ಬೆಂಗಳೂರು: ಬಹುತೇಕ ಸುದ್ದಿ ಮನೆಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲು, ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದಿರುವವರಿಗೆ ಇಂದಿಗೂ ಅವಕಾಶ ವಿರಳವಾಗಿದೆ. ಏಕಮುಖಿ ವಾತಾವರಣ ನಿರ್ಮಾಣವಾಗಿದೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಾದಲ್ಲಿ ಸುದ್ದಿ ಮನೆಗಳ ಪರಿಸರ ಬಹುಮುಖಿಯಾಗುವ ಅಗತ್ಯವಿದೆ. ಎಲ್ಲ ಸಮುದಾಯದವರೆಗೂ ಪ್ರಾತಿನಿಧ್ಯ ನೀಡಬೇಕಾಗಿದೆ ಎಂದು ಹಿರಿಯ ಪತ್ರಕರ್ತರಾದ ಡಿ. ಉಮಾಪತಿ ಅವರು ಅಭಿಪ್ರಾಯಪಟ್ಟಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಡಾಕ್ಟರ್ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ, ಜ್ಞಾನಭಾರತಿ, ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ‘ಮಾಧ್ಯಮ ಹಬ್ಬ 2026’ ಕಾರ್ಯಾಗಾರದಲ್ಲಿ “ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ” ಕುರಿತು ಅವರು ಉಪನ್ಯಾಸವನ್ನು ನೀಡಿದರು.
ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವವರ ಸಾಮಾಜಿಕ ಹಿನ್ನೆಲೆಯು ಸುದ್ದಿಯ ಆಯ್ಕೆ, ಮಂಡನೆ ಮತ್ತು ನಿರೂಪಣೆಗಳನ್ನು ಅಗಾಧವಾಗಿ ಪ್ರಭಾವಿಸುತ್ತದೆ. ಸಮಾಜದ ಎಲ್ಲ ವರ್ಗಗಳಿಗೂ ಮಾಧ್ಯಮದ ಎಲ್ಲಾ ಮಟ್ಟದ ಸ್ಥಾನಗಳಲ್ಲಿಯೂಸಮಾನ ಪ್ರಾತಿನಿಧ್ಯ ದೊರೆಯದಿದ್ದಲ್ಲಿ ಅವು ಬಿತ್ತರಿಸುವ ಸುದ್ದಿ ಅಥವಾ ಅಭಿಪ್ರಾಯಗಳು ಏಕಮುಖಿಯಾಗಿಯೇ ಉಳಿಯಲಿವೆ. ಇದು ಪತ್ರಿಕೋದ್ಯಮದ ಮೂಲ ತತ್ವವಾದ ವಸ್ತುನಿಷ್ಠತೆಗೆ ವಿರುದ್ಧವಾದ ಮತ್ತು ಅಪಾಯಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.
ಆರೋಗ್ಯಕರ ಮಾಧ್ಯಮಗಳು ತಲೆಯೆತ್ತಬೇಕಿದ್ದರೆ ಪತ್ರಿಕೆಗಳ ಅರ್ಥವ್ಯವಸ್ಥೆಯ ಮಾದರಿಯು ಮಾರುಕಟ್ಟೆ ನಿರ್ದೇಶಿತ ಬಂಡವಾಳಶಾಹಿ ಆತ್ಮವನ್ನು ತ್ಯಜಿಸುವ ಜೊತೆ ಜೊತೆಗೆ ಬಹುತ್ವದ ಬಹುಗ್ರಹಿಕೆಗಳಿಗೆ ಸುದ್ದಿಮನೆಯಲ್ಲಿ ಜಾಗ ದೊರೆಯಬೇಕಿದೆ ಎಂದು ಹೇಳಿದರು. ಮಾಧ್ಯಮಗಳ ಪ್ರಸ್ತುತ ನಕಾರಾತ್ಮಕ ಚಿತ್ರಣ ಬದಲಾಗಬೇಕಾದರೆ, ಸಮಾಜದ ವಿವಿಧ ಹಿನ್ನೆಲೆಗಳಿಂದ ಬಂದ ಪತ್ರಕರ್ತರ ಒಳನೋಟಗಳಿಗೆ ಅವಕಾಶ ನೀಡುವ ಅಗತ್ಯವಿದೆ ಎಂದವರು ಪ್ರತಿಪಾದಿಸಿದರು.
ಬೃಹತ್ ಮಾಧ್ಯಮ ಸಂಸ್ಥೆಗಳಲ್ಲಿ ಇಂದು ಈ ವ್ಯವಸ್ಥೆಯು ಕಾಣ ಸಿಗುವಾಗ ಕೆಲವು ಸಮಾಜಮುಖಿ ಸುದ್ದಿ ವಾಹಿನಿಗಳು, ಡಿಜಿಟಲ್ ಮಾಧ್ಯಮಗಳು ಆರ್ಥಿಕ ಸಂಕಷ್ಟಗಳ ನಡುವೆಯೂ ತಮ್ಮ ವೃತ್ತಿ ನಿಷ್ಠೆಯನ್ನು ಕಾಪಾಡಿಕೊಂಡು ಮುಂದಕ್ಕೆ ಹೆಜ್ಜೆ ಇಡುತ್ತಿವೆ. ಅಂತಹ ಸುದ್ದಿ ವಾಹಿನಿಗಳಿಗೆ ಓದುಗರು, ವೀಕ್ಷಕರು ಬೆಂಬಲಿಸಬೇಕು. ಅದರಿಂದಾಗಿ ಕಾಲಕ್ರಮೇಣ ನೈಜ ಸಾಮಾಜಿಕ ನ್ಯಾಯ ಕಾಪಾಡುವ ವಸ್ತುನಿಷ್ಠ ಪತ್ರಿಕೋದ್ಯಮ ಮತ್ತೆ ತಲೆಯೆತ್ತಲು ಸಾಧ್ಯವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
