ಮಾಗಡಿ: ಮಾಗಡಿ ಜನರಿಗೆ ಕಾವೇರಿ, ಹೇಮಾವತಿ ಹಾಗೂ ಎತ್ತಿನಹೊಳೆಯಿಂದಲೂ ನೀರು ಬರುತ್ತಿದ್ದು, ನೀರಿನ ಅದೃಷ್ಟವಿದೆ. ಇದಕ್ಕೆ ಅಗತ್ಯವಿರುವ ಟೆಂಡರ್ ಗಳನ್ನು ಈಗಾಗಲೇ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಮಾಗಡಿಯಲ್ಲಿ ಬುಧವಾರ ನಡೆದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
ಸತ್ತೇಗಾಲದಿಂದ ಇಗ್ಗಲೂರಿಗೆ 26 ಕಿ.ಮೀ, ಇಗ್ಗಲೂರಿನಿಂದ ಮೊಗೇನಹಳ್ಳಿಗೆ 58 ಕಿ.ಮೀ. ಮೊಗೇನಹಳ್ಳಿಯಿಂದ ಕಣ್ವಕ್ಕೆ 6 ಕಿ.ಮೀ, ಕಣ್ವದಿಂದ ವೈ.ಜಿ. ಗುಡ್ಡಕ್ಕೆ 25 ಕಿ.ಮೀ ಸೇರಿ ಒಟ್ಟು 115 ಕಿ.ಮೀ ಮಾರ್ಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರನ್ನು ಪಂಪ್ ಮಾಡಿ ಹರಿಸಲಾಗುವುದು. ನಾವು ಅಂತರ್ಜಲ ಹೆಚ್ಚಳ ಮಾಡಲು ಈ ನೀರು ತರುತ್ತಿದ್ದೇವೆ. ಇದಕ್ಕೆ 160 ಎಚ್.ಪಿ ಪಂಪ್ ಮೂಲಕ 115 ಕಿ.ಮೀ ದೂರಕ್ಕೆ ಲಿಫ್ಟ್ ಮಾಡಲಾಗುತ್ತಿದೆ. ಆಮೂಲಕ ಈ ಭಾಗದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ರೈತರಿಗೆ ಶಕ್ತಿ ತುಂಬುವಂತಾಗುತ್ತದೆ.
ಬಡ ರೈತನ ಬದುಕಿಸಲು, ಸಹಾಯ ಮಾಡಲು ರೈತರ ಮಕ್ಕಳಿಗೆ ಈ ಚಿಂತನೆ ಬರಲಿಲ್ಲವೇ? ಜನರಿಂದ ಮತ ಹಾಕಿಸಿಕೊಂಡು ರಾಜಕಾರಣ ಮಾಡಿಕೊಂಡಿರುವುದಲ್ಲ. ಜನ ನಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದು, ಜನರ ಬದುಕಿನಲ್ಲಿ ಬದಲಾವಣೆ ತರಲು ಎಂದು ತಿಳಿಸಿದರು.
