ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕತೆ ಬಗ್ಗೆ ವಿಸ್ತೃತ ಚರ್ಚೆ ಅಗತ್ಯವಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಮಹಾನಗರಗಳ ಅಭಿವೃದ್ಧಿ ಆಗಬೇಕು. ಇದಕ್ಕಾಗಿ ಸರ್ಕಾರ ಬೃಹತ್ ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಪ್ರತ್ಯೇಕ ಮಹಾನಗರ ಪಾಲಿಕೆಗಳ ರಚನೆಯಿಂದ ಆದಾಯ ವೃದ್ಧಿ, ಹೆಚ್ಚಿನ ಅಭಿವೃದ್ಧಿಗೆ ಅನುಕೂಲ ಆಗುತ್ತದೆ ಎಂಬ ನಿರೀಕ್ಷೆ ಅಷ್ಟು ಸಮಂಜಸವಲ್ಲ. ಯಾವುದಕ್ಕೂ ಈ ಬಗ್ಗೆ ಎಲ್ಲಾ ಆಯಾಮಗಳಲ್ಲೂ ಚರ್ಚೆ ಆಗಬೇಕು ಎಂದರು.
ದೆಹಲಿಯಲ್ಲಿ ಮೂರು ಮಹಾನಗರ ಪಾಲಿಕೆ ಸೃಷ್ಟಿಸಲಾಯಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜಿಸಲಾಯಿತು. ಆದರೆ, ಅದೆಷ್ಟು ಫಲಪ್ರದವಾಗಿದೆ ಎಂಬುದನ್ನು ನೋಡಬೇಕಾಗುತ್ತದೆ ಎಂದ ಸಚಿವರು, ಆದರೆ, ಸರ್ಕಾರ ಮಹಾನಗರಗಳ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಸ್ಪಂದಿಸಬೇಕಾಗುತ್ತದೆ ಎಂದರು.
‘ಗ್ರೇಟರ್ ಬೆಂಗಳೂರು’ ಎಂದು ಕರೆದರು. ಆದರೆ ಆಗಿದ್ದೇನು? ಎಂದು ಪ್ರಶ್ನಿಸಿದ ಜೋಶಿ, ಹುಬ್ಬಳ್ಳಿ-ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ಗಹನ ಚರ್ಚೆ, ಆಲೋಚನೆ ಅಗತ್ಯ. ಈ ಸಂಬಂಧ ಸಾಧಕ – ಬಾಧಕಗಳ ಚಿಂತನೆ ಅತ್ಯಗತ್ಯವಾಗಿದೆ ಎಂದರು.
