ಸಮಗ್ರ ಸುದ್ದಿ

ಹೋಳಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿವಾರಣೆ: ಯಶವಂತಪುರ – ಬಿಕಾನೆರ್ ನಡುವೆ ವಿಶೇಷ ರೈಲು ಸಂಚಾರ

Share

ಬೆಂಗಳೂರು: ಹೋಳಿ ಹಬ್ಬದ ನಂತರದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಬೆಂಗಳೂರಿನ ಯಶವಂತಪುರ ಮತ್ತು ರಾಜಸ್ಥಾನದ ಬಿಕಾನೆರ್ ನಡುವೆ ಎರಡೂ ದಿಕ್ಕುಗಳಲ್ಲಿ ತಲಾ ಮೂರು ಟ್ರಿಪ್’ಗಳ ವಿಶೇಷ ರೈಲುಗಳನ್ನು ಓಡಿಸಲಿದೆ.

ರೈಲು ಸಂಖ್ಯೆ 06543 (ಯಶವಂತಪುರ – ಬಿಕಾನೆರ್):

ಮಾರ್ಚ್ 11, 18 ಮತ್ತು 25 ರಂದು (ಬುಧವಾರ) ಬೆಳಿಗ್ಗೆ 07:00 ಗಂಟೆಗೆ ಯಶವಂತಪುರದಿಂದ ಹೊರಡಲಿರುವ ಈ ರೈಲು, ಶುಕ್ರವಾರ ಮಧ್ಯಾಹ್ನ 03:00 ಗಂಟೆಗೆ ಬಿಕಾನೆರ್ ತಲುಪಲಿದೆ. ಮರು ಪ್ರಯಾಣದಲ್ಲಿ, ರೈಲು ಸಂಖ್ಯೆ 06544 (ಬಿಕಾನೆರ್ – ಯಶವಂತಪುರ): ಈ ರೈಲು ಮಾರ್ಚ್ 14, 21 ಮತ್ತು 28 ರಂದು (ಶನಿವಾರ) ಮಧ್ಯರಾತ್ರಿ 01:00 ಗಂಟೆಗೆ ಬಿಕಾನೆರ್ ನಿಂದ ಹೊರಟು, ಭಾನುವಾರ ಬೆಳಗಿನ ಜಾವ 04:00 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕಿರಲೋಸ್ಕರವಾಡಿ, ಕರಾಡ್, ಸತಾರಾ, ಪುಣೆ, ಲೋನಾವಾಲಾ, ಕಲ್ಯಾಣ್, ಭಿವಂಡಿ ರೋಡ್, ವಸಾಯಿ ರೋಡ್, ವಾಪಿ, ವಲ್ಸಾದ್, ಸೂರತ್, ವಡೋದರಾ, ಗೋಧ್ರಾ, ದಾಹೋದ್, ಬಾಮ್ನಿಯಾ, ರತ್ಲಂ, ನಾಗ್ಡಾ, ಭವಾನಿ ಮಂಡಿ, ಕೋಟಾ, ಸವಾಯಿ ಮಾಧೋಪುರ್, ದುರ್ಗಾಪುರ, ಜೈಪುರ, ರಿಂಗಸ್, ಸಿಕರ್, ಚುರು, ರತ್ನಗಢ ಮತ್ತು ಶ್ರೀ ಡುಂಗರಗಢ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಒಟ್ಟು 23 ಬೋಗಿಗಳನ್ನು ಹೊಂದಿರುವ ಈ ರೈಲಿನಲ್ಲಿ 2 ಎಸಿ 2-ಟೈರ್, 3 ಎಸಿ 3-ಟೈರ್, 11 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ.

ಈ ವಿಶೇಷ ರೈಲುಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ತೆರೆಯಲಾಗಿದೆ. ಪ್ರಯಾಣಿಕರು ರೈಲ್ವೆ ನಿಲ್ದಾಣದ ಕೌಂಟರ್’ಗಳು, ಐಆರ್ ಸಿಟಿಸಿ ಅಧಿಕೃತ ವೆಬ್ ಸೈಟ್ ಅಥವಾ ರೈಲ್ಒನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ.


Share

You cannot copy content of this page