ಅಗತ್ಯವಾದ ಧ್ಯಾನ, ತಪ, ಜಪಗಳನ್ನು ಮೈಗೊಂಡಿಸಿಕೊಂಡ ದೇಶ ನಮ್ಮದು. ಇಂತಹ ಪುಣ್ಯಭೂಮಿಯಲ್ಲಿ ಅನೇಕ, ಸಂತರು, ಸಾಧುಗಳು, ಶರಣರು ಆಗಿ ಹೋಗಿದ್ದಾರೆ. ಇಂತ ದಾರ್ಶನಿಕ ಲೋಕದಲ್ಲಿ ಅಗ್ರಗಣ್ಯರಾದವರು ಜಗದ್ಗುರು ರೇಣುಕಾಚಾರ್ಯರು ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪಮೇಯರ್ ಪುಟ್ಟರಾಜು, ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಘಟಕದ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಸಾಹಿತಿ ಪ್ರಶಾಂತ್ ರಿಪ್ಪನಪೇಟೆ, ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ರಾಜೇಂದ್ರ ಪ್ರಸಾದ್, ಇಲಾಖೆ ನಿರ್ದೇಶಕ ಮಂಜುನಾಥಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
