ಮೈಸೂರು: ಟಿ. ನರಸೀಪುರದ ಐತಿಹಾಸಿಕ ರೇಷ್ಮೆ ಕಾರ್ಖಾನೆಯನ್ನು ಮುಚ್ಚಲಾಗುತ್ತಿದೆ ಎಂಬ ವದಂತಿಗಳಿಗೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತೆರೆ ಎಳೆದಿದ್ದಾರೆ. ರೇಷ್ಮೆ ಕಾರ್ಖಾನೆಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಆದ್ಯತೆಯಾಗಿದ್ದು, ಯಾವುದೇ ಕಾರಣಕ್ಕೂ ಕಾರ್ಖಾನೆಗೆ ಕುಂದು ತರುವ ಕೆಲಸ ಮಾಡುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ರೇಷ್ಮೆ ಮಾರುಕಟ್ಟೆಗೆ ಬಳಸಲಾಗುತ್ತಿದ್ದ ಒಂದೂವರೆ ಎಕರೆ ಜಾಗದಲ್ಲಿ ಉದ್ಯಾನವನ ಅಥವಾ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆ ಇತ್ತು. ಆದರೆ, ಇದರಿಂದ ಕಾರ್ಖಾನೆಗೆ ತೊಂದರೆಯಾಗುವುದಾದರೆ ಆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ನಿರ್ಧಾರವನ್ನು ಮರುಪರಿಶೀಲಿಸಲಾಗಿದೆ.
ನಮಗೆ ರೇಷ್ಮೆ ಕಾರ್ಖಾನೆ ಮುಖ್ಯ, ಇಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ ಎಂದು ಹೇಳಿದ ಸಚಿವರು, ಕಾರ್ಮಿಕರು ಮತ್ತು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಕ್ರೀಡಾ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಾಗಿ ಮಾಹಿತಿ ನೀಡಿದರು.
ರೇಷ್ಮೆ ಕಾರ್ಖಾನೆಯ ಅಭಿವೃದ್ಧಿಗೆ ಸರ್ಕಾರ ಅತಿ ಹೆಚ್ಚು ಒತ್ತು ನೀಡಿದ್ದು, ಅದರ ಅಸ್ತಿತ್ವಕ್ಕೆ ಧಕ್ಕೆ ಬಾರದಂತೆ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಸಚಿವರು ಪುನರುಚ್ಚರಿಸಿದರು.
