ಸಮಗ್ರ ಸುದ್ದಿ

ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಮಾಧ್ಯಮ ಹಬ್ಬ|ಪತ್ರಕರ್ತರಾಗಲು ಓದು ಮತ್ತು ಅಧ್ಯಯನ ಅತ್ಯವಶ್ಯಕ- ಕೆ.ವಿ.ಪ್ರಭಾಕರ್

Share

ಬೆಂಗಳೂರು:ಪತ್ರಕರ್ತರಾಗಲು ಹೊರಟಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಓದು ಮತ್ತು ಅಧ್ಯಯನದಲ್ಲಿ ನಿರಂತರವಾಗಿ ನಿರತರಾಗುವುದು ಅತ್ಯಂತ ಅವಶ್ಯಕ. ಜೊತೆಗೆ ತಾಳ್ಮೆ ಮತ್ತು ಸ್ವತಂತ್ರ ಚಿಂತನೆಯನ್ನು ಹೊಂದಬೇಕು ಎಂದು ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಬೆಂಗಳೂರು ವಿಶ್ವವಿದ್ಯಾನಿಲಯ, ಜ್ಞಾನಭಾರತಿ ಸಹಭಾಗಿತ್ವದಲ್ಲಿ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಡಬ್ಲ್ಯೂ.ಬಿ.ಸಿ ಸಭಾಂಗಣದಲ್ಲಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಮಾಧ್ಯಮ ಹಬ್ಬ-2026 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮ ಲೋಕದಲ್ಲಿ ಸತ್ಯವನ್ನು ಬೂದುಗಾಜು ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿರುವ ಇಂತಹ ಕಾಲದಲ್ಲಿ ಭಾವೀ ಪತ್ರಕರ್ತರಿಗೆ ಇಂತಹ ಕಾರ್ಯಾಗಾರ ತೀರಾ ಅತ್ಯಗತ್ಯವಾಗಿದೆ.

ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು. ಅವರ ಕಾಲದಲ್ಲಿ ಪತ್ರಿಕೋದ್ಯಮಕ್ಕೆ ಹಣದ ಬಡತನವಿತ್ತು. ಆದರೆ ಸತ್ಯಕ್ಕೆ ಬಡತನವಿರಲಿಲ್ಲ. ಆದರೆ ಹಣದ ಬಡತನದಿಂದ ಹೊರ ಬಂದಿರುವ ಪತ್ರಿಕೋದ್ಯಮ ಇಂದು ಸತ್ಯದ ಬಡತನಕ್ಕೆ ಜಾರಿದೆ. ಮಾಧ್ಯಮಗಳು ನಿರ್ಭೀತಿಯಿಂದ ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡುವ ಜೊತೆಗೆ ನೊಂದವರು, ಶೋಷಿತರು, ರೈತರು ಮತ್ತು ಬಡವರ ಪರವಾಗಿ ಕೆಲಸ ಮಾಡಬೇಕೆಂದರು.

ಇತ್ತೀಚೆಗೆ ಪತ್ರಿಕೋದ್ಯಮದ ಮೇಲೆ ಆಕರ್ಷಣೆ ಮತ್ತು ಸೆಳೆತ ಕಡಿಮೆ ಆಗುತ್ತಿರುವುದರಿಂದ ಬಹಳಷ್ಟು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಪತ್ರಿಕೋದ್ಯಮ ವಿಭಾಗವನ್ನು ಮುಚ್ಚಲಾಗುತ್ತಿದೆ ಎಂದು ಕೇಳಿ ಬೇಸರವಾಯಿತು. ಗ್ರಹಿಕೆ ಎಂಬುದು ಪತ್ರಕರ್ತರಾದವರಿಗೆ ಬಹಳ ಮುಖ್ಯವಾಗುತ್ತದೆ. ಸುದ್ದಿಯಲ್ಲಿ ಯಾವುದಕ್ಕೆ ಒತ್ತು ನೀಡಬೇಕು ಎಂಬುದನ್ನು ಗ್ರಹಿಸುವ ಶಕ್ತಿ ಪತ್ರಕರ್ತರಿಗೆ ಇರಬೇಕು.

ಮೊನ್ನೆ ಹಾವೇರಿಯಲ್ಲಿ ಸುಮಾರು ಒಂದುವರೆ ಲಕ್ಷ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ನಡೆಯಿತು. ಈ ಸಮಾರಂಭದ ವರದಿ ಮಾಡಬೇಕಾದ ಪತ್ರಕರ್ತ ಎಷ್ಟು ಜನರಿಗೆ ಸರ್ಕಾರ ಹಕ್ಕು ಪತ್ರ ನೀಡಿತು?, ಅದು ಎಷ್ಟು ಜನರಿಗೆ ತಲುಪಿದೆ?, ಯಾರಿಗೆ ತಲುಪಿಲ್ಲ? ಎಂಬುದನ್ನೆಲ್ಲಾ ಗ್ರಹಿಸಿ ಸುದ್ದಿ ಮಾಡಬೇಕಾಗಿತ್ತು. ಆದರೆ ಅಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಎಂ ಮತ್ತು ಡಿಸಿಎಂ ಹಸ್ತಲಾಘವ ಮಾಡಲಿಲ್ಲ, ಹಾಗೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ ಎಂಬುದನ್ನೇ ಹೈಲೈಟ್ ಮಾಡುವ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಲಿಲ್ಲ. ಹಾಗಾಗಿ ಸುದ್ದಿ ಗ್ರಹಿಕೆಯ ವಿಷಯವನ್ನೇ ಪತ್ರಕರ್ತರು ಮರೆತು ಹೋಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಪತ್ರಕರ್ತರಾದ ವಡ್ಡರ್ಸೆ ರಘರಾಮ ಶೆಟ್ಟಿ, ಖಾದ್ರಿ ಶಾಮಣ್ಣ, ಪಿ. ಲಂಕೇಶ್, ಮೊಹರೆ ಹಣಮಂತರಾಯ, ಟಿಯೇಸ್ಸಾರ್ ಮುಂತಾದವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು, ಇವರೆಲ್ಲರೂ ಪತ್ರಿಕಾ ವೃತ್ತಿಯ ಪ್ರಜ್ಞೆಯನ್ನು ರೂಪಿಸುವ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ರೂಪಿಸಿದವರು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು “ಮೀಡಿಯಾಎಥಿಕ್ಸ್” ವಿಷಯದ ಬಗ್ಗೆ ಮಾತನಾಡಿ, ನಮಗೆ ಅನ್ನ ನೀಡುತ್ತಿರುವ ವೃತ್ತಿಯ ಬಗ್ಗೆ ಋಣಾತ್ಮಕವಾಗಿ ಮಾತನಾಡಬೇಕಾಗುತ್ತದೆ ಎಂಬ ಕಾರಣದಿಂದ ನಾನು ಇತ್ತೀಚೆಗೆ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಿದ್ದೇನೆ. ಮಾಧ್ಯಮ ಹಬ್ಬದ ಮೂಲಕ ಮಾಧ್ಯಮವನ್ನು ಸಂಭ್ರಮಿಸಲಾಗುತ್ತಿದೆ ಎಂದು ಹೇಳಿದ್ದರಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿದೆ.

ಭಾವಿ ಪತ್ರಕರ್ತರಾದ ನಿಮಗೆ ನಾನು ಈ ದಿನಗಳಲ್ಲಿ ಮಾಧ್ಯಮಗಳಲ್ಲಾಗುತ್ತಿರುವ ನಕಾರಾತ್ಮಕ ಗುಣಗಳನ್ನು ಹೇಳಿ ನಿಮನ್ನು ನಿರುತ್ಸಾಹಗೊಳಿಸುವುದಿಲ್ಲ. ಬದಲಿಗೆ ಈ ಕ್ಷೇತ್ರಕ್ಕೆ ಕಾಲಿಡುವ ಮುನ್ನ ನೀವು ಯಾವೆಲ್ಲಾ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತಿಳಿಸಲು ಬಯಸುತ್ತೇನೆ ಎಂದು ತಿಳಿಸಿದರು.

ಒಳ್ಳೆಯ ಪತ್ರಕರ್ತನಾಗಬೇಕಾದರೆ ಯಾವೆಲ್ಲಾ ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಏಳು ಪಾತಕಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದ ಅವರು, ಅಜ್ಞಾನಿಗಳಾಗಬೇಡಿ, ಜ್ಞಾನವನ್ನು ಗಳಿಸಿಕೊಳ್ಳಿ, ಬೇಜವಾಬ್ದಾರಿಗಳಾಗಬೇಡಿ, ಸಾಮಾಜಿಕ ಜವಾಬ್ದಾರಿಯನ್ನು ರೂಢಿಸಿಕೊಳ್ಳಿ, ನೀವು ಪೂರ್ವಾಗ್ರಹ ಪೀಡಿತರಾಗಬೇಡಿ, ಮುಕ್ತವಾಗಿ ಆಲೋಚನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಿ, ಅಸೂಕ್ಷ್ಮರಾಗಬೇಡಿ, ಸೂಕ್ಷ್ಮರಾಗಿ, ಸಿನಿಕರಾಗಬೇಡಿ, ಯಾವತ್ತೂ ಕ್ರಿಯಾಶೀಲರಾಗಿರಿ, ನಂಬಿಕೆಗೆ ದ್ರೋಹ ಮಾಡಬೇಡಿ, ನಂಬಿಕೆಯನ್ನು ಉಳಿಸಿಕೊಳ್ಳಿ, ಆತ್ಮರತಿಗೆ ಈಡಾಗುವ ಮೂಲಕ ನಾನು ದೊಡ್ಡ ಸೆಲಬ್ರಿಟಿ ಎಂದು ಬೀಗಬೇಡಿ, ಯಾವಾಗಲೂ ಸಾಮಾನ್ಯರಂತೆ ಇರಿ ಎಂಬ ಸಲಹೆಯನ್ನು ನೀಡಿದರು.

ಪತ್ರಕರ್ತರಾಗಬೇಕು ಎಂಬುವವರು ಒಂದು ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಯನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೆ ಕನಿಷ್ಟ ಒಂದು ತಿಂಗಳು ಓದಬೇಕು. ಆ ನಂತರವೂ ಪತ್ರಿಕೆಯನ್ನು ಓದಬೇಕು ಎಂದು ಯಾರಿಗೆ ಅನಿಸುತ್ತದೆಯೊ ಅವರು ಪತ್ರಕರ್ತರಾಗಬಹುದು ಎಂದರು.

ನಾನು ತಿಂಡಿ ಪೊಟ್ಟಣ ಕಟ್ಟಿಕೊಟ್ಟ ಪೇಪರ್ ಗಳನ್ನೂ ಕೂಡ ನಾನು ಓದುತ್ತಿದ್ದೆ. 800 ರಿಂದ 900 ಪದದ ಅಂಕಣ ಬರೆಯಲು ನಾನು ಕನಿಷ್ಟ 8 ರಿಂದ 10 ಸಾವಿರ ಪದಗಳಷ್ಟು ಓದುತ್ತಿದೆ. ಓದಿಗಿಂತ ದೊಡ್ಡ ಅರ್ಹತೆ ಪತ್ರಕರ್ತನಾದವನಿಗೆ ಇಲ್ಲ. ಆದ್ದರಿಂದ ಪತ್ರಕರ್ತರಾಗಬೇಕೆಂಬ ಆಸೆಯನ್ನು ಹೊಂದಿರುವ ನೀವು ಓದಿನ ಹಸಿವನ್ನು ಬೆಳೆಸಿಕೊಳ್ಳಬೇಕು, ಓದು ಒಂದೇ ನಿಮ್ಮನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಲಿದೆ ಎಂದರು.

ಮೊದಲ ಸಲ ಪೆನ್ ಅಥವಾ ಮೈಕ್ ಅನ್ನು ಹಿಡಿದಾಗ ಇದ್ದ ಉತ್ಸಾಹ ಕೊನೆಯ ತನಕ ಉಳಿಸಿಕೊಳ್ಳಬೇಕು. ಹಾಗೆಯೇ ನಮ್ಮ ಸುತ್ತಮುತ್ತ ನಡೆಯುವಂತಹ ಸಾಮಾಜಿಕ ಕಳಕಳಿ ಹೊಂದಿರುವ ವಿಷಯಗಳಲ್ಲಿ ನಿಮ್ಮ ಮನ ಕರಗಬೇಕು. ಅಲ್ಲದೆ ಸಜ್ಜನರ ಜೊತೆ ಒಡನಾಟವನ್ನು ಇಟ್ಟುಕೊಳ್ಳಬೇಕು. ನಿಮ್ಮನ್ನು ನಂಬಿ ಸುದ್ದಿ ನೀಡುವವರ ನಂಬಿಕೆಯನ್ನು ಉಳಿಸಿಕೊಳ್ಳಿ. ಸುದ್ದಿಯ ಮೂಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು.

ಅಂದಿನ ಕಾಲದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ವಿಫಲವಾದಾಗ ಜನಸಾಮಾನ್ಯರು ಮಾಧ್ಯಮ ರಂಗದ ಕಡೆ ನೋಡೋದು. ಅವರಿಗೆ ಮಾಧ್ಯಮ ರಂಗದ ಮೇಲೆ ಭರವಸೆ ಇತ್ತು. ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದರ ವಿರುದ್ಧ ಹೋರಾಡಿದವರು ಮಾಧ್ಯಮ ಕ್ಷೇತ್ರದವರು. ರಫೆಲ್, ಬೋಫರ್ಸ್ ನಂತಹ ಸುದ್ದಿಗಳು ಪತ್ರಿಕೆಗಳಿಗೆ ಸಿಕ್ಕಾಗ, ಅದನ್ನು ಮಾರಾಟ ಮಾಡಿಕೊಂಡಿದ್ದರೆ ನೂರಾರು ಕೋಟಿ ರೂ. ಬರುತ್ತಿತ್ತು. ಆದರೆ ಆಗಿನ ಕಾಲದಲ್ಲಿ ಪತ್ರಿಕಾರಂಗವು ನೈತಿಕತೆಗೆ ಹೆಚ್ಚಿನ ಬೆಲೆ ನೀಡಿತ್ತು, ಹಾಗೆಯೇ ನಂಬಿಕೆಗೆ ಅರ್ಹವಾಗಿತ್ತು ಎಂದು ಅಭಿಪ್ರಾಯ ಪಟ್ಟರು.

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ರಮೇಶ್. ಬಿ ಅವರು ಮಾತನಾಡಿ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಡಲು ಬೇಕಾದಂತಹ ಜ್ಞಾನ, ಕೌಶಲ್ಯವನ್ನು ನೀಡುವ ಸಲುವಾಗಿ ಹಿರಿಯ ಪತ್ರಕರ್ತರೊಂದಿಗೆ ಸಂವಾದವನ್ನು ಏರ್ಪಡಿಸುವಂತಹ ಕಾರ್ಯಾಗಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಡೆಸಿಕೊಡುತ್ತಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು, ಮಾಧ್ಯಮ ರಂಗಕ್ಕೆ ಪ್ರವೇಶಿಸುವುದಕ್ಕೂ ಮುಂಚೆ ಪತ್ರಿಕೋದ್ಯಮದ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ನುರಿತ ಅನುಭವಿ ಪತ್ರಕರ್ತರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಇಂದು ಮಧ್ಯಾಹ್ನದಿಂದ ನಾಳೆಯತನಕ ನಡೆಯುವ ಸಂವಾದ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿ, ಕಾರ್ಯಾಗಾರದ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಸೌಮ್ಯ ಅವರು ಸ್ವಾಗತಿಸಿದರು. ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಂಯೋಜಕರಾದ ಪ್ರವೀಣ್ ಕುಮಾರ್ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯೇಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ ನವೀನ್ ಜೋಸೆಫ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷರಾದ ಡಾ.ತಾಂಡವ ಗೌಡ ಟಿ.ಎನ್, ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ.ಬಿ.ಶೈಲಶ್ರೀ, ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ಸಂಯೋಜಕರಾದ ಪ್ರೊ. ವಾಹಿನಿ ಅರವಿಂದ್, ಕರ್ನಾಟಕ ಎಸ್‍ಸಿ -ಎಸ್‍ಟಿ ಅಲೆಮಾರಿ ಅಭಿವೃದ್ಧಿ ನಿಮಗದ ಅಧ್ಯಕ್ಷರಾದ ಪಲ್ಲವಿ ಜಿ ಸೇರಿದಂತೆ ಮತ್ತಿತರ ಹಿರಿಯ ಮಾಧ್ಯಮ ಪತ್ರತಿನಿಧಿಗಳು ಉಪಸ್ಥಿತರಿದ್ದರು.


Share

You cannot copy content of this page