ಸಮಗ್ರ ಸುದ್ದಿ

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಸರ್ವತೋಮುಖ ಅಭಿವೃದ್ಧಿಗೆ ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಜಾರಿ – ಸಚಿವ ರಾಮಲಿಂಗಾರೆಡ್ಡಿ

Share

ಬೆಂಗಳೂರು:ಕರ್ನಾಟಕ ರಾಜ್ಯದ ಹೆಮ್ಮೆಯ ಸಾರಿಗೆ ಕೇಂದ್ರವಾಗಿರುವ ಬೆಂಗಳೂರಿನ ಮೆಜೆಸ್ಟಿಕ್ ಅಥವಾ ಕೆಂಪೇಗೌಡ ಬಸ್ ನಿಲ್ದಾಣವು ಶೀಘ್ರದಲ್ಲೇ ಅಂತರಾಷ್ಟ್ರೀಯ ದರ್ಜೆಯ ರೂಪ ಪಡೆಯಲಿದೆ. ಕಳೆದ 60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ನಿಲ್ದಾಣವನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮರು ಅಭಿವೃದ್ಧಿಪಡಿಸಲು ಸರ್ಕಾರವು ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ ಅವರು ತಿಳಿಸಿದರು.

ಮಂಗಳವಾರ ವಿಧಾನಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯರಾದ ಎಂ. ನಾಗರಾಜು ಅವರು ನಿಯಮ-330ರ ಅಡಿಯಲ್ಲಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವರು, ಅತಿ ದೊಡ್ಡ ಸಾರಿಗೆ ಕೇಂದ್ರ  ಈ ಯೋಜನೆಯು ಕೇವಲ ಬಸ್ ನಿಲ್ದಾಣಕ್ಕೆ ಸೀಮಿತವಾಗಿರದೆ, ಮೆಟ್ರೋ, ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸೇವೆಗಳನ್ನು ಒಂದೇ ಸೂರಿನಡಿ ಜೋಡಿಸುವ ಅಂತರಾಷ್ಟ್ರೀಯ ಮಟ್ಟದ ‘ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್’ ಆಗಿ ಅಭಿವೃದ್ಧಿಗೊಳ್ಳಲಿದೆ.

ಭೂಮಿಯ ಬಳಕೆ ಮತ್ತು ಹಂಚಿಕೆ: ಮೆಜೆಸ್ಟಿಕ್ ಪ್ರದೇಶವು ಒಟ್ಟು 40 ಎಕರೆ ವಿಸ್ತೀರ್ಣವನ್ನು ಹೊಂದಿದ್ದು 08 ಎಕರೆ ಬಿ.ಎಂ.ಆರ್.ಸಿ.ಎಲ್ (ಮೆಟ್ರೋ) ನಿಲ್ದಾಣಕ್ಕಾಗಿ ಮೀಸಲಿಡಲಾಗಿದೆ. 32 ಎಕರೆ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ನಿಲ್ದಾಣಗಳ ಸುಸಜ್ಜಿತ ಮರು ಅಭಿವೃದ್ಧಿ ಬಳಕೆಗೆ ಯೋಜಿಸಲಾಗಿದೆ ಎಂದರು.

ಸಿಂಗಾಪುರ ಮಾದರಿಯ ಹೈ-ಟೆಕ್ ವ್ಯವಸ್ಥೆ:

ಅಂತರಾಷ್ಟ್ರೀಯ ಬಸ್ ಸ್ಟೇಷನ್ ಮಾಡ್ಯೂಲ್ (ಸಿಂಗಾಪುರ ಮಾದರಿ) ಆಧಾರದ ಮೇಲೆ ಇದನ್ನು ನಿರ್ಮಿಸಲಾಗುವುದು. ಇದರಲ್ಲಿ ಹೈ-ಟೆಕ್ ಬಸ್ ನಿಲ್ದಾಣದೊಂದಿಗೆ ಬಹುಮಹಡಿ ವ್ಯಾಪಾರ ಸಂಕೀರ್ಣಗಳು, ವಿಶಾಲವಾದ ರಿಟೇಲ್ ಶಾಪಿಂಗ್ ಹಬ್‍ಗಳು ಮತ್ತು ಪ್ರಯಾಣಿಕರಿಗೆ ಬೇಕಾದ ಅತ್ಯಾಧುನಿಕ ಜೀವನಶೈಲಿ ಸೌಲಭ್ಯಗಳು ಲಭ್ಯವಿರುತ್ತವೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವ:

ಈ ಬೃಹತ್ ಯೋಜನೆಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಕೈಗೊಳ್ಳಲು ಸರ್ಕಾರವು ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ನೋಂದಾಯಿತ ಟ್ರಾನ್ಸಾಕ್ಷನ್ ಅಡ್ವೈಸರ್ ಆದ M/s. Resurgent India Limited ಅವರನ್ನು ನೇಮಕ ಮಾಡಲಾಗಿದ್ದು, ಅವರು ಈಗಾಗಲೇ ಯೋಜನೆಯ ರೂಪರೇಷೆ ಹಾಗೂ ಟೆಂಡರ್ ಪ್ರಕ್ರಿಯೆಯ ಕಾರ್ಯಗಳನ್ನು ಆರಂಭಿಸಿದ್ದಾರೆ.

ಪ್ರಯಾಣಿಕರ ಸುರಕ್ಷತೆ ಮತ್ತು ಪರ್ಯಾಯ ವ್ಯವಸ್ಥೆ:

ಅಭಿವೃದ್ಧಿ ಕಾರ್ಯಗಳು ನಡೆಯುವ ಹಂತದಲ್ಲಿ ಸುಮಾರು ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸರ್ಕಾರವು ಕ್ರಮಕೈಗೊಂಡಿದೆ. ನಗರದಲ್ಲಿರುವ ಹಾಲಿ ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ, ಟಿ.ಟಿ.ಎಂ.ಸಿ ಕೇಂದ್ರಗಳನ್ನು ಬಳಸಿ ಬಸ್‍ಗಳ ಕಾರ್ಯಾಚರಣೆಯನ್ನು ವಿಕೇಂದ್ರೀಕರಿಸಲಾಗುವುದು.

ಮೂಲಭೂತ ಸೌಕರ್ಯ:

ಕಾಮಗಾರಿ ನಡೆಯುವ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆಯಾಗಿ ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯಗಳು, ಆಸನ ವ್ಯವಸ್ಥೆ ಮತ್ತು ವಿಶೇಷವಾಗಿ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿಗಳನ್ನು ಒದಗಿಸಲಾಗುವುದು. ಮೆಟ್ರೋ ಮತ್ತು ಬಸ್ ನಿಲ್ದಾಣದ ನಡುವೆ ಪ್ರಯಾಣಿಸುವವರಿಗೆ ಅಡಚಣೆಯಾಗದಂತೆ ಅಗತ್ಯವಿರುವ ಕಡೆಗಳಲ್ಲಿ ಇಳಿಜಾರು, ರೈಲಿಂಗ್ ಹಾಗೂ ಸ್ಕೈ-ವಾಕ್‍ ಗಳನ್ನು ಸುರಕ್ಷತಾ ಬೇಲಿಯೊಂದಿಗೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

ಯೋಜನೆಯ ಪ್ರಗತಿ:

ಯೋಜನೆಯ ಇನ್‍ಸೆಪ್ಷನ್ ರಿಪೋರ್ಟ್ ಹಾಗೂ ಕಾನ್ಸೆಪ್ಟ್ ಪ್ಲಾನ್‍ಗಳು ಈಗಾಗಲೇ ಸಿದ್ಧಗೊಂಡಿದ್ದು, ಜನವರಿ 06, 2026 ರಂದು ನಡೆದ ಸಭೆಯಲ್ಲಿ ಇವುಗಳನ್ನು ಪರಿಶೀಲಿಸಲಾಗಿದೆ. 2025-26ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಆದ್ಯತೆಯ ಮೇಲೆ ಪರಿಗಣಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ.ಈ ಯೋಜನೆಯು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ನಗರದ ಹೃದಯಭಾಗಕ್ಕೆ ಆಧುನಿಕ ಮತ್ತು ಸುಂದರ ನೋಟವನ್ನು ನೀಡಲಿದೆ ಎಂದು ಸಚಿವರು ತಿಳಿಸಿದರು.


Share

You cannot copy content of this page