ಬೆಂಗಳೂರು: ಒಳಮೀಸಲಾತಿ ಕಲ್ಪಿಸುವಲ್ಲಿ ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಒಳಮೀಸಲಾತಿ ಅನುಷ್ಠಾನದ ಜೊತೆಗೆ ಹೊಸ ನೇಮಕಾತಿ ಮಾಡುವಲ್ಲಿ ನಮ್ಮ ಸರ್ಕಾರ ಕ್ರಮವಹಿಸಲಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ. 17 ರ ಮೀಸಲಾತಿಯನ್ನು ವರ್ಗೀಕರಿಸಿದಂತೆ ಈಗ ಇರುವ ಶೇ 15ರ ಮೀಸಲಾತಿಯನ್ನು ಎ,ಬಿ,ಸಿ ಗುಂಪುಗಳಿಗೆ ವಿಂಗಡಿಸಲು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸಲಿಸ್ದಾರೆ ಎಂದರು.
ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಗೂ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಮಹತ್ವದ ಆದೇಶವಿದ್ದು, ಅದರಂತೆಯೇ ನಮ್ಮ ಸರ್ಕಾರ ನಾಗಮೋಹನ್ ದಾಸ್ ರವರ ಏಕಸದಸ್ಯ ಆಯೋಗ ನೇಮಿಸುವ ಮೂಲಕ ರಾಜ್ಯಾದ್ಯಾಂತ ಸಮಗ್ರ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಿದ್ದು ಮೀಸಲಾತಿಯನ್ನು ಮೂರು ಗುಂಪುಗಳಾಗಿ ಎ ಗುಂಪಿಗೆ-6,ಬಿ ಗುಂಪಿಗೆ-6, ಸಿ ಗುಂಪಿಗೆ-5 ವರ್ಗೀಕರಿಸಿ ಅನುಷ್ಠಾನ ಮಾಡಿದ್ದು, ನಂತರ ಈ ಒಳಮೀಸಲಾತಿಯ ಮಸೂದೆಯು ಬೆಳಗಾವಿಯ ಅಧಿವೇಶನದಲ್ಲಿ ಎರಡು ಸದನಗಳಲ್ಲಿ ಸರ್ವಾನುಮತದಿಂದ ಅಂಗೀಕರಿಸಿ ರಾಜ್ಯಪಾಲರ ಅಂಕಿತದೊಂದಿಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಇತ್ತೀಚಿಗೆ ಕೆಲಚು ಗೊಂದಲಗಳು ಉಂಟಾಗಿದ್ದು, ಸುಪ್ರೀಂ ಕೋರ್ಟ್ ನ ಆದೇಶದ ಅನುಸಾರ ಮೀಸಲಾತಿಯು 50ಕ್ಕೆ ಮೀರದಂತೆ ನಿರ್ಬಂಧ ವಿಧಿಸಿದ್ದು, ಸುಪ್ರೀಂ ಕೋರ್ಟಿನ ಆದೇಶವನ್ನು ಸರ್ಕಾರವು ಪಾಲಿಸುತ್ತಾ ಮೀಸಲಾತಿಯನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಶೇ. 17ಕ್ಕೆ ನಿಗದಿಪಡಿಸಿ, ಪರಿಶಿಷ್ಟ ಜಾತಿಯ ಶೇ. 15ರ ಮೀಸಲಾತಿಯನ್ನು ಮೊದಲು ಶೇ. 17 ವರ್ಗೀಕರಿಸಿದಂತೆ ಈಗ ಇರುವ ಶೇ 15ರನ್ನು ಎ,ಬಿ,ಸಿ ಗುಂಪುಗಳಿಗೆ ವಿಂಗಡಿಸಲು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ನಿರ್ಧಾರ ಮಾಡಿ ಶೋಷಿತ ಸಮುದಾಯವಾದ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.
ಕೆಲವು ಮುಖಂಡರುಗಳ ಗೊಂದಲಗಳ ಹೇಳಿಕೆಗಳಿಗೆ ಯಾವುದೇ ಆಸ್ಪದ ನೀಡಿದೆ ಶಾಂತಿಯಿಂದ ಇರಬೇಕು. ಯಾವುದೇ ಅನಗತ್ಯ ಹೇಳಿಕೆಗಳನ್ನು ನೀಡದೆ ಸಮುದಾಯದವರು ಶಾಂತಿಯಿಂದ ಇರಬೇಕೆಂದು ಈ ಮೂಲಕ ಮನವಿ ಮಾಡಿದರು.
56,342 ಖಾಲಿ ಹುದ್ದೆಗಳ ಭರ್ತಿಯಲ್ಲಿ 15% ಒಳ ಮೀಸಲಾತಿ ಸ್ಪಷ್ಟ ಜಾರಿಗೊಳಿಸುವಂತೆ ಸರ್ಕಾರಕ್ಕೆ ಆಗ್ರಹ ಮಾಡಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯವಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಒಳ ಮೀಸಲಾತಿ ಅನುಷ್ಠಾನ ವಿಳಂಬವಾಗಿರುವುದು ಸಮುದಾಯದಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ದಿನಾಂಕ 26.02.2026ರ ಸಚಿವ ಸಂಪುಟ ನಿರ್ಣಯದಂತೆ ಹೊರಡಿಸಿದ ಸರ್ಕಾರದ ಆದೇಶ ಸಂಖ್ಯೆ ಸಿಆ ಸುಇ-1ಸೇಹಿಮ 2026, ದಿನಾಂಕ 27.02.2026 ಮೂಲಕ 56,342 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶದಲ್ಲಿ ಶೇಕಡಾ 15 ಪರಿಶಿಷ್ಟ ಜಾತಿ ಹಾಗೂ ಶೇಕಡಾ 3 ಪರಿಶಿಷ್ಟ ಪಂಗಡ ಮೀಸಲಾತಿ ಉಲ್ಲೇಖವಾಗಿದ್ದರೂ, ಒಳ ಮೀಸಲಾತಿಯ ಉಪವರ್ಗೀಕರಣವನ್ನು ಸ್ಪಷ್ಟವಾಗಿ ಜಾರಿಗೊಳಿಸಿಲ್ಲ ಎಂಬುದು ಗಮನಾರ್ಹವಾಗಿದೆ.
ಉಚ್ಚ ನ್ಯಾಯಾಲಯದ ಮಧ್ಯಂತರ ತೀರ್ಪಿನಂತೆ ಒಟ್ಟು ಮೀಸಲಾತಿಯನ್ನು 56%ರಿಂದ 50%ಕ್ಕೆ ನಿಗದಿಪಡಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿರುವುದು ತಿಳಿದುಬಂದಿದೆ. ಆದರೆ ಒಳ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ತಡೆಯಾಜ್ಞೆ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಗಳಲ್ಲಿ, ಸರ್ಕಾರ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ ಸಕಇ-8 ಎಸ್ಎಲ್‌ಪಿ 2024 (ಭಾ-1), ದಿನಾಂಕ 25.08.2025 ಹಾಗೂ ಸಿಆಸುಇ-2 ಸೇಹಿಮ 2025, ದಿನಾಂಕ 03.09.2025 ರ ಅನ್ವಯ 15% ಒಳ ಮೀಸಲಾತಿ ಉಪವರ್ಗೀಕರಣವನ್ನು ತಕ್ಷಣ ಜಾರಿಗೊಳಿಸಬೇಕೆಂದು ಮಾದಿಗ ಸಮುದಾಯದ ಸಚಿವರು, ಶಾಸಕರು, ಮಾಜಿ ಸಚಿವರು, ಸಂಸದರು ಹಾಗೂ ಸಮುದಾಯ ಪ್ರಮುಖರು ಒತ್ತಾಯಿಸಿದ್ದಾರೆ.
ಪ್ರಮುಖ ಹಕ್ಕೊತ್ತಾಯಗಳು:
56,342 ಖಾಲಿ ಹುದ್ದೆಗಳ ಭರ್ತಿಯಲ್ಲಿ 15% ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಸ್ಪಷ್ಟವಾಗಿ ಅನ್ವಯಿಸಬೇಕು.
ಸರ್ಕಾರದ ಆದೇಶಗಳ ಪ್ರಕಾರ ಒಳ ಮೀಸಲಾತಿ ಉಪವರ್ಗೀಕರಣ ಜಾರಿಗೊಳಿಸಿ, ಪರಿಷ್ಕೃತ ರೋಸ್ಟರ್ ಪ್ರಕಟಿಸಬೇಕು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳಿಗೆ ಉಪಗುಂಪುಗಳವಾರು ಹಂಚಿಕೆ ಮಾಡಿ ನೇಮಕಾತಿ ಕೈಗೊಳ್ಳಬೇಕು.
ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಪರಿಶಿಷ್ಟ ಜಾತಿಗಳಿಗೆ 2% ಹಾಗೂ ಪರಿಶಿಷ್ಟ ಪಂಗಡಗಳಿಗೆ 4% ಹುದ್ದೆಗಳನ್ನು ಪ್ರತ್ಯೇಕವಾಗಿ ಪರಿಗಣಿಸುವ ಕುರಿತು ಸ್ಪಷ್ಟ ನಿರ್ದೇಶನ ನೀಡಬೇಕು.
ಸಾಮಾಜಿಕ ನ್ಯಾಯವು ಘೋಷಣೆಯಲ್ಲಿ ಅಲ್ಲ, ಅನುಷ್ಠಾನದಲ್ಲಿ ಜೀವಂತವಾಗಿರಬೇಕು. 35 ವರ್ಷಗಳ ಹೋರಾಟದ ಫಲವಾಗಿ ದೊರೆತ ಒಳ ಮೀಸಲಾತಿ ನ್ಯಾಯವನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ತಕ್ಷಣ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
