ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ನಾಳೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಾರ್ವಜನಿಕ ಸಂಪರ್ಕ ಸಭೆ ನಡೆಸಿ ನಾಗರಿಕರ ಅಹವಾಲುಗಳನ್ನು ಖುದ್ದಾಗಿ ಆಲಿಸಲಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಕೇಂದ್ರ ನಗರ ಪಾಲಿಕೆ ಹಾಗೂ ಪೂರ್ವ ನಗರ ಪಾಲಿಕೆಗಳಲ್ಲಿ ಈಗಾಗಲೇ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗಿದ್ದು, ನಾಗರೀಕರಿಂದ ಅದಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಅದೇ ಕ್ರಮದಲ್ಲಿ ನಾಳೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ವಿವಿಧ ಸ್ಥಳಗಳು ಹಾಗೂ ಕಚೇರಿಗಳಿಗೆ ಭೇಟಿ ನೀಡಿದ ಬಳಿಕ, ಮಲ್ಲೇಶ್ವರಂನ ಐಪಿಪಿ ಕಛೇರಿಯ ಸಭಾಂಗಣದಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5.00 ಗಂಟೆಯವರೆಗೆ ಸಾರ್ವಜನಿಕ ಸಂಪರ್ಕ ಸಭೆ ನಡೆಯಲಿದೆ.
ಅದೇ ರೀತಿ, ಉಳಿದೆರಡು ನಗರ ಪಾಲಿಕೆಗಳಲ್ಲಿ ಮಾರ್ಚ್ 10 ರಂದು ಉತ್ತರ ನಗರ ಪಾಲಿಕೆ ಹಾಗೂ ಮಾರ್ಚ್ 12 ರಂದು ದಕ್ಷಿಣ ನಗರ ಪಾಲಿಕೆಗಳಲ್ಲಿ ಸಾರ್ವಜನಿಕರ ಅಹವಾಲುಗಳು ಮತ್ತು ಮನವಿಗಳನ್ನು ನೇರವಾಗಿ ಸ್ವೀಕರಿಸಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
ಈ ಸಭೆಗಳಲ್ಲಿ ಸಾರ್ವಜನಿಕರಿಂದ ಮೂಲಸೌಕರ್ಯ, ರಸ್ತೆ, ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಒಳಚರಂಡಿ ಸೇರಿದಂತೆ ಇತರ ಅಹವಾಲುಗಳನ್ನು ಖುದ್ದಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಂಡು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸೂಚಿಸಲಾಗುವುದು.
ಸಾರ್ವಜನಿಕ ಸಂಪರ್ಕ ಸಭೆಯ ವೇಳೆ ನಗರ ಪಾಲಿಕೆಯ ಆಯುಕ್ತರು, ಅಭಿವೃದ್ಧಿ ಹಾಗೂ ಕಂದಾಯ ಅಪರ ಆಯುಕ್ತರುಗಳು, ಜಂಟಿ ಆಯುಕ್ತರುಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ನಾಗರಿಕರು, ಸಂಘ-ಸಂಸ್ಥೆಗಳು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಅಹವಾಲುಗಳು ಮತ್ತು ಮನವಿಗಳೊಂದಿಗೆ ಸಾರ್ವಜನಿಕ ಸಂಪರ್ಕ ಸಭೆಗೆ ಹಾಜರಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
