ಸಮಗ್ರ ಸುದ್ದಿ

ಬೇಸಿಗೆಯಲ್ಲಿ ನೀರಿನ ತೊಂದರೆ ಎದುರಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ: ತುಷಾರ್ ಗಿರಿನಾಥ್ ಸೂಚನೆ |ಅಂತರ್ಜಲ ಕುಸಿತ ಹೆಚ್ಚಾಗಿರುವ 65 ವಾರ್ಡ್‌ಗಳಿಗೆ ವಿಶೇಷ ಕಾರ್ಯಯೋಜನೆ

Share

ಬೆಂಗಳೂರು:ಮುಂಬರುವ ಬೇಸಿಗೆ ಕಾಲದಲ್ಲಿ ಬೆಂಗಳೂರು ನಗರ ಹಾಗೂ ಹೊಸದಾಗಿ ಜಿಬಿಎ ಗೆ ಸೇರ್ಪಡೆಯಾಗಿರುವ ವಾರ್ಡ್ ಗಳಲ್ಲಿ ನೀರಿನ ಕೊರತೆ ಉಂಟಾಗದೆ ಇರುವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಅವರು ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಬೆಂಗಳೂರು ಜಲಮಂಡಳಿ ಕೇಂದ್ರ ಕಛೇರಿಯಲ್ಲಿ ಪರಿಶೀಲನಾ ಸಭೆ ನಡೆಸಿ, ನಗರದ ಯಾವುದೇ ಭಾಗದಲ್ಲೂ ನೀರಿನ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಭಾರತೀಯ ವಿಜ್ಞಾನ ಸಂಸ್ಥೆ ನೀಡಿದ ವರದಿಯ ಪ್ರಕಾರ ನಗರದ ಕೆಲವು ಹೊರವಲಯ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿತದ ಸಾಧ್ಯತೆ ಇರುವುದನ್ನು ಉಲ್ಲೇಖಿಸಿದ ಕಾರ್ಯದರ್ಶಿಗಳು, ಪರಿಸ್ಥಿತಿ ಗಂಭೀರವಾಗುವ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಬೇಸಿಗೆ ಗರಿಷ್ಠ ಅವಧಿಗೆ ಮುನ್ನ ಹೊಸ ನೀರು ಸಂಪರ್ಕಗಳ ಪ್ರಕ್ರಿಯೆ ವೇಗಗೊಳಿಸಿ, ಅಗತ್ಯ ಮೂಲಸೌಕರ್ಯವನ್ನು ಸಿದ್ಧಪಡಿಸಬೇಕು. ನಗರಾದ್ಯಂತ ಇರುವ ರಿವರ್ಸ್ ಆಸ್ಮೋಸಿಸ್ ಘಟಕಗಳು ಶೇ.100 ಕಾರ್ಯನಿರ್ವಹಿಸುವಂತೆ ತಕ್ಷಣ ದುರಸ್ತಿ ಮತ್ತು ಮೇಲ್ವಿಚಾರಣೆ ಮಾಡಬೇಕು.

ಅಂತರ್ಜಲ ಕುಸಿಯುವ ಸಾಧ್ಯತೆ ಇರುವ 65 ವಾರ್ಡ್‌ಗಳನ್ನು ಗ್ರೇಟರ್ ಬೆಂಗಳೂರು ಏರಿಯಾ ವ್ಯಾಪ್ತಿಯ ಐದು ವಲಯಗಳಿಗೆ ವಿಂಗಡಿಸಿ, ಪ್ರತಿ ವಾರ್ಡ್‌ಗೆ ಪ್ರತ್ಯೇಕ ಅಭಿಯಂತರರನ್ನು ನಿಯೋಜಿಸುವುದು. ಅವರು ಕಚೇರಿಯಲ್ಲಿರದೆ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಮಿನಿ ಟ್ಯಾಂಕ್ ಗಳು, ಬೋರ್ ವೆಲ್ ಗಳಿಗೆ ಐಓಟಿ, ಹೊಸ ತಂತ್ರಜ್ಞಾನ ಅಳವಡಿಕೆಯ ಮೂಲಕ ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯ ನಂತರ ಮಾತನಾಡಿದ ಡಾ. ರಾಮ್ ಪ್ರಸಾತ್ ಮನೋಹರ್, ಐಐಎಸ್‌ ಸಿ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಬೇಸಿಗೆ ನಿರ್ವಹಣೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ನಾಗರಿಕರಿಗೆ ನೀರಿನ ತೊಂದರೆ ಉಂಟಾಗದಂತೆ ಜಲಮಂಡಳಿ ಸಂಪೂರ್ಣ ಸಜ್ಜಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್, ಪ್ರಧಾನ ಮುಖ್ಯ ಅಭಿಯಂತರರು, ಹಾಗೂ ಎಲ್ಲಾ ವಲಯಗಳ ಅಭಿಯಂತರರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page